ಹಗರಿಬೊಮ್ಮನಹಳ್ಳಿ: ಪೊಲೀಸರ ಪೋಷಣೆಯಲ್ಲಿಯೇ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ಕ್ಷೇತ್ರ ವ್ಯಾಪ್ತಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯಲು ಅವಕಾಶ ನೀಡುವುದಿಲ್ಲ ಎಂದು ಶಾಸಕ ಕೆ.ನೇಮರಾಜ್‌ ನಾಯ್ಕ್ ತಿಳಿಸಿದರು.

ಪಟ್ಟಣದ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್‌ ಶುಕ್ರವಾರ ಸಂಜೆ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಹಿಂದೆ ಕ್ಷೇತ್ರದಲ್ಲಿ ಕ್ಯಾಸಿನೋ ಜೂಜಾಟ ನಿರಂತರವಾಗಿ ನಡೆದು ದುಡಿಯುವ ಯುವ ಸಮೂಹ ಹಾದಿ ತಪ್ಪಿದ ಪರಿಣಾಮವಾಗಿ ಬಹುತೇಕ ಕುಟುಂಬಗಳು ಬೀದಿ ಪಾಲಾಗಿದ್ದವು. ಯುವಕರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಯುವಕರು ವ್ಯಾಪಾರ ಮತ್ತು ಉದ್ದಿಮೆ ಕ್ಷೇತ್ರದಲ್ಲಿ ಶ್ರಮ ವಹಿಸಿದರೆ ಆರ್ಥಿಕವಾಗಿ ಸಬಲರಾಗುವ ಹೇರಳ ಅವಕಾಶಗಳು ಸಿಗುತ್ತವೆ ಎಂದು ಸಲಹೆ ನೀಡಿದರು.

ಹಗರಿಬೊಮ್ಮನಹಳ್ಳಿ ತಾಲೂಕು, ಕೃಷಿ ಸಹಿತ ಶಿಕ್ಷಣ, ವ್ಯಾಪಾರ ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ಮುನ್ನಡೆಯುತ್ತಿದೆ. ರೈತರ ಮತ್ತು ವ್ಯಾಪಾರಸ್ಥರ ಸದುಪಯೋಗಕ್ಕೆ ಪಟ್ಟಣದಲ್ಲಿ ವ್ಯಾಪಾರಿ ಭವನ ಕಟ್ಟಡ ನಿರ್ಮಿಸಲು ಒಂದು ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ವಿಜಯನಗರ ಜಿಲ್ಲಾಧ್ಯಕ್ಷ ಅಶ್ವಿನ್ ಕೊತಂಬ್ರಿ ಮಾತನಾಡಿ, ವ್ಯಾಪಾರಿಗಳು ತೀವ್ರ ಪೈಪೋಟಿ ನಡೆಸದೇ ರೈತರೊಂದಿಗೆ ಸಮನ್ವಯ ಸಾಧಿಸಿ ಆರೋಗ್ಯಕರ ವ್ಯಾಪಾರಕ್ಕೆ ಚಿಂತನೆ ನಡೆಸಬೇಕು ಎಂದು ಕೋರಿದರು.


ನೂತನ ಅಧ್ಯಕ್ಷ ಬಾದಾಮಿ ಮೃತ್ಯುಂಜಯ ಮಾತನಾಡಿ, ತಾಲೂಕಿನ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ನಮ್ಮ ಸಂಘಟನೆ ಸದಾ ಸಹಕಾರ ನೀಡುತ್ತದೆ. ನಮ್ಮದೇ ಒಂದು ಭವನವಾದರೆ ಬಡ ವ್ಯಾಪಾರಿಗಳ ಮತ್ತು ರೈತರ ನಾನಾ ಕಾರ್ಯಕ್ರಮಗಳಿಗೆ ಅನುಕೂಲ ಎಂದು ಅಭಿಪ್ರಾಯಪಟ್ಟರು.

ಸಾನಿಧ್ಯ ವಹಿಸಿದ್ದ ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ನಾನಾ ರಂಗಗಳ ವಿವಿಧ ವ್ಯಾಪಾರಿಗಳಿಗೆ ಸಾಂಕೇತಿಕವಾಗಿ ಸದಸ್ಯತ್ವ ನೊಂದಣಿ ಮತ್ತು ಗುರುತಿನ ದೃಢಿಕರಣ ಪತ್ರಗಳನ್ನು ನೀಡಿದರು.

ಅಕ್ಕಿ ಶಿವಕುಮಾರ, ಕಾಂತಿಲಾಲ್ ಜೈನ್, ಪಟ್ಟೇದ್ ಮಂಜಣ್ಣ, ಬಾವಿ ಶಶಿಧರ, ಸಾಲ್‌ಮನಿ ನಾಗರಾಜ, ಮುಖೇಶ ಛೋಪ್ರ, ಚಿದ್ರಿ ಅನಿಲ್, ಎಂ.ಜಗದೀಶ, ಆನ್ವೇರಿ ಮುದಗಲ್ ಶ್ರೀನಿವಾಸ, ಐ.ಟಿ.ವಿಜಯಕುಮಾರ, ಗಂಗಾವತಿ ಲಕ್ಷ್ಮೀಪತಿ, ಎಂ.ಬಸವರಾಜ ರೆಡ್ಡಿ, ರಾಹುಲ್ ವರ್ಣೇಕರ್, ವಿಜೇತ್ ಗಂಗಾವತಿ, ಅಕ್ಕಿ ಬಸವರಾಜ, ಎಂ.ಕೊಟ್ರೇಶ, ಕಾತ್ರಿಕಿ ಪಂಪಾಪತಿ, ದಿನೇಶ ದಾರಿವಾಲ್, ಭಾರತಿ ನಾಗೇಂದ್ರ, ಗಿರೀಶ್ ಪೆಂಡಕೂರು, ಬಾದಾಮಿ ಪ್ರಭುಲಿಂಗರಾಜ್ ಕಾರ್ಯಕ್ರಮ ನಿರ್ವಹಿಸಿದರು.