ಕನ್ನಡಪ್ರಭ ವಾರ್ತೆ ಬೆಂಗಳೂರು

ಕಲ್ಯಾಣ ಕರ್ನಾಟಕ ಭಾಗದ ಬೀದರ್‌ ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಿಗೆ ಬೆಂಗಳೂರಿನಿಂದ ಕ್ರಮವಾಗಿ ಜೂ.1 ಮತ್ತು ಜೂ.10ರಿಂದ ವಿಮಾನಯಾನ ಸೇವೆ ಪುನರಾರಂಭಿಸಲಾಗುತ್ತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟಾರ್‌ ಏರ್‌ಲೈನ್ಸ್‌ ಸಂಸ್ಥೆಯು ಬೆಂಗಳೂರಿನಿಂದ ಬೀದರ್‌, ಕಲಬುರಗಿಗೆ ವಿಮಾನಯಾನ ಸೇವೆ ಒದಗಿಸಲಿದೆ. ಅದಕ್ಕೆ ಬೆಂಬಲ ನೀಡಲು ಸರ್ಕಾರವು 28.47 ಕೋಟಿ ರು.ಗಳನ್ನು ವಯಾಬಲಿಟಿ ಗ್ಯಾಪ್‌ ಫಂಡಿಂಗ್‌ ಆಗಿ ಕೊಡುತ್ತಿದೆ. ಎರಡೂ ಕರೆಯ ವಿಮಾನ ಪ್ರಯಾಣಕ್ಕೆ ಈಗಾಗಲೇ ಮುಂಗಡ ಬುಕ್ಕಿಂಗ್‌ ಆರಂಭಿಸಲಾಗಿದೆ ಎಂದರು.

ಈ ಹಿಂದೆ ಕಲಬುರಗಿಗೆಯಿದ್ದ ವಿಮಾನಸೇವೆ ನಷ್ಟದ ಕಾರಣ ಸ್ಥಗಿತಗೊಂಡಿತ್ತು. ಬೀದರ್‌ಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವಿಶೇಷ ನೆರವಿನಿಂದ ಒಂದು ವಿಮಾನ ಸೇವೆ ನೀಡಲಾಗುತ್ತಿತ್ತು. ಅದೂ ಸ್ಥಗಿತಗೊಂಡಿತ್ತು. ಇದೀಗ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಬೆಳವಣಿಗೆ ಪರಿಗಣಿಸಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಉಪಕ್ರಮದಡಿ ವಿಮಾನ ಸೇವೆ ಮತ್ತೆ ಆರಂಭಿಸಲಾಗುತ್ತಿದೆ. ಅಲ್ಲದೆ, ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಿಗೆ ವಿಮಾನ ಸಂಪರ್ಕ ಒದಗಿಸಬೇಕು ಎನ್ನುವುದು ಸರ್ಕಾರದ ಕಾಳಜಿಯಾಗಿದೆ. ಅದರಿಂದ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಜತೆಗೆ ಮೂಲಸೌಕರ್ಯ ಕೂಡ ಸುಧಾರಿಸಲಿದೆ ಎಂದು ವಿವರಿಸಿದರು.