ಭೀಮಾ ತೀರದಲ್ಲಿ ಮುಂದುವರಿದ ಪ್ರವಾಹ

| Published : Sep 26 2025, 01:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಮಹಾರಾಷ್ಟ್ರದ ಉಜನಿ ಜಲಾಶಯ ಹಾಗೂ ಸೀನಾ ನದಿಯಿಂದ ಭೀಮಾನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ತಾಲೂಕಿನ 12 ಗ್ರಾಮಗಳಿಗೆ ನೀರು ನುಗ್ಗಿದೆ. ಅಧಿಕಾರಿಗಳ ಪ್ರಕಾರ ಭೀಮಾ ನದಿಯಲ್ಲಿ ಗುರುವಾರ 3 ಲಕ್ಷ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಉಜನಿ, ಸೀನಾ ನದಿ ವ್ಯಾಪ್ತಿಯಲ್ಲಿ ಮಳೆಯಾದರೆ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. ತಾಲೂಕಿನ ಮಿರಗಿ ಗ್ರಾಮದ ಅಂಬಾಭವಾನಿ, ಖೇಡಗಿ ಗುಡ್ಡದ ಬಸವರಾಜೇಂದ್ರ ಮಠ, ಚಿಕ್ಕಮಣೂರ ಗಡ್ಡಿಲಿಂಗೇಶ್ವರ ದೇವಾಲಯಕ್ಕೆ ಈಗಾಗಲೇ ಜಲ ದಿಗ್ಬಂಧನ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಇಂಡಿ

ಮಹಾರಾಷ್ಟ್ರದ ಉಜನಿ ಜಲಾಶಯ ಹಾಗೂ ಸೀನಾ ನದಿಯಿಂದ ಭೀಮಾನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ತಾಲೂಕಿನ 12 ಗ್ರಾಮಗಳಿಗೆ ನೀರು ನುಗ್ಗಿದೆ. ಅಧಿಕಾರಿಗಳ ಪ್ರಕಾರ ಭೀಮಾ ನದಿಯಲ್ಲಿ ಗುರುವಾರ 3 ಲಕ್ಷ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಉಜನಿ, ಸೀನಾ ನದಿ ವ್ಯಾಪ್ತಿಯಲ್ಲಿ ಮಳೆಯಾದರೆ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. ತಾಲೂಕಿನ ಮಿರಗಿ ಗ್ರಾಮದ ಅಂಬಾಭವಾನಿ, ಖೇಡಗಿ ಗುಡ್ಡದ ಬಸವರಾಜೇಂದ್ರ ಮಠ, ಚಿಕ್ಕಮಣೂರ ಗಡ್ಡಿಲಿಂಗೇಶ್ವರ ದೇವಾಲಯಕ್ಕೆ ಈಗಾಗಲೇ ಜಲ ದಿಗ್ಬಂಧನ ವಿಧಿಸಿದೆ.

ಪ್ರವಾಹದಿಂದ ನದಿ ದಂಡೆಯ ಮೇಲಿರುವ ಸುಮಾರು 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿರುವ ವಿವಿಧ ಬೆಳೆಗಳು ಹಾನಿಯಾಗಿದೆ. ಹತ್ತಿ, ಮೆಕ್ಕೆಜೋಳ, ತೊಗರಿ, ಬಾಳೆ, ಕಬ್ಬು ಸೇರಿದಂತೆ ತೋಟಗಾರಿಕೆ ಬೆಳೆಗಳು ನೀರಿನಲ್ಲಿ ನಿಂತಿವೆ. ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದ ರೈತರಿಗೆ ಈ ಬಾರಿ ಅಧಿಕ ಮಳೆ, ಭೀಮಾನದಿ ಪ್ರವಾಹ ಮತ್ತಷ್ಟು ಸಂಕಷ್ಟ ತಂದಿಟ್ಟಿವೆ. ಗಡಿ ಭಾಗದ ರೈತರಿಗೆ ಅತಿವೃಷ್ಠಿ, ಅನಾವೃಷ್ಠಿ ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ.ಮಿರಗಿ ಗ್ರಾಮದ ಅಗಸಿ ಬಳಿಯ ಅಂಗಡಿ, ಅಂಗನವಾಡಿ ಕೇಂದ್ರಗಳಿಗೆ ನೀರು ನುಗ್ಗಿದೆ. ಮಿರಗಿ ಗ್ರಾಮದ ರೈತರು ಹಳ್ಳದ ಆಚೆಗಿನ ಜಮೀನುಗಳಿಗೆ ಬೋಟ್‌ ಮೂಲಕ ಓಡಾಡುತ್ತಿದ್ದಾರೆ. ಹಿಂಗಣಿ, ಬರಗುಡಿ, ಪಡನೂರ, ಗುಬ್ಬೇವಾಡ, ಶಿರಗೂರ ಇನಾಮ, ಚಕ್ಕಮಣೂರ, ಖೇಡಗಿ, ನಾಗರಳ್ಳಿ, ಬುಯ್ಯಾರ, ಅಗರಖೇಡ, ರೋಡಗಿ, ಮಿರಗಿ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾಲೂಕು ಆಡಳಿತ ಸಿದ್ದತೆ ಮಾಡಿಕೊಂಡಿದೆ. 10 ಜನ ಅಧಿಕಾರಿಗಳನ್ನು ಪ್ರವಾಹ ಪರಿಸ್ಥಿತಿ ಅವಲೋಕನಕ್ಕೆ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನೋಡಲ್‌ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಪ್ರವಾಹದಿಂದ ಗುಬ್ಬೇವಾಡ-ಹಿಳ್ಳಿ, ಪಡನೂರ-ಖಾನಾಪೂರ, ಬರಗುಡಿ-ಹಿಂಗಣಿ, ಹಿಂಗಣಿ-ಆಳಗಿ, ಬುಯ್ಯಾರ-ಹಿರೇಮಣೂರ, ಅಗರಖೇಡ-ಗುಬ್ಬೇವಾಡ, ಶಿರಗೂರ ಇನಾಮ-ಪಡನೂರ ರಸ್ತೆ ಸಂಪರ್ಕ ಬಂದ್‌ ಆಗಿವೆ.ಇನ್ನು, ಅರ್ಜುಣಗಿ ಬಿಕೆ, ಬರಗುಡಿ, ಚಿಕ್ಕಮಣೂರ, ಹಿಂಗಣಿ, ಖೇಡಗಿ, ಪಡನೂರ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 70 ಕುಟುಂಬಗಳು ಸೇರಿ 326 ಜನರು ಕಾಳಜಿ ಕೇಂದ್ರದಲ್ಲಿ ಆಸರೆ ಪಡೆಯುತ್ತಿದ್ದಾರೆ. ಉಜನಿ, ಸಿನಾ ನದಿ ಪ್ರದೇಶದ ವ್ಯಾಪ್ತಿಯಲ್ಲಿ ಮತ್ತೆ ಮಳೆ ಮುಂದುವರಿದರೆ ಪ್ರವಾಹ ಹೆಚ್ಚಾಗಿ, ಮತ್ತಷ್ಟು ಗ್ರಾಮಗಳಿಗೆ ನೀರು ನುಗ್ಗುವ ಸಾದ್ಯತೆ ಇದೆ.ಬಾಕ್ಸ್‌

ನೋಡಲ್‌ ಅಧಿಕಾರಿಗಳಿಂದ ಪರಿಶೀಲನೆ

ಇಂಡಿ ತಾಲೂಕು ನೋಡಲ್‌ ಅಧಿಕಾರಿ ರಾಜಶೇಖರ ಡಂಬಳ ಅವರು ಭೀಮಾ ನದಿಯಿಂದ ಸಂತ್ರಸ್ತರು ವಾಸ್ತವ್ಯ ಹೂಡಿರುವ ಬರಗುಡಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರವಾಹ ಪರಿಸ್ಥಿತಿ ಅವಲೋಕಿಸಿದರು. ಪ್ರವಾಹ ಕುರಿತು ಜಾಗೃತೆ ವಹಿಸಬೇಕು. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮ ನೋಡಲ್‌ ಅಧಿಕಾರಿ ಹಾಗೂ ಕೃಷಿ ಎಡಿ ಮಹಾದೇವಪ್ಪ ಏವೂರ, ಕಂದಾಯ ನಿರೀಕ್ಷಕ ಪಿ.ಜೆ.ಕೊಡಹೊನ್ನ, ಗ್ರಾಮ ಆಡಳಿತಾಧಿಕಾರಿ ಬಸು ಅವಜಿ, ಬಂದು ತಾಂಬೋಳಿ ಈ ವೇಳೆ ಇದ್ದರು.

ಕೋಟ್‌ಭೀಮಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಯಥಾಸ್ಥಿತಿ ಮುಂದುವರೆದಿದೆ. ಕೆಲವೊಂದು ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಬಂದ್‌ ಆಗಿದೆ. ಗ್ರಾಮದ ದಂಡೆಯ ಮೇಲಿರುವ ಅಂಗಡಿ, ದೇವಸ್ಥಾನಗಳಿಗೆ ನೀರು ನುಗ್ಗಿದೆ. ಬುಯ್ಯಾರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ನೀರು ನುಗ್ಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ತಾಲೂಕು ಮಟ್ಟದ ಅಧಿಕಾರಿಗಳು ಜಾಗೃತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಿ.ಎಸ್‌.ಕಡಕಭಾವಿ, ತಹಸೀಲ್ದಾರ್‌ಕೋಟ್‌ಮಹಾರಾಷ್ಟ್ರದ ಉಜನಿ ಜಲಾಶಯ ಹಾಗೂ ಸೀನಾ ನದಿಯಿಂದ, ಹಳ್ಳಕೊಳ್ಳಗಳಿಂದ ಬುಧವಾರದವರೆಗೆ 2.80 ಕ್ಯೂಸೆಕ್‌ ನೀರು ಭೀಮಾ ನದಿಯಲ್ಲಿ ಹರಿಯುತ್ತಿತ್ತು. ಗುರುವಾರ 3 ಲಕ್ಷ ಕ್ಯುಸೆಕ್ ನೀರು ಹರಿಯುತ್ತಿದೆ. ಸೀನಾ ನದಿ ದಂಡೆಯಲ್ಲಿ ಮಳೆ ಬಂದರೆ ನೀರಿನ ಪ್ರಾಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಮಳೆಯಾಗದಿದ್ದರೆ 24 ಗಂಟೆಯವರೆಗೆ ನೀರು ಯತಾಸ್ಥಿತಿಯಲ್ಲಿರಲಿದೆ.ಮನೋಜಕುಮಾರ ಗಡಬಳ್ಳಿ, ಅಧೀಕ್ಷಕ ಅಭಿಯಂತರ ಕೆಬಿಜೆಎನ್‌ಎಲ್‌.