ಸಾರಾಂಶ
ನಗರದ ವೆನ್ಲಾಕ್ ಆಸ್ಪತ್ರೆ ಆವರಣದ ಆಯುಷ್ ಆಸ್ಪತ್ರೆಯಲ್ಲಿ ಮಂಗಳವಾರ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ -2025 ಕಾರ್ಯಕ್ರಮ ನೆರವೇರಿತು.
ಮಂಗಳೂರು: ಪಾರಂಪರಿಕ ವೈದ್ಯ ಪದ್ಧತಿಯಾಗಿರುವ ಆಯುರ್ವೇದ ವಿಶ್ವಕ್ಕೆ ಭಾರತೀಯರ ದೊಡ್ಡ ಕೊಡುಗೆಯಾಗಿದೆ. ಈ ಪದ್ಧತಿಯನ್ನು ಉಳಿಸಬೇಕಾದ ಜವಾಬ್ದಾರಿ ಆಯುರ್ವೇದ ಪದ್ಧತಿ ಕಲಿಯುವ ವಿದ್ಯಾರ್ಥಿಗಳದ್ದಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.ನಗರದ ವೆನ್ಲಾಕ್ ಆಸ್ಪತ್ರೆ ಆವರಣದ ಆಯುಷ್ ಆಸ್ಪತ್ರೆಯಲ್ಲಿ ಮಂಗಳವಾರ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಆಶ್ರಯದಲ್ಲಿ ಆಯುಷ್ ಮಹಾ ವಿದ್ಯಾಲಯಗಳ ಸಹಯೋಗದಲ್ಲಿ ಆಯೋಜಿಸಿದ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ -2025 ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಆಂಗ್ಲ ವೈದ್ಯಕೀಯ ಪದ್ಧತಿಗಳ ನಡುವೆ ಆಯುರ್ವೇದ ಪದ್ಧತಿಯನ್ನು ಜನರಿಗೆ ಮುಟ್ಟಿಸುವುದು ಕಷ್ಟದ ಕೆಲಸ. ಈಗಾಗಲೇ ಆಯುರ್ವೇದ ವೈದ್ಯರು ಶ್ರಮವಹಿಸಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಆಯುರ್ವೇದ ಪದ್ಧತಿಯಿಂದ ಕಾಯಿಲೆಗಳು ಗುಣವಾಗುತ್ತವೆ ಎನ್ನುವ ಯೋಚನೆ ಜನರಲ್ಲಿ ಬಂದರೆ ಜನರೇ ಆಯುರ್ವೇದ ಪದ್ಧತಿಯನ್ನು ಅಳವಡಿಸಲು ಮುಂದೆ ಬರುತ್ತಾರೆ ಎಂದರು.ರಾಜ್ಯದ ಯಾವ ಜಿಲ್ಲೆಯಲ್ಲೂ ಅಲೋಪತಿ ಆಸ್ಪತ್ರೆ ಸಂಕೀರ್ಣದಲ್ಲಿ ಆಯುರ್ವೇದ ಆಸ್ಪತ್ರೆ ಇಲ್ಲ. ಆದರೆ ನಾನು ಆರೋಗ್ಯ ಸಚಿವನಾಗಿದ್ದಾಗ ಆಯುಷ್ ಆಸ್ಪತ್ರೆಗೆ ಶಿಲಾನ್ಯಾಸ ನೆರವೇರಿಸಿದ್ದೆ, ನಂತರ ಉದ್ಘಾಟಿಸಲಾಯಿತು. ನಮಗೆ ಯಾವುದೇ ಪದ್ಧತಿ ಮುಖ್ಯವಲ್ಲ. ರೋಗಿಗಳಿಗೆ ಗುಣವಾಗುವುದು ಮುಖ್ಯ ಎಂದು ಯು.ಟಿ.ಖಾದರ್ ಹೇಳಿದರು.ಆಯುರ್ವೇದ ತಜ್ಞ ಡಾ.ಗೋಪಾಲಕೃಷ್ಣ ನಾಯಕ್ ವಿಶೇಷ ಉಪನ್ಯಾಸ ನೀಡಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಆಯುಷ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಯ್ಯದ್ ಝಾಹೀದ್ ಹುಸೇನ್ ಇದ್ದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಹಮ್ಮದ್ ಇಕ್ಬಾಲ್ ಸ್ವಾಗತಿಸಿದರು. ಶೋಭಾ ರಾಣಿ ನಿರೂಪಿಸಿದರು.