ಪಾಶ್ಚಾತ್ಯ ಸಂಸ್ಕೃತಿ ಹಾವಳಿಗೆ ಜಾನಪದ ಕಲೆಗಳು ಮೂಲೆಗುಂಪು: ಸುರೇಶ್‌

| Published : Aug 13 2024, 12:48 AM IST

ಪಾಶ್ಚಾತ್ಯ ಸಂಸ್ಕೃತಿ ಹಾವಳಿಗೆ ಜಾನಪದ ಕಲೆಗಳು ಮೂಲೆಗುಂಪು: ಸುರೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ನೈತಿಕ ಮೌಲ್ಯ ಹೊಂದಿರುವ ಜಾನಪದ ಚೌಡಿಕೆ ಮೇಳದಂತಹ ಕಲೆಗಳು ಆಧುನಿಕ ಪಾಶ್ಚಾತ್ಯ ಸಂಗೀತ ಕಾರ್ಯಕ್ರಮಗಳ ಹಾವಳಿಯಿಂದ ಮೂಲೆ ಗುಂಪಾಗುತ್ತಿರುವುದು ಬೇಸರ ತರುವ ಸಂಗತಿ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್‌ ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಅಜ್ಜಂಪುರ.

ನೈತಿಕ ಮೌಲ್ಯ ಹೊಂದಿರುವ ಜಾನಪದ ಚೌಡಿಕೆ ಮೇಳದಂತಹ ಕಲೆಗಳು ಆಧುನಿಕ ಪಾಶ್ಚಾತ್ಯ ಸಂಗೀತ ಕಾರ್ಯಕ್ರಮಗಳ ಹಾವಳಿಯಿಂದ ಮೂಲೆ ಗುಂಪಾಗುತ್ತಿರುವುದು ಬೇಸರ ತರುವ ಸಂಗತಿ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್‌ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಚಿಣ್ಣಾಪುರ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕ. ಅಜ್ಜಂಪುರ ತಾಲೂಕು ಮತ್ತು ಚಿಣ್ಣಾಪುರ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಚಿಣ್ಣಾಪುರ ಗ್ರಾಮದ ಎಲ್ ಐ ಸಿ ಶಿವಕುಮಾರ್ ಮನೆ ಆವರಣದಲ್ಲಿ ನಡೆದ ಸಿರಿದೇವಿ ಸತ್ವ ಪರೀಕ್ಷೆ ಎಂಬ ಜಾನಪದ ಚೌಡಿಕೆ ಮೇಳದಲ್ಲಿ ಮಾತನಾಡಿ, ಭಾರತದ ಎಲ್ಲ ಕಲೆಗಳ ತಾಯಿ ಬೇರು ಗ್ರಾಮೀಣ ಭಾರತದ ಜಾನಪದ ಕಲೆಗಳಾಗಿವೆ. ಅವುಗಳನ್ನು ಇಂದು ಮರೆತಿರುವ ಕಾರಣ ಅರ್ಥ ಮತ್ತು ಸಾರವಿಲ್ಲದ ಸಂಗೀತ, ಸಾಹಿತ್ಯ ಕೇಳುವಂತಾಗಿದೆ ಎಂದು ವಿಷಾದಿಸಿದರು

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ತ್ಯಾಗದ ಕಟ್ಟೆ ತಿಪ್ಪೇಶಪ್ಪ ಮಾತನಾಡಿ, ಸಿರಿದೇವಿ ಸತ್ವ ಪರೀಕ್ಷೆಯಂತ ಅನೇಕ ಚೌಡಿಕೆ ಕಥೆಗಳನ್ನು ನಮ್ಮ ಜನಪದರು ಹುಟ್ಟು ಹಾಕಿರುವ ಕಾರಣವೇನೆಂದರೆ ಸಮಾಜದಲ್ಲಿ ಅತ್ಯಾಚಾರ, ಅನಾಚಾರ, ಹಿಂಸೆ, ಕ್ರೋಧ, ಮದ, ಮತ್ಸರ, ಕೊಲೆ, ಸುಲಿಗೆ ದರೋಡೆ ಗಳಂತಹ ಹಿಂಸಾ ಕೃತ್ಯಗಳನ್ನು ಕಡಿಮೆ ಮಾಡಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದೆ ಆಗಿದೆ.

ಚೌಡಿಕೆ ಮೇಳದಂತಹ ನೈತಿಕ ಸಾರವುಳ್ಳ ಜನಪದ ಕಲೆ, ಸಾಹಿತ್ಯಗಳನ್ನು ಶ್ರಾವಣ ಮಾಸದಂತಹ ವಿಶೇಷ ತಿಂಗಳು, ಗೌರಿ-ಗಣೇಶ,ದೀಪಾವಳಿ ಸಂದರ್ಭಗಳಲ್ಲಿ ಊರುಗಳಲ್ಲಿ ಜಾನಪದ ಸಂಭ್ರಮಗಳನ್ನು ಹಿಂದೆ ನಮ್ಮ ಜನಪದರು ಆಯೋಜಿಸು ತ್ತಿದ್ದರು. ಇಡೀ ಊರಿನ ಜನ ರಾತ್ರಿಯಿಡೀ ಕುಳಿತು ಅದನ್ನು ವೀಕ್ಷಸಿ ಅವುಗಳ ಮೌಲ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದರು ಎಂದರು.

ಮುಖ್ಯ ಅತಿಥಿಗಳಾಗಿದ್ದ ಎಲ್.ಐ.ಸಿ ಶಿವಕುಮಾರ ಮಾತನಾಡಿ, ಸಮಾಜಕ್ಕೆ ನೀತಿ ಪಾಠ ಮಾಡುತ್ತಿದ್ದ, ಅನೇಕ ಜನಪದ ಕಲೆಗಳು ಇಂದು ಕಣ್ಮರೆಯಾಗುತ್ತಿವೆ. ಸರ್ಕಾರ ನಮ್ಮ ಜನಪದರು ಉಳಿಸಿ ಬೆಳೆಸಿರುವ ಜನಪದ ಕಲೆ, ಸಾಹಿತ್ಯ- ಸಂಗೀತ ಗಳನ್ನು ಸಂರಕ್ಷಿಸಲು. ಕಲಾವಿದರ ಬೆಂಬಲಕ್ಕೆ ನಿಂತು ಅವುಗಳನ್ನು ಕಾಪಾಡಬೇಕೆಂದು ಮನವಿ ಮಾಡಿದರು.

ಅಜ್ಜಂಪುರ ತಾಲೂಕು ಕಜಾಪ ಅಧ್ಯಕ್ಷ ಡಾ. ಮಾಳೇನಳ್ಳಿ ಬಸಪ್ಪಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದರು ಸಾಹಿತಿಗಳನ್ನು ಪರಿಷತ್ತಿನಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಜಾಪದ ಉಪಾಧ್ಯಕ್ಷ ಜಿ.ಎಸ್.ತಿಪ್ಪೇಶ್, ಗೌರವಾಧ್ಯಕ್ಷ ಮರುಳ ಸಿದ್ದಪ್ಪ, ಕಲಾವಿದರಾದ ಚಿಕ್ಕನಲ್ಲೂರು ಜಯಣ್ಣ, ಚಿಕ್ಕನಲ್ಲೂರು ತಿಪ್ಪೇಶ, ನಾರಾಯಣಪುರ ರಾಜಣ್ಣ, ರತ್ನಗಿರಿ ಗೌಡ, ರಾಮಚಂದ್ರಪ್ಪ, ಶಂಕ್ರಪ್ಪ, ತಿಪ್ಪೇಶಪ್ಪ, ದೇವರಾಜು, ಮೋಹನ್ ಕುಮಾರ್, ಯಶ್ವಂತ್ ಮುಂತಾದವರು ಉಪಸ್ಥಿತರಿದ್ದರು.