ನರೇಗಾ ಯೋಜನೆ ಸಮರ್ಪಕ ಜಾರಿಗೆ ಆಗ್ರಹಿಸಿ ಪ್ರತಿಭಟನೆ

| Published : Aug 13 2024, 12:48 AM IST

ಸಾರಾಂಶ

ದೇವದುರ್ಗ ಪಟ್ಟಣದ ತಾಪಂ ಕಚೇರಿ ಎದುರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ದೇವದುರ್ಗ

ತಾಲೂಕಿನಲ್ಲಿ ನರೇಗಾ ಯೋಜನೆ ಜಾರಿ ಮಾಡುವಲ್ಲಿ ತಾಪಂ ಅಧಿಕಾರಿಗಳ ಬೇಜವಾಬ್ದಾರಿತನ ಖಂಡಿಸಿ ಪಟ್ಟಣದ ತಾಪಂ ಕಚೇರಿ ಎದುರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆ ತಾಲೂಕು ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಜರುಗಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಸಂಗಮೇಶ ಮೂಲಿಮನಿ ಮಾತನಾಡಿ, ಕೂಲಿಕಾರರ ಸಂಘಟನೆ ನಿರಂತರವಾಗಿ ಜನತೆಯಲ್ಲಿ ನರೇಗಾ ಯೋಜನೆ ಬಗ್ಗೆ ಜಾಗೃತಿ ಮೂಡಿಸಿ ಗುಂಪುಗಳನ್ನು ರಚಿಸಿ ಕೆಲಸಕ್ಕೆ ಅರ್ಜಿ ಸಲ್ಲಿಸಿದರು ಸಹ ಕೆಲಸ ನೀಡುವುದಿಲ್ಲ. ತಾಂತ್ರಿಕ ಸಮಸ್ಯೆ ಉಂಟಾಗದಂತೆ ನೋಡಿಳ್ಳಬೇಕು. ಯಾವುದೇ ಸಮಸ್ಯೆ ಸರಿ ಪಡಿಸದೇ ವಿನಾಕಾರಣ ಕೂಲಿಕಾರರಿಗೆ ಅಧಿಕಾರಿಗಳಿಂದ ತೊಂದರೆ ಉಂಟಾಗಿದೆ ಎಂದು ದೂರಿದರು.

ನರೇಗಾ ಯೋಜನೆಯಡಿ ಒಂದು ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ ನೂರು ದಿನ ಕೆಲಸ ನೀಡಬೇಕು. ದಿನಕ್ಕೆ 319 ರು.ಕೂಲಿ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಗಿರಿಯಪ್ಪ ಪೂಜಾರಿ, ಅಧ್ಯಕ್ಷ ಲಿಂಗಣ್ಣ ನಾಯಕ, ಬಸವರಾಜ ನಾಯಕ ಕಾಕರಗಲ್, ಮಲ್ಲಿಕಾರ್ಜುನ, ಶಿವಪ್ಪ, ಜಯಮ್ಮ, ಅಜ್ಮೀರ ಅಲಿ, ಜಾಫರ್ ಸಾಬ್, ಶರಣಮ್ಮ, ಸಂಗಮ್ಮ, ಶಾಂತಕುಮಾರ ಸೇರಿ ಅನೇಕರು ಇದ್ದರು.