ಅನ್ಯಾಯದ ವಿರುದ್ಧ ಬೆಂಗಳೂರು ಚಲೋಗೆ ಹೊರಟ ಪ್ರಾಥಮಿಕ ಶಾಲಾ ಶಿಕ್ಷಕರು

| Published : Aug 13 2024, 12:48 AM IST

ಅನ್ಯಾಯದ ವಿರುದ್ಧ ಬೆಂಗಳೂರು ಚಲೋಗೆ ಹೊರಟ ಪ್ರಾಥಮಿಕ ಶಾಲಾ ಶಿಕ್ಷಕರು
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ 2017ರ ವೃಂದ ಮತ್ತು ನೇಮಕಾತಿ ನಿಯಮಗಳು 2016ಕ್ಕಿಂತ ಮೊದಲು ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲವೆಂದು ಕರ‍್ಯಾದೇಶ ಹೊರಡಿಸಿ, ಮೂಲತಃ 1 ರಿಂದ 7, 7ಕ್ಕೆ ನೇಮಕ ಹೊಂದಿದ ಶಿಕ್ಷಕರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ 1 ರಿಂದ 5ಕ್ಕೆ ಹಿಂಬಡ್ತಿ ನೀಡಿದೆ. ಇದರಿಂದ ಸುಮಾರು 1.20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಡ್ತಿ ಹಾಗೂ ಹಿಂಬಡ್ತಿಯಲ್ಲಿ ತಮಗೆ ಆಗಿರುವ ಅನ್ಯಾಯದ ವಿರುದ್ಧ ಪ್ರಾಥಮಿಕ ಶಾಲಾ ಶಿಕ್ಷಕರು ಸೋಮವಾರ ಬೆಂಗಳೂರು ಚಲೋ ಹೊರಟರು.

ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಮಂದಿ ಶಿಕ್ಷಕರು ಬೆಂಗಳೂರಿಗೆ ತೆರಳಿದರು. ಶಿಕ್ಷಕರ ಹೋರಾಟದ ಹಿನ್ನೆಲೆಯಲ್ಲಿ ಜಿಲ್ಲೆಯ ನೂರಾರು ಸರಕಾರಿ ಪ್ರಾಥಮಿಕ ಶಾಲೆಗಳು ಸೋಮವಾರ ದಿನವಿಡೀ ಬಾಗಿಲು ಮುಚ್ಚಿದ್ದವು. ಇದರಿಂದ ಶಾಲೆಗೆ ಬಂದ ಮಕ್ಕಳು, ಶಾಲೆಯ ಬಾಗಿಲು ಬಂದ್ ಆಗಿರುವುದನ್ನು ನೋಡಿ ಮನೆಗಳಿಗೆ ವಾಪಸ್ಸಾದರು. ಇದರಿಂದ ತರಗತಿಗಳು ನಡೆಯದೆ ಮಕ್ಕಳು ದಿನದ ಪಾಠ-ಪ್ರವಚನದಿಂದ ವಂಚಿತರಾಗಿದ್ದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಬಸ್, ರೈಲು ಹಾಗೂ ಸ್ವಂತ ವಾಹನಗಳಲ್ಲಿ ಬೆಂಗಳೂರಿಗೆ ತೆರಳಿ, ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು. ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಎಂದು ಘೋಷಣೆ ಮೊಳಗಿಸಿದರು.

ಸರ್ಕಾರ 2017ರ ವೃಂದ ಮತ್ತು ನೇಮಕಾತಿ ನಿಯಮಗಳು 2016ಕ್ಕಿಂತ ಮೊದಲು ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲವೆಂದು ಕರ‍್ಯಾದೇಶ ಹೊರಡಿಸಿ, ಮೂಲತಃ 1 ರಿಂದ 7, 7ಕ್ಕೆ ನೇಮಕ ಹೊಂದಿದ ಶಿಕ್ಷಕರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ 1 ರಿಂದ 5ಕ್ಕೆ ಹಿಂಬಡ್ತಿ ನೀಡಿದೆ. ಇದರಿಂದ ಸುಮಾರು 1.20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಹಾಗಾಗಿ ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.

2016ಕ್ಕಿಂತ ಮೊದಲು ನೇಮಕ ಹೊಂದಿದ ಶಿಕ್ಷಕರನ್ನು ಎನ್‌ಸಿಟಿ ಈ ನಿಯಮಾವಳಿ ಪ್ರಕಾರ ಪದವಿ ವಿದ್ಯಾರ್ಹತೆ ಹೊಂದಿದ ಎಲ್ಲ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾ ಜೇಷ್ಠತೆಯೊಂದಿಗೆ ಪುನರ್ ಪದನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಈ ಮೊದಲಿನ ಪ್ರೌಢಶಾಲಾ ಬಡ್ತಿ ನಿಯಮಾವಳಿಯಂತೆ 2016ರ ಮೊದಲು ನೇಮಕಾತಿ ಹೊಂದಿದ ಹಾಗೂ ಬಿ ಇಡಿ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಖಾಲಿಯಾಗುವವರೆಗೂ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ಈ ಮೊದಲಿನ ನಿಯಮಾವಳಿಯಂತೆ ಮುಖ್ಯ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸದೇ ಅಖಂಡ ಸೇವಾಹಿರಿತನದ ಆಧಾರದ ಮೇಲೆ ಬಡ್ತಿ ನೀಡಬೇಕೆಂದು ಒತ್ತಾಯಿಸಿದರು.