ಜನಪದ ಹಾಡು- ಕಥೆಗಳಲ್ಲಿ ಜೀವನದ ಅನುಭವವಿದೆ

| Published : Feb 18 2025, 12:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜನವಾಣಿ ಬೇರು ಕವಿವಾಣಿ ಹೂ. ಶಿಷ್ಯ ಸಾಹಿತ್ಯಕ್ಕೆ ಮೂಲ ಜನಪದ ಸಾಹಿತ್ಯ. ಜನಪದ ಹಾಡು -ಕಥೆಗಳಲ್ಲಿ ಜೀವನಾನುಭವವಿದೆ. ಅನಕ್ಷರಸ್ಥರಿಂದ ರಚಿಸಲ್ಪಟ್ಟಿದ್ದರೂ ಅದು ಸಂಸ್ಕೃತಿಯ ವೈಭವವನ್ನು ಹೊಂದಿದೆ ಎಂದು ಜನಪದ ಕಲೆಗಾರ ಡಾ.ಜ್ಯೋತಿರ್ಲಿಂಗ ಹೊನಕಟ್ಟಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜನವಾಣಿ ಬೇರು ಕವಿವಾಣಿ ಹೂ. ಶಿಷ್ಯ ಸಾಹಿತ್ಯಕ್ಕೆ ಮೂಲ ಜನಪದ ಸಾಹಿತ್ಯ. ಜನಪದ ಹಾಡು -ಕಥೆಗಳಲ್ಲಿ ಜೀವನಾನುಭವವಿದೆ. ಅನಕ್ಷರಸ್ಥರಿಂದ ರಚಿಸಲ್ಪಟ್ಟಿದ್ದರೂ ಅದು ಸಂಸ್ಕೃತಿಯ ವೈಭವವನ್ನು ಹೊಂದಿದೆ ಎಂದು ಜನಪದ ಕಲೆಗಾರ ಡಾ.ಜ್ಯೋತಿರ್ಲಿಂಗ ಹೊನಕಟ್ಟಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ವೀರಶೈವ ಲಿಂಗಾಯತ ಸಮುದಾಯ ಭವನದ ಜ್ಞಾನಜ್ಯೋತಿ ಸಿದ್ದೇಶ್ವರ ಸ್ವಾಮೀಜಿ ವೇದಿಕೆಯಲ್ಲಿ ನಡೆದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಡಾ.ಎಂ.ಎನ್.ವಾಲಿ ಪ್ರತಿಷ್ಠಾನ ಮತ್ತು ಡಾ.ಸರಸ್ವತಿ ಚಿಮ್ಮಲಗಿ ಅವರ ಯುಗದರ್ಶಿನಿ ಪ್ರತಿಷ್ಠಾನಗಳ ದತ್ತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರೊ.ಲಕ್ಷ್ಮೀ ಮಾತನಾಡಿ, ಅನುಭವ ಮಂಟಪದಲ್ಲಿ ಶಿವಶರಣೆಯರು ವಿಷಯದ ಕುರಿತು ಉಪನ್ಯಾಸ ನೀಡಿದರು. ವೇದಕಾಲದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವಿರಲಿಲ್ಲ. ಹೆರಿಗೆ ಯಂತ್ರದಂತೆ ಯಾತನೆ ಅನುಭವಿಸುತ್ತಿದ್ದ ಹೆಣ್ಣಿಗೆ ಗಂಡಿನ ಸಮಾನವಾದ ಸ್ಥಾನ ನೀಡಿ ದೈವತ್ವಕ್ಕೇರಿಸಿದ ಖ್ಯಾತಿ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ಹೇಳಿದರು.ತಾಳಿಕೋಟೆಯ ಶಿವಲೀಲಾ ಮುರಾಳ ಮಾತನಾಡಿ, ಇಂದು ತವರಿನ ಬುತ್ತಿ ಬದನೆ ಕಾಯಿ ಪಲ್ಲೆ, ಕರೆಳ್ಳು ಹಿಂಡಿ, ಕೆನೆಮೊಸರು ಮಾಯವಾಗಿ ಅವುಗಳ ಸ್ಥಾನದಲ್ಲಿ ಬ್ರೆಡ್‌, ಪಿಜ್ಜಾ, ನೋಡಲ್ಸ್‌ಗಳು ಸೇರಿಕೊಂಡಿವೆ. ಇದರಿಂದಾಗಿ ಹಳ್ಳಿಗಳಲ್ಲಿ ಜಾನಪದ ಸಂಸ್ಕೃತಿಯ ಸೊಗಡು ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಎಸ್.ಮದಭಾವಿ ಮಾತನಾಡಿ, ಕರ್ನಾಟಕದಲ್ಲಿ ಕಂಠಸ್ಥವಾದ ಜನಪದ ಸಾಹಿತ್ಯ ಗ್ರಂಥಸ್ಥವಾಗಿ ಪ್ರಕಟಗೊಳ್ಳಲು ಹಲಸಂಗಿ ಗೆಳೆಯರು ಕಾರಣವಾಗಿದ್ದಾರೆ ಎಂದು ತಿಳಿಸಿದರು.

ದಾಸೋಹಿ ಡಾ.ಅಶೋಕ ವಾಲಿ, ಡಾ.ಸರಸ್ವತಿ ಚಿಮ್ಮಲಗಿ, ಡಾ.ಉಷಾ ಹಿರೇಮಠ ಮಾತನಾಡಿದರು. ಸಾನ್ನಿಧ್ಯವನ್ನು ತಿಕೋಟಾದ ಮಲ್ಲಿಕಾರ್ಜುನ ಶ್ರೀಗಲು ವಹಿಸಿದ್ದರು. ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಗಳಖೋಡದ ಹೊನಕಟ್ಟಿ ಜಾನಪದ ಕಲಾ ವೃಂದದವರು ಜಾನಪದ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಸಮಾರಂಭದಲ್ಲಿ ಡಾ. ಸಂಗಮೇಶ ಮೇತ್ರಿ, ವಿ.ಸಿ. ನಾಗಠಾಣ, ಸಿದ್ರಾಮಪ್ಪ ಉಪ್ಪಿನ, ಡಾ. ವಿ.ಡಿ. ಐಹೊಳ್ಳಿ, ವಿದ್ಯಾವತಿ ಅಂಕಲಗಿ, ಗಾಯತ್ರಿ ಪತ್ತಾರ, ಬಿ.ಸಿ. ಸಾರವಾಡ, ಆರ್. ಆರ್. ಹಂಚನಾಳ, ಪ್ರೊ. ಬಿ.ಎನ್. ಪಾಟೀಲ, ಇಬ್ರಾಹಿಂಪೂರ, ಸೋಮನಗೌಡ ಪಾಟೀಲ, ಎ.ಎಸ್. ಕೋರಿ, ಕಾಶಿನಾಥ ಅಣೆಪ್ಪನವರ, ಎಸ್.ಬಿ. ದೊಡಮನಿ, ಈಶ್ವರಗೊಂಡ, ಎ.ಎಸ್. ಕಂಚ್ಯಾಣಿ, ಅಮರೇಶ ಸಾಲಕ್ಕಿ ಬಿ.ಎಂ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಡಿ.ಕೆ. ರಾಠೋಡ ಶಿಕ್ಷಕರು ಸ್ವಾಗತಿಸಿದರು. ಈರಣ್ಣ ತೊಂಡಿಕಟ್ಟಿ ವಂದಿಸಿದರು. ಶಿಕ್ಷಕರಾದ ಮಹಾಂತೇಶ ಝಂಡೆ ಕಾರ್ಯಕ್ರಮ ನಿರೂಪಿಸಿದರು.