ಗದಗ: ಜಗತ್ತಿನ ಪ್ರಥಮ ಸಾಹಿತ್ಯ ಎಂದರೆ ಅದು ಜನಪದ ಸಾಹಿತ್ಯ. ಕಿವಿಯಿಂದ ಕಿವಿಗೆ ಹರಿದುಬರುವ ಮೂಲಕ ಜನರಲ್ಲಿ ಉತ್ತಮ ಹವ್ಯಾಸ, ಅಭಿರುಚಿ, ಮೌಲ್ಯಗಳನ್ನು ಬೆಳೆಸುತ್ತ ರಚನಾತ್ಮಕ ಸಮಾಜ ಕಟ್ಟುವಲ್ಲಿ ಜನಪದ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದೆ ಎಂದು ತೋಂಟದಾರ್ಯ ಸಂಸ್ಥಾನಮಠದ ಡಾ. ಸಿದ್ದರಾಮ ಸ್ವಾಮೀಜಿ ತಿಳಿಸಿದರು.ನಗರದ ಸುತಾರ ಸಾಂಸ್ಕೃತಿಕ ಕಲಾ ಸಂಘದ ದಶಮಾನೋತ್ಸವ ಸಮಾರಂಭದ ಆತ್ಮಾರಾಮ ಸುತಾರ ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯನ ನಿಜವಾದ ಸೌಂದರ್ಯ ಅಂದರೆ ಅದು ಸಂಸ್ಕೃತಿ. ಸಂಸ್ಕೃತಿಯಿಂದ ಮಾತ್ರ ಮನುಷ್ಯ, ಮನುಷ್ಯನಾಗಿ ಬಾಳಲು ಸಾಧ್ಯ. ಸಂಸ್ಕೃತಿಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ನೀಡುತ್ತವೆ. ಹೀಗಾಗಿ ಇಂದಿನ ಸಮಾಜದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವ ಅಗತ್ಯ ಇದೆ ಎಂದರು.
ಶಿರೋಳ ಭೈರನಟ್ಟಿಯ ತೋಂಟದಾರ್ಯ ಶಾಖಾಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ರಾಮಾಯಣ, ಮಹಾಭಾರತ ಮುಂತಾದ ಪೌರಾಣಿಕ ಕಥಾವಸ್ತುಗಳ ಆಧರಿತ ಬಯಲಾಟ, ದೊಡ್ಡಾಟ ಕಲೆ ನಮ್ಮ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತ ಬಂದಿವೆ. ಆಧುನಿಕ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಿತರಾಗಿ ಇಂತಹ ಅಮೂಲ್ಯ ಕಲೆಗಳು ಕ್ಷೀಣಿಸುತ್ತಿವೆ. ಇಂತಹ ಕಲೆಗಳಿಗೆ ಲಿಂ. ಡಾ. ಸಿದ್ಧಲಿಂಗ ಸ್ವಾಮಿಗಳು ಸದಾ ಪ್ರೋತ್ಸಾಹ ನೀಡುತ್ತಿದ್ದರು ಎಂದರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಗದುಗಿನ ತೋಂಟದಾರ್ಯ ಮಠ ಕಲೆ, ಸಾಹಿತ್ಯ, ಸಂಗೀತ, ನಾಟಕ, ಸಂಸ್ಕೃತಿ ಪೋಷಿಸಿಕೊಂಡು ಬಂದಿದೆ. ಬಯಲಾಟ, ದೊಡ್ಡಾಟ ಕಲೆಗಳು ಅಳಿವಿನ ಅಂಚಿನಲ್ಲಿವೆ ಸಂಘ, ಸಂಸ್ಥೆಗಳು, ಸಮಾಜ, ಸರ್ಕಾರ ಈ ನಮ್ಮ ಮೂಲ ಕಲೆಗಳ ಉಳುವಿಗೆ ಮುಂದಾಗಬೇಕು ಎಂದರು. ಈ ವೇಳೆ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ಉಸಿರು ಫೌಂಡೇಶನ್ ಅಧ್ಯಕ್ಷ ಶರಣು ಪಾಟೀಲ, ನಗರಸಭೆ ಮಾಜಿ ಸದಸ್ಯ ಮಂಜುನಾಥ ಮುಳಗುಂದ ಮಾತನಾಡಿದರು. ಪ್ರಾಧ್ಯಾಪಕ ಡಾ. ಸಿದ್ಧಲಿಂಗೇಶ್ವರ ಸಜ್ಜನಶಟ್ಟರ ಬಯಲಾಟ ಕಲೆಯ ಕುರಿತು ಉಪನ್ಯಾಸ ನೀಡಿದರು.ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ, ಶ್ರೀಧರ ಕೊಣ್ಣೂರ, ಬಸವರಾಜ ಕುಂದಗೋಳ, ಸುತಾರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅಶೋಕ ಸುತಾರ ಸೇರಿದಂತೆ ಇತರರು ಇದ್ದರು. ಸುತಾರ ಸಾಂಸ್ಕೃತಿಕ ಕಲಾ ಸಂಘದ ಕಲಾವಿದರು ಪ್ರಾರ್ಥಿಸಿದರು. ಸುಭಾಷ ಮಳಗಿ ವಂದಿಸಿದರು.