ಮಹಿಳೆಯರಿಗೆ ಕೇವಲ ಮೆಚ್ಚುಗೆಯ ಮಾತುಗಳು ಬೇಕಾಗಿಲ್ಲ, ಅವರಿಗೆ ಸಮಾನ ಹಕ್ಕುಗಳು ಹಾಗೂ ಸಮಾನ ಅವಕಾಶಗಳು ಅತ್ಯಂತ ಅವಶ್ಯಕ ಎಂದು ಜೆ. ಜಯಲಕ್ಷ್ಮೀ ಅಭಿಪ್ರಾಯಪಟ್ಟರು.

ಬಳ್ಳಾರಿ: ಇಂದಿನ ಸಮಾಜದಲ್ಲಿ ಮಹಿಳೆಯರ ಪ್ರಗತಿ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಆದರೆ, ಮಹಿಳೆಯರಿಗೆ ಕೇವಲ ಮೆಚ್ಚುಗೆಯ ಮಾತುಗಳು ಬೇಕಾಗಿಲ್ಲ, ಅವರಿಗೆ ಸಮಾನ ಹಕ್ಕುಗಳು ಹಾಗೂ ಸಮಾನ ಅವಕಾಶಗಳು ಅತ್ಯಂತ ಅವಶ್ಯಕ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಸಿಂಡಿಕೇಟ್ ಸದಸ್ಯೆ ಜೆ. ಜಯಲಕ್ಷ್ಮೀ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದ ಜೀವ ವಿಜ್ಞಾನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಮಹಿಳೆಯರು ಶಿಕ್ಷಣ, ಉದ್ಯೋಗ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ. ಆದರೂ ಹಲವೆಡೆ ಲಿಂಗ ಅಸಮಾನತೆ ಇನ್ನೂ ಮುಂದುವರಿದಿರುವುದು ವಿಷಾದನೀಯ. ಮಹಿಳೆಯರ ಸಾಮರ್ಥ್ಯವನ್ನು ಕೇವಲ ಹೊಗಳುವುದರಿಂದ ಮಾತ್ರ ಅವರ ಸ್ಥಿತಿ ಬದಲಾಗುವುದಿಲ್ಲ, ಬದಲಾಗಿ ಅವರಿಗೆ ಸಮಾನ ಹಕ್ಕುಗಳನ್ನು ನೀಡುವುದು ಮತ್ತು ಅವಕಾಶಗಳನ್ನು ಕಲ್ಪಿಸುವುದು ಮುಖ್ಯವಾಗಿದೆ. ಮಹಿಳೆಯರಿಗೆ ಸಮಾನ ಶಿಕ್ಷಣ, ಉದ್ಯೋಗದಲ್ಲಿ ಸಮಾನ ವೇತನ, ಮತ್ತು ನಿರ್ಧಾರ ಕೈಗೊಳ್ಳುವ ಹಕ್ಕುಗಳನ್ನು ಒದಗಿಸಿದಾಗ ಮಾತ್ರ ನಿಜವಾದ ಸಮಾನತೆ ಸಾಧ್ಯವಾಗುತ್ತದೆ. ಮಹಿಳೆಯರ ಸಬಲೀಕರಣಕ್ಕೆ ಕೇವಲ ಮಾತಿನ ಮೆಚ್ಚುಗೆಯೇ ಸಾಕಾಗುವುದಿಲ್ಲ, ಪ್ರಾಯೋಗಿಕವಾಗಿ ಸಮಾನ ಹಕ್ಕು ಮತ್ತು ಅವಕಾಶಗಳನ್ನು ನೀಡುವುದೇ ಸಮಾನ ಸಮಾಜ ನಿರ್ಮಾಣಕ್ಕೆ ಹಾದಿ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ಲಿಂಗ ಸಮಾನತೆಗಾಗಿ ಪ್ರತಿಪಾದಿಸುವುದರ ಜೊತೆಗೆ ಮಹಿಳೆಯರು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಸದೃಢವಾಗಬೇಕಾಗಿದೆ ಎಂದು ಕರೆ ನೀಡಿದರು.

ಪ್ರಸ್ತುತದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ. ವಿವಿಯಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಉತ್ತೇಜನ ನೀಡುವುದರ ಜೊತೆಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.

ವಿವಿಯ ಹಣಕಾಸು ಅಧಿಕಾರಿ ಕೆ.ಜಿ.ಸ್ಪೂರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ಶ್ರೀದೇವಿ ಆಲೂರು ಹಾಗೂ ಮಹಿಳಾ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕ ಸಿದ್ಧರಾಮಪ್ಪ ಪೂಜಾರಿ ಅವರು ಕಾರ್ಯಕ್ರಮ ನಿರ್ವಹಿಸಿದರು.

ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.