ಸರ್ಕಾರ ಲಕ್ಷಾಂತರ ಹಣ ಖರ್ಚು ಮಾಡಿ ತಾಲೂಕು ಕೇಂದ್ರದಲ್ಲಿ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಮಾಪನ ಕೇಂದ್ರವನ್ನು ನಿರ್ಮಾಣ ಮಾಡಿದೆ. ಈ ಮಾಪನ ಕೇಂದ್ರವೀಗ ಪಾಳು ಬಿದ್ದಿದೆ.
ಎಸ್.ಜಿ. ತೆಗ್ಗಿನಮನಿ
ನರಗುಂದ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿನ ಮಳೆ ಮಾಪನ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ. ಅಧಿಕಾರಿಗಳು ಈ ಮಾಪನ ಕೇಂದ್ರವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಮಳೆ ಮಾಪನ ಕೇಂದ್ರದ ಸುತ್ತ ಜಾಲಿ ಕಂಟಿ ಬೆಳೆದು ಕಸ ಕಡ್ಡಿಯ ತಾಣವಾಗಿ ಮಾರ್ಪಟ್ಟಿದೆ.ಸರ್ಕಾರ ಲಕ್ಷಾಂತರ ಹಣ ಖರ್ಚು ಮಾಡಿ ತಾಲೂಕು ಕೇಂದ್ರದಲ್ಲಿ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಮಾಪನ ಕೇಂದ್ರವನ್ನು ನಿರ್ಮಾಣ ಮಾಡಿದೆ. ಈ ಮಾಪನ ಕೇಂದ್ರವೀಗ ಪಾಳು ಬಿದ್ದಿದೆ. ಅಲ್ಲದೇ ಯಂತ್ರಗಳು ತುಕ್ಕು ಹಿಡಿದು ಸರಿಯಾಗಿ ಕಾರ್ಯನಿರ್ವಹಿಸದ ಸ್ಥಿತಿಗೆ ತಲುಪಿವೆ. ಮಳೆ ಮಾಪನ ಯಂತ್ರಕ್ಕೆ ಅಡ್ಡವಾಗಿ ಜಾಲಿ ಕಂಟಿಗಳು ಬೆಳೆದಿರುವುದರಿಂದ ಮಳೆ ದಾಖಲಾತಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ಜಾಣ ಕುರುಡು: ಮಿನಿ ವಿಧಾನಸೌಧದಲ್ಲಿ ಒಟ್ಟು 10 ವಿವಿಧ ಇಲಾಖೆಗಳಿವೆ. ಮೇಲಾಗಿ ಈ ಮಾಪನ ಕೇಂದ್ರಕ್ಕೆ ಸಂಬಂಧಪಟ್ಟ ಕಂದಾಯ ಇಲಾಖೆ ಸಹ ಈ ಸೌಧದಲ್ಲಿ ಇದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಅವಲಂಬಿತ ಕುಟುಂಬಗಳಿವೆ. ಅತಿವೃಷ್ಟಿ, ಅನಾವೃಷ್ಟಿ ತಾಲೂಕಿನಲ್ಲಿ ಸಾಮಾನ್ಯ. ಹೀಗಾಗಿ ರೈತರು ಪ್ರತಿವರ್ಷ ಬೆಳೆವಿಮೆ ತುಂಬುತ್ತಾರೆ. ರೈತರಿಗೆ ಈ ಭಾಗದಲ್ಲಿ ಮಳೆ ಆಧರಿತವಾಗಿ ವಿಮೆಪರಿಹಾರ ನೀಡಬೇಕೆಂಬ ನಿಯಮವಿದೆ. ಆದರೆ ಪಟ್ಟಣದಲ್ಲಿರುವ ಮಳೆ ಮಾಪನ ಕೇಂದ್ರ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ತಾಲೂಕಿನಲ್ಲಿ ಬಿದ್ದ ಮಳೆಯ ಪ್ರಮಾಣ ಸರಿಯಾಗಿ ದಾಖಲಾಗುತ್ತಿಲ್ಲ. ಇದರಿಂದ ಬೆಳೆವಿಮೆ ಪರಿಹಾರ ವಿತರಣೆಗೂ ಅಡ್ಡಿಯಾಗುತ್ತಿದೆ ಎಂಬುದು ರೈತರ ಅಳಲು.
ಸಮರ್ಪಕ ನಿರ್ವಹಣೆ: ನರಗುಂದದ ಪಟ್ಟಣದಲ್ಲಿನ ಮಳೆ ಮಾಪನ ಕೇಂದ್ರ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ಇದರಿಂದ ತಾಲೂಕಿನಲ್ಲಿ ಬಿದ್ದ ಮಳೆ ಪ್ರಮಾಣ ಸಮರ್ಪಕವಾಗಿ ದಾಖಲು ಆಗುತ್ತಿಲ್ಲ. ಇದರಿಂದ ರೈತರ ಬೆಳೆವಿಮೆ ಪರಿಹಾರಕ್ಕೂ ಕುತ್ತು ಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಮಳೆ ಮಾಪನ ಸಮರ್ಪಕ ನಿರ್ವಹಣೆಗೆ ಮುಂದಾಗಬೇಕು ಎಂದು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಆಗ್ರಹಿಸಿದರು.ಜಿಲ್ಲಾಡಳಿತಕ್ಕೆ ಮಾಹಿತಿ: ಈ ಮೊದಲು ಮಳೆ ಮಾಪನ ಕೇಂದ್ರವನ್ನು ಗ್ರಾಮಲೆಕ್ಕಾಧಿಕಾರಿಗಳು ನಿರ್ವಹಣೆ ಮಾಡುತ್ತಿದ್ದರು. ಸರ್ಕಾರ 2 ತಿಂಗಳ ಹಿಂದೆ ಜಿಲ್ಲಾಡಳಿತ ನಿರ್ವಹಣೆ ಮಾಡಬೇಕೆಂದು ಆದೇಶ ನೀಡಿದೆ. ಈ ಮಳೆ ಮಾಪನ ಕೇಂದ್ರದ ಸ್ಥಿತಿಗತಿ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದರು.