ಹೆಚ್ಚಿನ ದರಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಮಾರಿದರೆ ಕಠಿಣ ಕ್ರಮ

| Published : May 26 2024, 01:41 AM IST / Updated: May 26 2024, 12:02 PM IST

ಸಾರಾಂಶ

ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿ ರಸಗೊಬ್ಬರಗಳನ್ನು ಮಾರಾಟ ಮಾಡಬೇಕು. ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ತಾಲೂಕು ದಂಡಾಧಿಕಾರಿ ಸಂತೋಷ ಹಿರೇಮಠ ಹೇಳಿದರು.

ಶಿಗ್ಗಾಂವಿ: ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿ ರಸಗೊಬ್ಬರಗಳನ್ನು ಮಾರಾಟ ಮಾಡಬೇಕು. ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ತಾಲೂಕು ದಂಡಾಧಿಕಾರಿ ಸಂತೋಷ ಹಿರೇಮಠ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿಯ ಸಭಾಭವನದಲ್ಲಿ ಜರುಗಿದ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಪೂರ್ವಸಿದ್ಧತೆ ಸಭೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟಗಾರರನ್ನು ಉದ್ದೇಶಿಸಿ ಮಾತನಾಡಿದರು. ಸರ್ಕಾರದ ನಿಯಮಾವಳಿಯಂತೆ ಅಗ್ರೋಗಳಲ್ಲಿ ಕಡ್ಡಾಯವಾಗಿ ಬೀಜ, ರಸಗೊಬ್ಬರಗಳ ಬೆಲೆ ಸೂಚಿ ಫಲಕ, ಸ್ಟಾಕ್ ಮಾಹಿತಿ ಸೇರಿದಂತೆ ರೈತರಿಗೆ ಉಪಯುಕ್ತ ಮಾಹಿತಿ ಫಲಕ ಹಾಕಬೇಕು, ಜಿ.ಎಸ್.ಟಿ ಬಿಲ್ ಮೂಲಕ ವಿತರಣೆ ಆಗಬೇಕು, ನಿಯಮ ಉಲ್ಲಂಘನೆ ಮಾಡಿದರೆ ಲೈಸೆನ್ಸ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.

ತಾಲೂಕು ಕೃಷಿ ಇಲಾಖೆಯ ಎ.ಡಿ. ಸುರೇಶ ಬಾಬು ದೀಕ್ಷಿತ ಮಾತನಾಡಿ, ಜೂನ್‌ನಿಂದ ಸೆಪ್ಟೆಂಬರ್‌ ವರೆಗಿನ ಮುಂಗಾರು ಹಂಗಾಮಿಗೆ ತಾಲೂಕಿನಾದ್ಯಂತ 6553 ಟನ್ ಯೂರಿಯಾಕ್ಕೆ ಬೇಡಿಕೆ ಇದ್ದು, 2716 ಟನ್ ಪೂರೈಸಿದ್ದು ಅದರಲ್ಲಿ 452 ಟನ್ ಮಾರಾಟವಾಗಿದೆ.2845  ಟನ್ ಡಿಎಪಿಗೆ ಬೇಡಿಕೆ ಇದ್ದು, 1058  ಟನ್ ಪೂರೈಸಿದ್ದು ಅದರಲ್ಲಿ,995  ಟನ್ ಮಾರಾಟವಾಗಿದೆ.1925 ಟನ್ ಕಾಂಪ್ಲೆಕ್ಸ್‌ಗೆ ಬೇಡಿಕೆ ಇದ್ದು, 1152 ಟನ್ ಪೂರೈಸಿದ್ದು ಅದರಲ್ಲಿ, 750  ಟನ್ ಮಾರಾಟವಾಗಿದೆ. ರಸಗೊಬ್ಬರದ ಕೊರತೆಯಾಗದಂತೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಕ್ಯೂಆರ್ ಕೋಡ್ ಮೂಲಕ ವಿತರಿಸಲಾಗುತ್ತಿದ್ದು, ವಿತರಣೆಯಲ್ಲಿ ವಿಳಂಬ ಆಗುತ್ತಿರುವುದರಿಂದ ರೈತರು ಸಹಕರಿಸಬೇಕು ಎಂದರು.

ಖಾಸಗಿ ವ್ಯಾಪಾರಿಗಳಿಗೆ ತಿಂಗಳು ಮುಂಚೆ ರಸಗೊಬ್ಬರ ವಿತರಣೆಯಾಗುತ್ತಿದ್ದು, ಸೊಸೈಟಿ ಮತ್ತು ಎಫ್.ಪಿ.ಓಗಳಿಗೆ ಕೊನೆಗಳಿಗೆಯಲ್ಲಿ ಬೇಡಿಕೆಗಿಂತ ಕಡಿಮೆ ರಸಗೊಬ್ಬರ ಹಂಚಿಕೆ ಮಾಡಲಾಗುತ್ತಿದೆ. ಮುಂಗಾರಿನ ಕೃಷಿ ಚಟುವಟಿಕೆಗಳಿಗೆ ತುದಿಗಾಲಲ್ಲಿ ನಿಂತ ರೈತ ಆತುರದಲ್ಲಿ ಖಾಸಗಿ ಅಗ್ರೋಗಳಲ್ಲಿ ಹೆಚ್ಚಿನ ದರ ನೀಡಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ ಎಂದು ಶಿಗ್ಗಾಂವಿ ಮಹಾನಂದಿ ಎಫ್‌.ಪಿ.ಓ ಅಧ್ಯಕ್ಷ ಸಂತೋಷ ಕಟಗಿ ಹೇಳಿದರು.

ರಸಗೊಬ್ಬರ ತಯಾರಕರು ಅವಶ್ಯವಿರುವ ಗೊಬ್ಬರದೊಂದಿಗೆ ಬೇರೆ ಗೊಬ್ಬರವನ್ನು ಲಿಂಕ್ ಮಾಡಿ ಮಾರುವಂತೆ ಅಗ್ರೋ ಮಾಲೀಕರಿಗೆ ಒತ್ತಡ ಹಾಕುತ್ತಿದ್ದು, ರೈತರು ತಮಗೆ ಬೇಕಾದ ಗೊಬ್ಬರಗಳೊಂದಿಗೆ ಬೇಡವಾದ ಗೊಬ್ಬರವನ್ನು ಖರೀದಿಸುವ ಅನಿವಾರ್ಯತೆ ಎದುರಾಗುತ್ತಿದ್ದು, ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ, ಈ ಪದ್ದತಿ ಕೊನೆಯಾಗಬೇಕು ರೈತ ಮುಖಂಡ ಬಸಲಿಂಗಪ್ಪಾ ನರಗುಂದ ಹೇಳಿದರು.