ಜೀವಿಸಿದ ದಿನಗಳಿಗಿಂತ ಮಾಡಿದ ಸಾಧನೆ ಮುಖ್ಯ: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ

| Published : May 26 2024, 01:41 AM IST

ಜೀವಿಸಿದ ದಿನಗಳಿಗಿಂತ ಮಾಡಿದ ಸಾಧನೆ ಮುಖ್ಯ: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಎಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ ಜೀವಿಸಿದ ಅವಧಿಯಲ್ಲಿ ಏನು ಸಾಧನೆ ಮಾಡಿದ್ದೇವೆ ಎನ್ನುವುದು ಪ್ರಮುಖವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ವಕೀಲ ದೇವರಾಜೇಗೌಡ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಹಾಸನದಲ್ಲಿ ರಕ್ತದಾನ ಶಿಬಿರವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸಲಹೆ । ರಕ್ತದಾನ ಶಿಬಿರ । ಗಿಡಕ್ಕೆ ನೀರು ಹಾಕಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹಾಸನ

ಈ ಭೂಮಿ ಮೇಲೆ ಎಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ ಜೀವಿಸಿದ ಅವಧಿಯಲ್ಲಿ ಏನು ಸಾಧನೆ ಮಾಡಿದ್ದೇವೆ ಎನ್ನುವುದು ಪ್ರಮುಖವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ವಕೀಲ ದೇವರಾಜೇಗೌಡ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜು ಸಭಾಂಗಣದಲ್ಲಿ ಮಾನವ ಹಕ್ಕುಗಳ ಒಕ್ಕೂಟ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಘಟಕ ಮತ್ತು ರೆಡ್ ರಿಬ್ಬನ್ ಮತ್ತು ಜೀವ ಸಂಜೀವಿನಿ ರಕ್ತ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ರಕ್ತದಾನ ಎಂದರೆ ದಾನಗಳಲ್ಲಿ ಶ್ರೇಷ್ಠ ಎಂದು ಕರೆಯುವುದುಂಟು. ಅದೇ ರೀತಿ ಅನ್ನದಾನ ಮಾಡಿದರೆ ಅದನ್ನು ಶ್ರೇಷ್ಠ ಎಂದು ಕರೆಯುತ್ತಾರೆ. ನಾವು ಮಾಡುವ ದಾನ ಇಲ್ಲವೇ ಸೇವೆಯೇ ಪ್ರಮುಖ ದಾನಗಳು ಹಾಗೂ ಸಮಾಜಕ್ಕೆ ಕೊಡುವ ಕೊಡುಗೆ ಆಗಿದೆ. ಮನುಷ್ಯನಾಗಿ ನಾವು ಎಷ್ಟು ದಿನಗಳ ಕಾಲ ಬದುಕಿದ್ದೇವೆ ಎನ್ನುವುದು ಮುಖ್ಯವಾದುದಲ್ಲ. ಬದುಕಿದ ಅವಧಿಯಲ್ಲಿ ಏನು ಸಾಧನೆ ಮಾಡಿದ್ದೇವೆ ಎನ್ನುವುದು ಮುಖ್ಯವಾಗಲಿದೆ’ ಎಂದು ಕಿವಿಮಾತು ಹೇಳಿದರು.

‘ಅಪಘಾತದ ಮತ್ತು ಇತರೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚು ಇರುವುದರಿಂದ ರಕ್ತದಾನದ ಅವಶ್ಯಕತೆ ಬಹಳ ಇದೆ. ಆರೋಗ್ಯವಂತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕನಿಷ್ಠ ನಾಲ್ಕರಿಂದ ಆರು ತಿಂಗಳಲ್ಲಿ ರಕ್ತದಾನ ಮಾಡಿದರೆ ಹೊಸ ರಕ್ತ ಉತ್ಪತ್ತಿ ಆಗಲಿದ್ದು, ಯಾವ ಸಮಸ್ಯೆ ಇರುವುದಿಲ್ಲ. ಆರೋಗ್ಯವಂತರಾಗಿ ಇರಬಹುದು. ನಾವು ಇಂದು ಕೊಟ್ಟಂತಹ ರಕ್ತ ಮತ್ತೊಬ್ಬರ ಪ್ರಾಣ ರಕ್ಷಣೆ ಆಗುತ್ತದೆ. ರಕ್ತದಾನ ಮಾಡುವುದು ಬಹಳ ಶ್ರೇಷ್ಠವಾದ ಕೆಲಸ. ತಪ್ಪು ಕಲ್ಪನೆಯಿಂದ ಎಷ್ಟೊ ಜನರು ರಕ್ತದಾನ ಮಾಡಲು ಹಿಂದೇಟು ಹಾಕುತ್ತಾರೆ ಮುಂದೆ ಬರುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಪಿ, ಶುಗರ್ ಇಲ್ಲದಿದ್ದರೂ ಭಯದಿಂದ ರಕ್ತ ಕೊಡಲು ಹಿಂಜರಿಯುತ್ತಿದ್ದಾರೆ. ರಕ್ತ ಕೊಡುವುದರಿಂದ ಯಾವುದೇ ರೀತಿಯ ಅನಾಹುತ ಆಗುವುದಿಲ್ಲ. ಹೆಣ್ಣಾಗಲಿ, ಗಂಡಾಗಲಿ ರಕ್ತದಾನ ಮಾಡಿದರೆ ಇನ್ನೊಬ್ಬರ ಪ್ರಾಣ ಉಳಿಸಿದ ಪುಣ್ಯ ದೊರೆಯುತ್ತದೆ ಎಂದು ಹೇಳಿದರು.

ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಬಿಪಿ, ಶುಗರ್ ಕಾಯಿಲೆ ಪರೀಕ್ಷೆ ಮಾಡಲಾಯಿತು. ನೂರಾರು ಜನ ವಿದ್ಯಾರ್ಥಿನಿಯರು ರಕ್ತದಾನದಲ್ಲಿ ಪಾಲ್ಗೊಂಡಿದ್ದರು.

ಎ.ವಿ. ಕಾಂತಮ್ಮ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಸೀ.ಚ. ಯತೀಶ್ವರ್, ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ದೇಶಕ ಡಾ ಎಂ.ಉಮೇಶ್, ಮಾನವ ಹಕ್ಕುಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಯಲಗುಂದ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಜಿ. ಕುಮಾರ್, ಎ.ವಿ.ಕಾಂತಮ್ಮಮಹಿಳಾ ಕಾಲೇಜು ಐಕ್ಯೂಎಸಿ ಸಂಯೋಜಕಿ ಎಸ್.ಎಚ್.ವಾರೀಜ, ಕಾಲೇಜಿನ ರೆಡ್‌ಕ್ರಾಸ್ ಘಟಕದ ಸಂಚಾಲಕಿ ಎನ್.ಎಸ್.ಶಶಿಕಲಾ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪಿ.ಮಂಜುಳ, ಎಚ್.ಎನ್.ಶೈಲಜ ಇದ್ದರು. ನಿರೂಪಣೆಯನ್ನು ಕಾಲೇಜಿನ ವಿದ್ಯಾರ್ಥಿಗಳಾದ ಫಾತಿಮಾ ಬೇಗಂ ನಡೆಸಿದರು. ರುಷ್ಮಾ ಭಾನು ದೇವರ ನಾಮ ಹಾಡಿದರು. ಟಿ.ಆರ್.ಶುಭ ಸ್ವಾಗತಿಸಿದರು. ಪೂರ್ವಿಕ ವಂದಿಸಿದರು.