ಸಾರಾಂಶ
ವಿಜ್ಞಾನ ಬೆಳೆದಂತೆ ಮೌಢ್ಯತೆಯೂ ಹೆಚ್ಚುತ್ತಿರುವುದು ಸೋಜಿಗದ ಸಂಗತಿಯಾಗಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು ಜನರು ಮೌಢ್ಯವನ್ನು ಧಿಕ್ಕರಿಸಬೇಕು, ವಿಶ್ವಕ್ಕೆ ಜ್ಞಾನದ ಸಂದೇಶವನ್ನು ಕೊಟ್ಟ ಬುದ್ಧರ ತತ್ವ ಪಾಲನೆಯನ್ನು ಮಾಡಬೇಕು ಎಂದು ಚೆನ್ನಲಿಂಗಾನಹಳ್ಳಿ ಜೇತವನ ಬುದ್ಧವಿಹಾರದ ಮನೋರಖ್ಖಿತ ಬಂತೇಜಿ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಯಳಂದೂರು
ವಿಜ್ಞಾನ ಬೆಳೆದಂತೆ ಮೌಢ್ಯತೆಯೂ ಹೆಚ್ಚುತ್ತಿರುವುದು ಸೋಜಿಗದ ಸಂಗತಿಯಾಗಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು ಜನರು ಮೌಢ್ಯವನ್ನು ಧಿಕ್ಕರಿಸಬೇಕು, ವಿಶ್ವಕ್ಕೆ ಜ್ಞಾನದ ಸಂದೇಶವನ್ನು ಕೊಟ್ಟ ಬುದ್ಧರ ತತ್ವ ಪಾಲನೆಯನ್ನು ಮಾಡಬೇಕು ಎಂದು ಚೆನ್ನಲಿಂಗಾನಹಳ್ಳಿ ಜೇತವನ ಬುದ್ಧವಿಹಾರದ ಮನೋರಖ್ಖಿತ ಬಂತೇಜಿ ಕರೆ ನೀಡಿದರು.ತಾಲೂಕಿನ ಮದ್ದೂರು ಗ್ರಾಮದಲ್ಲಿ ಸರ್ವೋದಯ ಸೇವಾ ಸಮಿತಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 2569ನೇ ಬುದ್ಧ ಪೂರ್ಣಿಮೆ ಹಾಗೂ 2024-25 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಇಂದು ಅನೇಕರು ದುಶ್ಚಟಗಳ ದಾಸ್ಯರಾಗುತ್ತಿದ್ದಾರೆ. ಬುದ್ಧರ ಪಂಚಶೀಲ ತತ್ವಗಳ ಪಾಲನೆ ಮಾಡಿದ್ದಲ್ಲಿ ಶುದ್ಧ ಜೀವನವನ್ನು ನಡೆಸಬಹುದು. ಜಗತ್ತಿನಲ್ಲಿ ಶಾಂತಿ ಸಂದೇಶ ಸಾರಲು ಬುದ್ಧಾನುಕರಣೆಯೇ ಶಾಶ್ವತ ಮಾರ್ಗವಾಗಿದೆ. ಹಾಗಾಗಿ ನಮ್ಮ ಮಕ್ಕಳಿಗೆ ಬುದ್ಧರ ಸಂದೇಶಗಳನ್ನು ಉಣ ಬಡಿಸಬೇಕು. ಮನೆಯಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸಬೇಕು. ಮನಸ್ಸು, ಮನೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದು ಸಲಹೆ ನೀಡಿದರು.ಪಿಎಸ್‌ಐ ಆಕಾಶ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ಮಾರಕವಾಗಿ ಪರಿಣಮಿಸುತ್ತಿದೆ. ಇದರಿಂದ ಒಳಿತಿಗಿಂತ ಕೆಡಕೇ ಹೆಚ್ಚಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಇದರಿಂದ ಮಕ್ಕಳನ್ನು ದೂರವಿಡಬೇಕು. ಒಳ್ಳೆಯ ಸಂಸ್ಕಾರ ನೀಡಬೇಕು. ಬುದ್ಧ, ಅಂಬೇಡ್ಕರ್ ತತ್ವಾದರ್ಶಗಳ ಪಾಲನೆ ಮಾಡುವಂತೆ ಪ್ರೇರೇಪಿಸಬೇಕು. ಯುವಕರು ದುಶ್ಚಟಗಳಿಂದ ದೂರವಿರಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು. ಡಾ. ವೆಂಕಟಸ್ವಾಮಿ ಮಾತನಾಡಿ, ಧ್ಯಾನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಸುಲಭ ಸಾಧನವಾಗಿದೆ. ಇದನ್ನು ಕ್ರಿ.ಪೂ.ದಲ್ಲೇ ಬುದ್ಧರು ಹೇಳಿ ಕೊಟ್ಟಿದ್ದಾರೆ. ಉತ್ತಮ ಆರೋಗ್ಯ ಇಂದಿನ ಅನಿವಾರ್ಯವಾಗಿದೆ. ಶುದ್ಧ ಮನಸ್ಸು ಇದ್ದರೆ, ಉತ್ತಮ ಆರೋಗ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ನಾವು ಬೌದ್ಧ ಧರ್ಮದಲ್ಲಿರುವ ತತ್ವಗಳನ್ನು ಪಾಲನೆ ಮಾಡಬೇಕು. ಅಂಬೇಡ್ಕರ್ ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.ಇದೇ ಸಂದರ್ಭದಲ್ಲಿ 2024-25ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ, ಮಂಜುಳಾ ರಂಗಸ್ವಾಮಿ, ಸುಶೀಲಮ್ಮ ಶಿಕ್ಷಕ ನಂಜುಂಡಸ್ವಾಮಿ, ಬಿ. ದೊರೆಸ್ವಾಮಿ, ಎಂ.ಬಿ. ನಂಜುಂಡಸ್ವಾಮಿ ಯಜಮಾನರಾದ ನರೇಂದ್ರಕುಮಾರ್, ದಂದೀಪ್, ಚಾಮರಾಜು, ವಿಶ್ವನಾಥ್, ಅನಂತ್‌ಮದ್ದೂರು, ಮಧು, ನಂದೀಶ್, ಲೊಕೇಶ್, ನವೀನ್‌ಮೂರ್ತಿ ಸೇರಿದಂತೆ ಗ್ರಾಮಸ್ಥರು ಇದ್ದರು.