ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತಾಲೂಕಿನ ದೊಡ್ಡಬೆಳವಂಗಲ ಸುತ್ತಮುತ್ತ ಫಲವತ್ತಾದ 2,100 ಎಕರೆ ಕೃಷಿ ಭೂಮಿ ಸ್ವಾಧೀನದ ವಿರುದ್ಧ ಸ್ಥಳೀಯ ರೈತರು ದೊಡ್ಡಬೆಳವಂಗಲದ ಹಳೆ ನಾಡಕಚೇರಿ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿ ಧರಣಿಯಲ್ಲಿ ಭಾಗವಹಿಸಲಾಗುವುದು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಐಎಡಿಬಿಯಿಂದ ವಿವೇಚನಾ ರಹಿತವಾದ ಮತ್ತು ಬಲವಂತದ ಭೂಸ್ವಾಧೀನ ಕೈಬಿಡಬೇಕು. ಎಸ್.ಟಿ.ಆರ್.ಆರ್ ರಸ್ತೆ ಮತ್ತು ಕ್ವಿನ್ ಸಿಟಿಗೆ ಹೊಂದಿಕೊಂಡಿರುವ ಈ ಜಮೀನು ಖಾಲಿ ಇದೆ ಎನ್ನುವ ಪ್ರಸ್ತಾವವನ್ನು ಕಂದಾಯ ಇಲಾಖೆ ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸುವ ಮೂಲಕ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ ಎಂದರು.

ಸ್ವಾಧೀನಕ್ಕೆ ಪ್ರಸ್ತಾಪಿತ ಜಮೀನುಗಳ ವ್ಯಾಪ್ತಿಯಲ್ಲಿ ಸೊಣ್ಣೇನಹಳ್ಳಿ, ರಾಂಪುರ, ಅಕ್ಕತಮ್ಮನಹಳ್ಳಿ, ನಾರನಹಳ್ಳಿ, ದೊಡ್ಡಬೆಳವಂಗಲ ಗ್ರಾಮಗಳ ಕೆರೆಗಳು, ಐವತ್ತಕ್ಕೂ ಹೆಚ್ಚು ಕುಂಟೆಗಳು ಇವೆ. ತಿಪ್ಪಗೊಂಡನಹಳ್ಳಿ ಜಲಾನಯನ ಪಾತ್ರದ ಅರ್ಕಾವತಿ, ಕುಮುದ್ವತಿ ನದಿಯ ಹಳ್ಳ ಕೊಳ್ಳಗಳಿಂದ ಸುತ್ತುವರೆದ ಜಮೀನುಗಳು ಇದರಲ್ಲಿವೆ. 2,100 ಎಕರೆ ಜಮೀನಿನಲ್ಲಿ ಸುಮಾರು ಅರ್ಧಕ್ಕೂ ಹೆಚ್ಚು ಭೂಭಾಗದಲ್ಲಿ ಅಡಿಕೆ, ತೆಂಗು, ಮಾವು, ದ್ರಾಕ್ಷಿ, ಹಣ್ಣು ತರಕಾರಿ ತೋಟಗಳಿವೆ. ಉಳಿದ ಭಾಗದಲ್ಲಿ ರಾಗಿ, ಜೋಳ, ಮಳೆಯಾಶ್ರಿತ ಬೆಳೆ ಬೆಳೆಯಲಾಗುತ್ತಿದೆ. 50ಕ್ಕೂ ಹೆಚ್ಚು ಕೋಳಿ ಸಾಕಾಣಿಕೆ ಫಾರಂಗಳು ಇವೆ. ಪ್ರತಿ ಗ್ರಾಮದಿಂದ ದಿನವೊಂದಕ್ಕೆ ಸರಾಸರಿ 1,000 ಲೀಟರ್ ಹಾಲನ್ನು ನಗರಕ್ಕೆ ಪೂರೈಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮೇವಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದರು.

ರೈತರ ಅಭಿಪ್ರಾಯ ಪಡೆಯದೆ, ಸ್ಥಳೀಯ ಪಂಚಾಯಿತಿಗಳನ್ನು ಲೆಕ್ಕಿಸದೆ, ಪರಿಸರ ಮತ್ತು ಜೀವವೈವಿಧ್ಯದ ಸಮತೋಲನವನ್ನು ಪರಿಗಣಿಸದೆ ರೈತರ ಕೃಷಿ ಜಮೀನಿಗೆ ಲಗ್ಗೆ ಹಾಕುವುದು, ಭೂಸ್ವಾಧೀನಕ್ಕೆ ನೊಟೀಸ್ ನೀಡುವುದು ಕೆಐಎಡಿಬಿ ಕೆಟ್ಟ ಚಾಳಿಯಾಗಿದೆ ಎಂದು ಕಿಡಿಕಾರಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಗೆಂದು ವಶಪಡಿಸಿಕೊಂಡ ಭೂಮಿಯನ್ನು ಬಿಲ್ಡರ್‌ಗಳಿಗೆ, ವಿಶ್ವವಿದ್ಯಾಲಯ, ಕೈಗಾರಿಕೇತರ ಉದ್ದೇಶಗಳಿಗೆ ಮಾರಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಈ ಭಾಗದ ರೈತರು ಸಣ್ಣ ಹಿಡುವಳಿದಾರರಾಗಿದ್ದು ಹಿಂದಿನ ತಲೆಮಾರಿನಿಂದ ಬಂದಿರುವ ತಮ್ಮ ಪಾಲಿನ ಭೂಮಿಯನ್ನು ತಮ್ಮ ಕುಟುಂಬಗಳ ಮುಂದಿನ ತಲೆಮಾರುಗಳಿಗೆ ವರ್ಗಾಯಿಸುವ ಮತ್ತು ಜೀವನೋಪಾಯಕ್ಕಾಗಿ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.


ಸಿಐಟಿಯು ತಾಲೂಕು ಸಂಚಾಲನಾ ಸಮಿತಿ ಸಂಚಾಲಕ ರೇಣುಕಾರಾಧ್ಯ ಮಾತನಾಡಿ, ಕೇಂದ್ರದ ಕಾರ್ಮಿಕ ಸಂಹಿತೆಗಳ ವಿರುದ್ಧ ಏಪ್ರಿಲ್ 14 ರಿಂದ ಮೇ 30ರವರೆಗೆ ಕಾರ್ಮಿಕರ ಬದುಕನ್ನು ರಕ್ಷಿಸುವ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ. ಕಾರ್ಮಿಕ ಕಾನೂನುಗಳು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವ ಕಾರಣ, ರಾಜ್ಯಸರ್ಕಾರದ ಅಧಿಕಾರವನ್ನು ಬಳಸಿಕೊಂಡು ವೈಜ್ಞಾನಿಕ ಕನಿಷ್ಠ ವೇತನವನ್ನು ಜಾರಿಗೆ ತರಲು ಒಕ್ಕೂಟ ವ್ಯವಸ್ಥೆಯಲ್ಲಿ ಅವಕಾಶ ಇದೆ. ಕಾರ್ಮಿಕರ ಮೂಲ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಸ್ತಾಪಗಳಿಗೆ ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಅಗತ್ಯವಾದ ತಿದ್ದುಪಡಿಗಳನ್ನು ಮಾಡಿದ ನಂತರ ರಾಜ್ಯದಲ್ಲಿ ನಿಯಮಾವಳಿಗಳನ್ನು ರೂಪಿಸಬೇಕು ಎಂದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಲ್.ಸಿ.ಸುಮ, ಅನಿಲ್ ಗುಪ್ತ, ಪಿ.ಕೆ. ವೆಂಕಟೇಶ್, ಸಂಚಾಲನ ಸಮಿತಿಯ ತ್ರಿವೇಣಿ, ನಿರ್ಮಲ, ಮೋಹನ್ ರಾಜು, ನರೇಶ್ ಕುಮಾರ್, ಮನೀಶ್ ಶರ್ಮಾ, ಬೀರೇಂದ್ರ ಗುಪ್ತ ಇದ್ದರು.