ಸಾರಾಂಶ
ಎಲ್.ವಿ ನವೀನ್‌ಕುಮಾರ್
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣವಕ್ಫ್ ಗುಮ್ಮನಿಂದ ಭಯಭೀತರಾಗಿರುವ ರೈತರು ಇದೀಗ ಅರಣ್ಯ ಇಲಾಖೆ ಅರಣ್ಯ ಒತ್ತುವರಿ ಆರೋಪದಡಿ ನೋಟಿಸ್ ಜಾರಿಗೊಳಿಸಿರುವುದರಿಂದ ಅರಣ್ಯರೋಧನ ಅನುಭವಿಸುವಂತಾಗಿದೆ.
ಕಳೆದ 60-70ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ತಾಲೂಕಿನ ಅಲ್ಲಾಪಟ್ಟಣ ಗ್ರಾಮದ 14ಕ್ಕೂ ರೈತ ಕುಟುಂಬಗಳು ಸಾಗುವಳಿ ಚೀಟಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅನುಭವದಲ್ಲಿದ್ದು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿರುವುದರಿಂದ ರೈತರು ಕಂಗಾಲಾಗುವಂತೆ ಮಾಡಿದೆ.ಈ ಭಾಗದಲ್ಲಿ ಕರಿಘಟ್ಟ ಅರಣ್ಯ ಮೀಸಲು ಪ್ರದೇಶವಿದ್ದು, ಜೊತೆಗೆ ಸಾವಿರಾರು ಎಕರೆ ಗೋಮಾಳ ಸೇರಿದಂತೆ ರೈತರ ಜಮೀನುಗಳಿವೆ. ಇದೀಗ ಅರಣ್ಯ ಇಲಾಖೆ ತನ್ನದೇ ಆದ ನಕ್ಷೆ ಸಿದ್ಧಪಡಿಸಿದ್ದು, ಕರಿಘಟ್ಟ ಅರಣ್ಯ ಪ್ರದೇಶದಿಂದ ಸುಮಾರು 1.5 ಕಿ.ಮೀ.ವರೆಗೆ ಅಲ್ಲಾಪಟ್ಟಣ ಗ್ರಾಮಕ್ಕೆ ಸೇರಿದ ಸರ್ವೇ ನಂ. 212ರ ಸಿಡಿಎಸ್ ನಾಲೆ ಬಳಿಯ ಕುದುರೆ ಮನೆ ಜಾಗದಿಂದ ನೀಲನಕೊಪ್ಪಲು, ನಾಗರಘಟ್ಟ ಕಾವಲು, ಗೌಡಹಳ್ಳಿ, ಗಣಂಗೂರು, ಸಿದ್ದಾಪುರ ಸೇರಿದಂತೆ ರೈತರ ಸಾವಿರಾರು ಎಕರೆ ಪ್ರದೇಶದ ಜಮೀನನ್ನು ಕಬಳಿಸಲು ಹುನ್ನಾರ ನಡೆಯುತ್ತಿದೆ ಎಂದು ರೈತರಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
14ಕ್ಕೂ ಹೆಚ್ಚು ಕುಟುಂಬಗಳಿಗೆ ನೋಟಿಸ್:ಈಗಾಗಲೇ ತಾಲೂಕಿನಾದ್ಯಂತ ಹಲವು ರೈತರ ಆಸ್ತಿ ಸೇರಿದಂತೆ ಸರ್ಕಾರಿ ಜಾಗಗಳ ಆರ್‌ಟಿಸಿಗಳಲ್ಲಿ ವಕ್ಫ್ ಬೋರ್ಡ್ ಎಂಬುದಾಗಿ ನಮೂದಾಗುತ್ತಿರುವ ಆತಂಕದ ನಡುವೆಯೇ ಅಲ್ಲಾಪಟ್ಟಣದ ಗ್ರಾಮದ ಸರ್ವೇ ನಂ. 212, 226 ಹಾಗೂ ನೀಲನಕೊಪ್ಪಲು ಗ್ರಾಮದ ಸರ್ವೇ ನಂ.36ರಲ್ಲಿ ಬರುವ ಚಲುವರಾಜು, ಜಯಕುಮಾರ್, ರವೀಂದ್ರ, ರಾಜೇಶ, ಸಿದ್ದೇಗೌಡ, ರವಿಚಂದ್ರ, ಅರುಣ್‌ಕುಮಾರ್, ವಿಷಕಂಠೇಗೌಡ, ಶಿವಲಿಂಗಣ್ಣ, ರಾಚಯ್ಯ, ಸಿದ್ದಯ್ಯ, ನಾಗೇಶ್ ಸೇರಿದಂತೆ 14ಕ್ಕೂ ಹೆಚ್ಚು ರೈತರಿಗೆ ನೋಟಿಸ್ ಜಾರಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಬರುವಂತೆ ತಿಳಿಸಿದೆ.
ರೈತರಲ್ಲಿ ಆತಂಕ:ಇದರಿಂದ ರೈತರು ಕಂಗಾಲಾಗಿ ಆತಂಕಗೊಂಡಿದ್ದು, ಸುಮಾರು 60-70ವರ್ಷಗಳ ಹಿಂದೆ ನಮ್ಮ ತಾತ, ಮುತ್ತಾತಂದಿರ ಕಾಲದಿಂದಲೂ ಬೇಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ನಮ್ಮ ಬಳಿ ಸಾಗುವಳಿ ಚೀಟಿ, ಕೆಲವರಿಗೆ ಕಂದಾಯ ಇಲಾಖೆ ಅಗತ್ಯ ದಾಖಲೆಗಳನ್ನು ನೀಡಿದೆ. ಅಲ್ಲದೆ ಅರಣ್ಯ ಜಾಗಕ್ಕೂ ನಮ್ಮ ಜಮೀನಿಗೂ ಸುಮಾರು 1 ರಿಂದ 1.5 ಕಿ.ಮೀ ದೂರವಿದೆ. ಇಲ್ಲಿನ ಯಾವೊಬ್ಬ ರೈತರು ಸಹ ಅರಣ್ಯ ಇಲಾಖೆಗೆ ಸೇರಿದ ಒಂದೇ ಒಂದು ಗಿಡವನ್ನು ಕತ್ತರಿಸಿ ಜಮೀನನ್ನಾಗಿ ಮಾಡಿಕೊಂಡಿಲ್ಲ. ಆದರೂ ಈ ಭಾಗದ ರೈತರಿಗೆ ನೋಟಿಸ್ ನೀಡುವ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮೂರ್ನಾಲ್ಕು ಬಾರಿ ಗಡಿ ಗುರುತು;ಗೊಂದಲ:ಇಲ್ಲಿನ ಜಮೀನುಗಳಲ್ಲಿ ಹಲವು ವರ್ಷಗಳಿಂದ ಬೇಸಾಯ ಮಾಡಿಕೊಂಡು ಬರುತ್ತಿದ್ದು, ದೀರ್ಘಾವದಿಯ ತೋಟದ ಬೆಳೆಗಳನ್ನು ಬೆಳೆದಿದ್ದೇವೆ. ಅರಣ್ಯ ಇಲಾಖೆಯು ಅರಣ್ಯ ಪಕ್ಕದಲ್ಲೇ ಹಲವು ವರ್ಷಗಳ ಹಿಂದೇಯೇ ದೊಡ್ಡ ಟ್ರಂಚನ್ನು ನಿರ್ಮಿಸಿ ತಮ್ಮ ಗಡಿ ಎಂದು ಘೋಷಿಸಿಕೊಂಡಿದ್ದರು. ಇದಾದ ಬಳಿಕ ಅರಣ್ಯ ಇಲಾಖೆ ಮೂರ್ನಾಲ್ಕು ಬಾರಿ ಗಡಿ ಗುರ್ತಿಸುತ್ತಿರುವುದಾಗಿ ಹೇಳಿ, ಒಂದೇ ಒಂದು ಬಾರಿ ಅಳತೆಯಲ್ಲೂ ಒಂದೊಂದು ಜಾಗ ಗುರುತು ಮಾಡಿ ಹೋಗುತ್ತಿದ್ದಾರೆ. ಇದೀಗ ನಮ್ಮಗಳ ಜಮೀನಿನ ಪಕ್ಕಕ್ಕೆ ಬಂದು ತೊಂದರೆ ನೀಡುತ್ತಿದ್ದಾರೆ. ಸರ್ಕಾರ 5 ಎಕರೆ ಜಮೀನಿಗಿಂದ ಕಡಿಮೆ ಇರುವ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ ಎಂದು ಹೇಳುತ್ತಿದೆ. ಆದರೆ, ಅರಣ್ಯ ಇಲಾಖೆ 2 ಎಕರೆಗಿಂತ ಕಡಿಮೆ ಇರುವ ರೈತರಿಗೂ ನೋಟಿಸ್ ನೀಡಿವುದು ಎಷ್ಟರ ಟ್ಟಿಗೆ ಸರಿ ಎಂದು ಈ ಭಾಗದ ರೈತರು ಪ್ರಶ್ನಿಸಿದ್ದಾರೆ.
ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿ ನಾಗರಾಜು ಪ್ರತಿಕ್ರಿಯಿಸಿ, ಸರ್ಕಾರ ಹಾಗೂ ಮೇಲಧಿಕಾರಿಗಳ ಆದೇಶದ ಮೇರೆಗೆ ಅರಣ್ಯ ಇಲಾಖೆಗೆ ಸೇರಿದ ಜಾಗದ ಗಡಿ ಗುರ್ತಿಸಲು ಮುಂದಾಗಿದ್ದೇವೆ.ಎಫ್‌ಐಆರ್ ದಾಖಲು:
2020-21 ಸಾಲಿನಲ್ಲಿ ಹಲವು ರೈತರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲು ಕೆಲ ರೈತರಿಗೆ ನೋಟಿಸ್ ನೀಡಲಾಗಿದೆ. ಇದೀಗ ಮೊದಲ ಹಂತವಾಗಿ ನೋಟಿಸ್ ನೀಡಿದ್ದು, ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಗೆ ಸೇರಿದ ನಕ್ಷೆ ಒಳಗೆ ಬರುವ ಪ್ರತಿಯೊಬ್ಬರಿಗೂ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.