ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಶಿಕ್ಷಕರೆಂದರೆ ಬಡ ಮೇಷ್ಟ್ರುಗಳಲ್ಲ, ಶಿಕ್ಷಕರೆಂದರೆ ಆತ್ಮೀಯತೆ, ಹೃದಯ ವೈಶಾಲ್ಯ ಹಾಗೂ ಬುದ್ಧಿವಂತಿಕೆಯುಳ್ಳ ಶ್ರೀಮಂತರೆಂದು ಪರಿಗಣಿಸಬೇಕಿದೆ ಎಂದು ಖ್ಯಾತ ಕನ್ನಡ ಚಲನಚಿತ್ರ ನಟಿ ವಿನಯಾ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.ಇಲ್ಲಿನ ಸಾವಿತ್ರಿ ಬಾಯಿ ಶಿಕ್ಷಕರ ಸಂಘದ ವತಿಯಿಂದ ಶನಿವಾರ ಪಟ್ಟಣದ ಎಸ್ಎಸ್ ಕೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯವರ ಜಯಂತ್ಯುತ್ಸವ ಸಮಾರಂಭದಲ್ಲಿ ಸಾವಿತ್ರಿಬಾಯಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಶಿಕ್ಷಕ ಸಂಘ ಸಾವಿತ್ರಿಬಾಯಿ ಪುಲೆ ಅವರ ಜಯಂತ್ಯುತ್ಸವ ಆಚರಣೆಗೆ ಮುಂದಾಗಿದ್ದು ಸಂತಸ ತಂದಿದೆ. ಇಷ್ಟು ಅಚ್ಚುಕಟ್ಟಾಗಿ ಜಯಂತಿ ಆಚರಿಸುತ್ತಿರುವುದು ಮಾದರಿಯಾಗಿದ್ದು, ಇಲ್ಲಿನ ಶಿಕ್ಷಕರ ಸಂಘಟನೆ ಮೆಚ್ಚುವಂತಹದ್ದಾಗಿದೆ. ಅಕ್ಷರ ಕಲಿತವರು ವಿದ್ಯಾವಂತ, ಬುದ್ಧಿವಂತ ಹಾಗೂ ಕಾರ್ಯಕ್ಷಮತೆಯುಳ್ಳವರಾಗಿದ್ದು ಅಕ್ಷರ ಕಲಿತವರ ಬದುಕು ಪ್ರಗತಿಯ ಸಂಕೇತವಾಗಿದೆ. ನಾನೂ ಕೂಡ ಒಬ್ಬ ಶಿಕ್ಷಕಿ ಎಂದು ಹೇಳಲು ಹೆಮ್ಮೆಯಾಗುತ್ತದೆ. ಕಾರಣ, ನಾನು ಕನಿಷ್ಠ 10 ಸಿನಿಮಾಗಳಲ್ಲಿ ಶಿಕ್ಷಕಿ ಹಾಗೂ ಪ್ರೊಫೆಸರ್ ಆಗಿ ಪಾತ್ರ ನಿರ್ವಹಿಸಿದ್ದೇನೆ. ನನ್ನ ವಿದ್ಯಾಭ್ಯಾಸದ ಅವಧಿಯ ಯಾವೊಬ್ಬ ಶಿಕ್ಷಕರನ್ನೂ ನಾನು ಮರೆತಿಲ್ಲ. ಶಿಕ್ಷಕರು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಹಾಗೂ ದೇಶಕ್ಕಾಗಿ ಹೋರಾಡಿದ ವೀರರ ವಿಚಾರಗಳನ್ನು ಮಕ್ಕಳಿಗೆ ತಿಳಿಸಿದಾಗ ಜ್ಞಾನ ವೃದ್ಧಿಯಾಗಲು ಸಾಧ್ಯವಿದೆ ಎಂದರು.
ಶಾಸಕ ಎಚ್.ವಿ.ವೆಂಕಟೇಶ್ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರತಿವರ್ಷ ಸರ್ಕಾರದಿಂದಲೇ ಸಾವಿತ್ರಿಬಾಯಿ ಪುಲೆ ಜಯಂತಿ ಆಚರಿಸುವ ವಿಚಾರವಾಗಿ ಸಿಎಂ ಹಾಗೂ ಸಚಿವರ ಜತೆ ಮಾತನಾಡಿ ಮನವಿ ಮಾಡಲಿದ್ದೇನೆ. ಶಿಕ್ಷಕರೆಂದರೆ ಅತ್ಯಂತ ಗೌರವ ಹೊಂದಿದ್ದೇನೆ. ಶಿಕ್ಷಕರ ಸಮಸ್ಯೆ ನಿವಾರಣೆಗೆ ಸದಾ ಸ್ಪಂದಿಸುತ್ತೇನೆ, ಸರ್ಕಾರ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿದೆ. ಜಿಪಂ, ತಾಪಂ ಹಾಗೂ ಇತರೆ ಚುನಾಯಿತ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿನಿಧಿಸಲು ಅವಕಾಶ ಕಲ್ಪಿಸಲಾಗಿದೆ. ಬರೀ ರಾಜಕೀಯವಷ್ಟೇ ಅಲ್ಲದೇ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಬರಬೇಕು ಎಂದು ತಿಳಿಸಿದರು.ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕರ ಫೆಡರೇಷನ್ ರಾಜ್ಯಾಧ್ಯಕ್ಷೆ ಡಾ.ಲತಾ ಎಸ್.ಮುಳೂರ ಅವರು ಸಾವಿತ್ರಿಬಾಯಿ ಪುಲೆ ಅವರ ಜಯಂತಿ ಆಚರಣೆ ಕುರಿತು ಸರ್ಕಾರಕ್ಕೆ ಒತ್ತಾಯಿಸಿ, ಶಿಕ್ಷಕರ ಸಮಸ್ಯೆ ಹಾಗೂ ಸಂಘದಿಂದ ರೂಪಿಸಿದ್ದ ಅನೇಕ ಕಾರ್ಯಕ್ರಮಗಳ ಕುರಿತು ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಜಯಂತ್ಯುತ್ಸವದ ಹಿನ್ನೆಲೆ ಸುಸಜ್ಜಿತ ಸಮುದಾಯ ಭವನ ಹಾಗೂ ಸಮಾರಂಭದಲ್ಲಿ ಭಾಗವಹಿಸಿದ್ದ ಸಾವಿರಾರು ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಿಕೊಟ್ಟ ಶಾಸಕ ವೆಂಕಟೇಶ್ ಅವರ ಉದಾರತೆ ಸ್ಮರಿಸಿ ಶಿಕ್ಷಕರು ಅಭಿನಂದನೆ ಸಲ್ಲಿಸಿದರು.ಚಲನಚಿತ್ರ ನಿರ್ಮಾಪಕ ಬಸವರಾಜು ಭೂತಾಳಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಮಹಿಳಾ ಸಾಧಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಾವಿತ್ರಿ ಬಾಯಿ ಪುಲೆ ಶಿಕ್ಷಕರ ಸಂಘದ ಅಧ್ಯಕ್ಷೆ ದುರ್ಗಮ್ಮ ಎ.ಅವರು ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ಗೀತಾ ಹನುಮಂತರಾಯಪ್ಪ, ಪುರಸಭೆ ಮಾಜಿ ಅಧ್ಯಕ್ಷ ರಿಜ್ವಾನ್ ಉಲ್ಲಾ, ಮುಖ್ಯ ಶಿಕ್ಷಕಿ ಸಾವಿತ್ರಮ್ಮ, ಲಕ್ಷ್ಮೀದೇವಿ. ಎಂ.ಪಿ.ಶಾಂತಾಕುಮಾರಿ, ಅರ್ಚನ, ಡಿ.ಬಿ.ಶೋಭಾ, ಸರೋಜಮ್ಮ ಹಾಗೂ ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘದ ಪದಾಧಿಕಾರಿಗಳು, ಅಪಾರ ಸಂಖ್ಯೆಯ ಶಿಕ್ಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು.