ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಓರ್ವ ವ್ಯಕ್ತಿಯು ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಲು ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಶಿಷ್ಟ ಶಿಕ್ಷಣದ ಜೊತೆಗೆ, ಜಾನಪದದಿಂದ ಮಾನವೀಯ ಮೌಲ್ಯಗಳನ್ನು ಕಲಿಯುವುದು ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಅಭಿಪ್ರಾಯಪಟ್ಟರು.ತುಮಕೂರು ವಿವಿ ವಿಜ್ಞಾನ ಕಾಲೇಜಿನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ತುಮಕೂರು ವಿವಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಜಾನಪದದ ನಡೆ, ವಿದ್ಯಾರ್ಥಿಗಳ ಕಡೆ’ ಎಂಬ ವಿಚಾರ ಸಂಕಿರಣ, ಜಾನಪದ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬದುಕಲು ಬೇಕಾಗುವ ಶೇ. 45- 50ರಷ್ಟು ಅನುಭವಗಳನ್ನು ಶಿಷ್ಟ ಶಿಕ್ಷಣದಿಂದ ಪಡೆದರೆ, ಶೇ. 35- 40ರಷ್ಟು ಅಂಶಗಳನ್ನು ನಾವು ಸಮಾಜವನ್ನು ನೋಡುವುದರಿಂದ ಕಲಿಯುತ್ತೇವೆ. ಆದರೆ ಉಳಿದ 10ರಷ್ಟು ಅಂಶಗಳು ನಮಗೆ ಜಾನಪದದಿಂದ ಸಿಗುತ್ತವೆ. ನಮ್ಮ ನಡೆ, ನುಡಿ, ಆಚಾರ, ವಿಚಾರ ಎಲ್ಲವೂ ಆಯಾಯ ಭಾಗದ ಜನಪದ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತವೆ ಎಂದರು.ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ದುಡಿಯುವ ವಯಸ್ಸಿನ ಮಾನವ ಸಂಪನ್ಮೂಲಕ್ಕೆ ಇಡೀ ಪ್ರಪಂಚದಾದ್ಯಂತ ಬೇಡಿಕೆ ಇದೆ. ಇದಕ್ಕೆ ಪ್ರಮುಖ ಕಾರಣ, ಭಾರತೀಯರನ್ನು ಪ್ರಭಾವಿಸಿರುವ ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳು. ಐದು ಸಾವಿರದಿಂದ 10 ಸಾವಿರ ವರ್ಷಗಳ ನಾಗರಿಕತೆಯ ಪರಂಪರೆಯನ್ನು ಹೊಂದಿರುವ ನಾವು, ಇಂದು ನಮ್ಮ ಮೂಲ ಬೇರುಗಳನ್ನು ಮರೆತು ಹೋಗುತ್ತಿರುವುದು ವಿಷಾಧದ ಸಂಗತಿಯಾಗಿದೆ ಎಂದರು.
ಐದು ಸಾವಿರ ವರ್ಷಗಳಿಂದ ನಮ್ಮನ್ನಾಳಿದ ರಾಜರು, ಅವರು ಕಲೆ, ಸಾಹಿತ್ಯ, ಸಂಸ್ಕೃತಿ,ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆಗಳನ್ನು ಜಗತ್ತಿನ ಮುಂದಿಡುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ. ಆ ಮೂಲಕ ನಮ್ಮ ಪೂರ್ವಜನರ ಸಾಧನೆಗಳನ್ನು ಜಗತ್ತಿಗೆ ಪರಿಚಯಿಸಿ, ಜಗತ್ತಿನ ಬೇರೆ ನಾಗರಿಕತೆಗಿಂತಲೂ ನಾವು ಮೇಲಿದ್ದೇವೆ ಎಂಬ ಸತ್ಯವನ್ನು ಸಾರಬೇಕಾದ ಅಗತ್ಯವಿದೆ. ಈ ಕೆಲಸವನ್ನು ಯುವಜನರು ಕೈಗೆತ್ತಿಕೊಳ್ಳಬೇಕು.ಇದಕ್ಕೆ ಇಂದಿನ ‘ಜಾನಪದದ ನಡೆ, ಯುವಜನರ ಕಡೆ’ ಎಂಬ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.ಲೇಖಕಿ, ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ ಮಾತನಾಡಿ, ಸಂತೋಷವೇ ಜನಪದದ ಮೂಲ. ಜನಪದವನ್ನು ಮುಂದಿನ ಪೀಳಿಗೆಗೆ ತಲುಪಿಸುವ ವಾರಸುದಾರರು ನೀವಾಗಬೇಕು. ಹಾಗಾಗಿ ಅಕಾಡೆಮಿಯು ಇಂಥ ಕಾರ್ಯಕ್ರಮಗಳನ್ನು ನಾಡಿನ ಎಲ್ಲ ಪದವಿ ಕಾಲೇಜುಗಳಲ್ಲಿಯೂ ಆಯೋಜಿಸುವ ಮೂಲಕ ನಮ್ಮ ಆದೀಮ ಸಂಸ್ಕೃತಿಯನ್ನು ಯುವಜನರಿಗೆ ಪರಿಚಯಿಸಲಿ ಎಂಬ ಆಶಯ ವ್ಯಕ್ತಪಡಿಸಿದರು.
ಜನಪದ ಕೇವಲ ಸ್ಪರ್ಧೆಗಳಿಗಷ್ಟೇ ಸಿಮೀತವಾಗದೆ, ಯುವಜನರ ಜೀವನದಲ್ಲಿ ಹಾಸು ಹೊಕ್ಕಾಗಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಗಾಂಧಿ, ಅಂಬೇಡ್ಕರ್, ಬುದ್ಧ, ಬಸವ, ಕುವೆಂಪು ಇವರೆಲ್ಲರೂ ತಮಗಿಂತ ಇತರರ ಸುಖದಲ್ಲಿ ತಮ್ಮ ಸಂತೋಷವನ್ನು ಕಂಡವರು. ನಮ್ಮ ಯುವಜನರಿಗೆ ಎಲ್ಲ ಕ್ರಿಕೆಟ್ ಆಟಗಾರರು, ಚಲನಚಿತ್ರ ನಾಯಕರ ಪರಿಚಯವಿದೆ. ಆದರೆ ನಮ್ಮ ತಾತ, ಮುತ್ತಾತನ ಪರಿಚಯವಿಲ್ಲ. ಕನಿಷ್ಠ ನಾವಾದರೂ ನಾಲ್ಕು ತಲೆಮಾರು ನಮ್ಮ ಹೆಸರು ನೆನಪಿಟ್ಟುಕೊಳ್ಳುವಂತೆ ಬದುಕೋಣ. ಇದಕ್ಕೆ ಜನಪದ ನಿಮಗೆ ಸ್ಫೂರ್ತಿಯಾಗಲಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಕೆಂಕೆರೆ ಮಲ್ಲಿಕಾರ್ಜುನ್, ಜನಪದ ನಿಂತ ನೀರಲ್ಲ. ಸದಾ ಹರಿಯುವ ನದಿ ಎಂದರು.ಹಿರಿಯ ಜಾನಪದ ವಿದ್ವಾಂಸ ಪಾವಗಡದ ಸಣ್ಣ ನಾಗಪ್ಪ ಅವರು ಜನಪದ ಕಲೆಗಳ ಉಳಿಯುವಿಕೆಯಲ್ಲಿ ಯುವಜನರ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಜಾನಪದ ಆಕಾಡೆಮಿ ವತಿಯಿಂದ ಹಿರಿಯ ಗಾಯಕರಾದ ಕಲಾಶ್ರೀ ಆನಂದ ಮಾದಲಗೆರೆ ಮತ್ತು ಜನಪದ ಸಂಘಟಕ ಜಲಧಿ ರಾಜು ಅವರನ್ನು ಸನ್ಮಾನಿಸಲಾಯಿತು. ತುಮಕೂರು ವಿವಿ ಕುಲಸಚಿವರಾದ ನಾಹಿದ ಜಮ್ಹ್ ಜಮ್ಹ್, ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ, ತುಮಕೂರು ವಿವಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ.ಎಂ.ಪ್ರಕಾಶ್ ಶೇಠ್, ಪ್ರಾಧ್ಯಾಪಕರಾದ ಡಾ.ನಾಗಭೂಷಣ್ ಬಗ್ಗನಾಡು, ಡಾ.ವೆಂಕಟರೆಡ್ಡಿ ರಾಮರೆಡ್ಡಿ, ಡಾ.ರಾಮಕೃಷ್ಣ.ಜಿ, ಕಲಾವಿದರಾದ ಶಂಕರಣ್ಣ, ರಾಮಪ್ಪ ಸಂಕಣ್ಣನವರ್, ಮೆಹಬೂಬ್ ಕಿಲ್ಲೆದಾರ್, ಕು.ದಿಶಾ, ಕಾವ್ಯ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಜನಪದ ಗಾಯನ ನಡೆಯಿತು.