ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ

| Published : Jan 12 2025, 01:17 AM IST

ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ರಾಯಣ್ಣನ ಹುಟ್ಟೂರಿನಲ್ಲಿ ಜ.12, 13ರಂದು ಜರುಗಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ-2025 ಉತ್ಸವದ ಸಿದ್ಧತೆ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.

ಉದಯ ಕೋಳೆಕರ

ಕನ್ನಡಪ್ರಭ ವಾರ್ತೆ ಬೈಲಹೊಂಗಲತಾಲೂಕಿನ ಸಂಗೊಳ್ಳಿ ರಾಯಣ್ಣನ ಹುಟ್ಟೂರಿನಲ್ಲಿ ಜ.12, 13ರಂದು ಜರುಗಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ-2025 ಉತ್ಸವದ ಸಿದ್ಧತೆ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.

ಗ್ರಾಮದಲ್ಲಿ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ರಾಯಣ್ಣ ಉದ್ಯಾನವನ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಗ್ರಾಮ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದರಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದ ವಿಶಾಲವಾದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಗೆ ಭವ್ಯ ಶಾಮಿಯಾನ ನಿರ್ಮಾಣವಾಗಿದೆ. ಉತ್ಸವದಲ್ಲಿ ಸುಮಾರು 20 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮೇಲೆ ಲೇಡ್‌ ಬ್ಯಾಕ್‌ ಡ್ರಾಪ್‌ ಅಳವಡಿಸಲಾಗಿದೆ. ವೇದಿಕೆ ಹೊರಗಡೆ ನಿಂತು ನೋಡಲು 6*8 ಅಳತೆಯ ನಾಲ್ಕು ಸ್ಕ್ರೀನ್‌ ಅಳವಡಿಸಲಾಗಿದೆ. ಗ್ರಾಮದ ಹೊರವಲಯದ ಎರಡು ರಸ್ತೆಗಳಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮಹಾದ್ವಾರ ಎಂದು ಕಟೌಟ್‌ ನಿರ್ಮಿಸಲಾಗಿದೆ.

ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ಜನತೆ ಹಾಗೂ ಕಲಾವಿದರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 30ಕ್ಕೂ ಅಧಿಕ ಕಲಾವಿದರು ಕಾರ್ಯಕ್ರಮ ನೀಡಲಿದ್ದು, ಪ್ರತಿ ದಿನ 15 ಕಲಾವಿದರು ಪ್ರತಿಭೆ ಪ್ರದರ್ಶಿಸಿಸಲಿದ್ದು, ಜನತೆಯನ್ನು ರಂಜಿಸಲಿದ್ದಾರೆ.

ಸಾರ್ವಜನಿಕರಿಗೆ ಮೊಬೈಲ್‌ ಶೌಚಾಲಯ ವ್ಯವಸ್ಥೆ: ರಾಜ್ಯದ ವಿವಿಧ ಜಿಲ್ಲೆಗಳಿಂದ 15ಕ್ಕೂ ಅಧಿಕ ಕಲಾತಂಡಗಳು ಪಾಲ್ಗೊಂಡು ಉತ್ಸವದ ಮೆರಗು ಹೆಚ್ಚಿಸಲಿದ್ದು, ಗ್ರಾಮದ ನೂರಾರು ಮಹಿಳೆಯರು ಕುಂಭೋತ್ಸವ ನಡೆಸಲಿದ್ದಾರೆ. ಜಾನಪದ ತಂಡಗಳ ಪ್ರದರ್ಶನ ಗಮನ ಸೆಳೆಯಲಿದೆ. ವಸ್ತು ಪ್ರದರ್ಶನದಲ್ಲಿ ಮಹಿಳಾ ಮತ್ತು ಸ್ವಸಹಾಯ ಸಂಘಗಳು ಸೇರಿ 50ಕ್ಕೂ ಅಧಿಕ ಸ್ಟಾಲ್‌ಗಳನ್ನು ಅಳವಡಿಸಲಾಗಿದೆ.

ಉತ್ಸವದ ಕಾರ್ಯಕ್ರಮಗಳು: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜ.12ರಂದು ಬೆಳಗ್ಗೆ 6 ಗಂಟೆಗೆ ರಾಯಣ್ಣನ ಮೂರ್ತಿಗೆ ಪೂಜೆ, 9 ಗಂಟೆಗೆ ಕಿತ್ತೂರು ಸಂಸ್ಥಾನದ ಧ್ವಜಾರೋಹಣ, 10 ಗಂಟೆಗೆ ಶೂರ ಸಂಗೊಳ್ಳಿ ರಾಯಣ್ಣ ಜ್ಯೋತಿಯನ್ನು ಶಾಸಕ ಮಹಾಂತೇಶ ಕೌಜಲಗಿ ಬರಮಾಡಿಕೊಳ್ಳುವರು. 10.15ಕ್ಕೆ ಜಾನಪದ ಕಲಾವಾಹಿನಿಯನ್ನು ಸಂಸದ ಜಗದೀಶ ಶೆಟ್ಟರ್‌ ಉದ್ಘಾಟಿಸುವರು. 11ಕ್ಕೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ವಸ್ತು ಪ್ರದರ್ಶನ ಉದ್ಘಾಟಿಸುವರು. ರಾತ್ರಿ 8ಕ್ಕೆ ನಡೆಯುವ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಂಗೊಳ್ಳಿಯ ಗುರುಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಶಿವರಾಜ ತಂಗಡಗಿ ಆಗಮಿಸಲಿದ್ದಾರೆ. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸುವರು. ವಿಶೇಷ ಆಮಂತ್ರಿತರಾಗಿ ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಗ್ರಾಪಂ ಅಧ್ಯಕ್ಷರು ಆಗಮಿಸುವರು. ರಾತ್ರಿ 9ಕ್ಕೆ ವೀರರ ಸ್ಮರಣೆಗಾಗಿ ದೀಪೋತ್ಸವವನ್ನು ಗ್ರಾಪಂ ಸದಸ್ಯರು ಉದ್ಘಾಟಿಸುವರು. ನಂತರ ವಿವಿದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.