ಅರಣ್ಯ ಇಲಾಖೆ ಕಾರ್ಯಾಚರಣೆ: ಕೊನೆಗೂ ಬೋನಿಗೆ ಬಿದ್ದ ಕೋತಿ

| Published : Jan 11 2024, 01:31 AM IST

ಸಾರಾಂಶ

ಮಂಗಳೂರು ಹೊರವಲಯದ ಕುಪ್ಪೆಪದವು ಮತ್ತು ಎಡಪದವು ಪರಿಸರದಲ್ಲಿ ಜನರಿಗೆ ತೊಂದರೆ ಕೊಡುತ್ತಾ, ಇಬ್ಬರನ್ನು ಗಾಯಗೊಳಿಸಿ ಭೀತಿ ಹುಟ್ಟಿಸಿದ್ದ ಕೋತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಬೋನಿಗೆ ಬೀಳಿಸುವುದರಲ್ಲಿ ಸಫಲರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಹೊರವಲಯದ ಕುಪ್ಪೆಪದವು ಮತ್ತು ಎಡಪದವು ಪರಿಸರದಲ್ಲಿ ಜನರಿಗೆ ತೊಂದರೆ ಕೊಡುತ್ತಾ, ಇಬ್ಬರನ್ನು ಗಾಯಗೊಳಿಸಿ ಭೀತಿ ಹುಟ್ಟಿಸಿದ್ದ ಕೋತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಬೋನಿಗೆ ಬೀಳಿಸುವುದರಲ್ಲಿ ಸಫಲರಾಗಿದ್ದಾರೆ.

ಸುಮಾರು ಒಂದು ತಿಂಗಳಿಂದ ಅರಣ್ಯ ಇಲಾಖೆ ಹಾಗೂ ಜನತೆಗೆ ತಲೆನೋವಾಗಿ ಪರಿಣಮಿಸಿದ ಈ ಕೋತಿ ಕಳೆದ ಒಂದು ವಾರದಿಂದ ನಾಪತ್ತೆಯಾಗಿತ್ತು. ಮಂಗಳವಾರ ಕುಪ್ಪೆಪದವಿನ ನೆಲ್ಲಿಜೋರದಲ್ಲಿ ಮತ್ತೆ ಪ್ರತ್ಯಕ್ಷವಾಗಿತ್ತು. ಅರಣ್ಯ ಇಲಾಖೆಯ ರೇಂಜ್‌ ಅಧಿಕಾರಿ ರಾಜೇಶ್‌, ಉಪ ರೇಂಜ್‌ ಅಧಿಕಾರಿ ಜಗರಾಜ್‌ ಮತ್ತು ಅರಣ್ಯ ವೀಕ್ಷಕ ದಿವಾಕರ ಅವರಿದ್ದ ತಂಡ, ಸ್ಥಳೀಯ ನಿವಾಸಿ ದಿನೇಶ್‌ ರಾವ್‌ ಎಂಬುವವರ ದೂರಿನಂತೆ ಕೋತಿ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿತು. ಹಿಂದೆ ಕೆಲವು ಬಾರಿ ತಪ್ಪಿಸಿಕೊಂಡಿದ್ದ ಕೋತಿ ಮಂಗಳವಾರ ನಿರ್ದಿಷ್ಟ ಜಾಗದಲ್ಲಿ ಬೋನಿನೊಳಗೆ ಇರಿಸಿದ್ದ ಬಾಳೆಹಣ್ಣು ತಿನ್ನಲು ಪ್ರವೇಶಿಸಿ ಅದರೊಳಗೆ ಸೆರೆ ಸಿಕ್ಕಿದೆ. ಕೋತಿಯನ್ನು ಕುದುರೆಮುಖ ಅರಣ್ಯದಲ್ಲಿ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೆಲ್ಲಿಜೋರದ ಲೋಲಾಕ್ಷಿ(65) ಮತ್ತು ಏಳನೇ ತರಗತಿಯ ವಿದ್ಯಾರ್ಥಿ ಪ್ರಸಾದ್‌ ಎಂಬುವರಿಗೆ ಕಚ್ಚಿದ್ದ ಕೋತಿ, ದಿನೇಶ್‌ ರಾವ್‌ ಮನೆಗೆ ಕೆಲಸಕ್ಕೆ ಬಂದಿದ್ದ ಮಹಿಳೆಯನ್ನು ಅಟ್ಟಾಡಿಸಿತ್ತು. ತಿಂಗಳ ಹಿಂದೆ ಕೋತಿ ಹಾವಳಿಯಿಂದ ಮಳಲಿಯ ಗುರುಪುರ ಕೈಕಂಬದಲ್ಲಿ ರಿಕ್ಷಾ ಚಾಲಕರೊಬ್ಬರು ಪ್ರಾಣ ಕಳೆದುಕೊಂಡಿದ್ದ ದಾರುಣ ಘಟನೆಯೂ ನಡೆದಿತ್ತು.