ಸಾರಾಂಶ
ವಿವಿಧ ಪಕ್ಷಗಳು, ರೈತ ಸಂಘಟನೆಗಳ ಮುಖಂಡರಿಂದ ಪ್ರತಿಭಟನೆ । ದಾವಣಗೆರೆ ಜಿಲ್ಲೆಯಲ್ಲೇ ಐಸಿಸಿ ಸಭೆ ನಡೆಸಿ, ಅಧ್ಯಕ್ಷ ಸ್ಥಾನವೂ ಕೊಡಿ
ಕನ್ನಡಪ್ರಭ ವಾರ್ತೆ ದಾವಣಗೆರೆಭದ್ರಾ ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ದಾವಣಗೆರೆ ಭಾಗದ ಅಚ್ಚುಕಟ್ಟು ಕೊನೆಯ ಭಾಗಕ್ಕೆ 74 ದಿನಗಳ ಕಾಲ ನೀರು ಹರಿಸಲು ಒತ್ತಾಯಿಸಿ ಅಚ್ಚುಕಟ್ಟು ರೈತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಿಂದ ವಿವಿಧ ಪಕ್ಷಗಳು, ರೈತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಭದ್ರಾ ನೀರಿಗೆ ಒತ್ತಾಯಿಸಿ ಘೋಷಣೆ ಕೂಗಿ ಉಪ ವಿಭಾಗಾಧಿಕಾರಿ ಕಚೇರಿ ಬಳಿ ಮಾನವ ಸರಪಳಿ ನಿರ್ಮಿಸಿ, ಬಹಿರಂಗ ಸಭೆಯ ಮೂಲಕ ಅಚ್ಚುಕಟ್ಟು ರೈತರು ರಸ್ತೆ ತಡೆದರು. ಈ ವೇಳೆ ತಹಸೀಲ್ದಾರ್ ಸ್ಥಳಕ್ಕೆ ಧಾವಿಸಿ, ಮನವಿ ಸ್ವೀಕರಿಸಿದರು. ಜಿಲ್ಲೆಯ ಅಚ್ಚುಕಟ್ಟು ರೈತರು ನಮ್ಮ ಹಕ್ಕಿನ ನೀರಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ ಎಂಬ ಎಚ್ಚರಿಕೆಯನ್ನೂ ರೈತರು ನೀಡಿದರು.ಈ ವೇಳೆ ಮಾತನಾಡಿದ ರೈತ ಮುಖಂಡರು, ಜೀವನಾಡಿ ಭದ್ರಾ ಅಣೆಕಟ್ಟೆಯ ಶೇ.70 ಅಚ್ಚುಕಟ್ಟು ಪ್ರದೇಶವನ್ನು ದಾವಣಗೆರೆ ಜಿಲ್ಲೆ ಹೊಂದಿದ್ದರೂ ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದೆ. ಜ.6ರಂದು ನಡೆದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯ ರದ್ದುಪಡಿಸಿ, ಭದ್ರಾ ಅಧೀಕ್ಷಕ ಅಭಿಯಂತರರಾದ ಸುಜಾತ ಹೊಸ ವೇಳಾಪಟ್ಟಿ ಹೊರಡಿಸಿದ್ದು, ಇದು ಅಧಿಕಾರಿಗಳ ತುಘಲಕ್ ದರ್ಬಾರ್ ಆಗಿದೆ. ಭದ್ರಾ ಡ್ಯಾಂನ ಇತಿಹಾಸದಲ್ಲಿ ಮೊದಲ ಬಾರಿಗೆ ಎಡದಂಡೆ-ಬಲದಂಡೆಗೆ ಪ್ರತ್ಯೇಕ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಕಿಡಿಕಾರಿದರು.
ಮನಸ್ಸಿಗೆ ಬಂದಂತೆ ನೀರಿನ ವೇಳಾಪಟ್ಟಿ ಮಾಡಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಯಾವ ಅಧಿಕಾರವಿದೆ? ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಅಧೀಕ್ಷಕ ಅಭಿಯಂತರರಾದ ಸುಜಾತಾ ವರ್ತಿಸುತ್ತಿದ್ದಾರೆ. ಹೊಸ ವೇಳಾಪಟ್ಟಿ ಪ್ರಕಾರ ಭದ್ರಾ ಎಡ ದಂಡೆಗೆ ಭದ್ರಾವತಿ, ತರೀಕೆರೆ ಭಾಗಕ್ಕೆ ಜ.10ರಿಂದ 16 ದಿನ ನೀರು ಹರಿಸಿ, 15 ದಿನ ನಿಲ್ಲಿಸಿ, ಒಟ್ಟು 70 ದಿನ ನೀರು ಹರಿಸಲಾಗುತ್ತದೆ. ಬಲ ದಂಡೆ ದಾವಣಗೆರೆ, ಮಲೇಬೆನ್ನೂರು ಭಾಗಕ್ಕೆ ಜ.20ರ ಬದಲು ಜ.15ರಿಂದಲೇ 12 ದಿನ ನೀರು ಹರಿಸಿ, 20 ದಿನ ನಿಲ್ಲಿಸಿ, ಒಟ್ಟು 53 ದಿನ ನೀರು ಹರಿಸಲಾಗುತ್ತದೆ. ಎಡದಂಡೆ ಕಾಲುವೆಗೆ 70 ದಿನ, ಬಲ ದಂಡೆಗೆ ಕೇವಲ 53 ದಿನ ನೀರು ಹರಿಸುವ ನಿರ್ಧಾರ ಸರಿಯಲ್ಲ. ಹೊಸ ವೇಳಾಪಟ್ಟಿಯಂತೆ ನೀರು ಹರಿಸಿದರೆ ದಾವಣಗೆರೆ, ಮಲೇಬೆನ್ನೂರು ಭಾಗದ ಜಮೀನುಗಳಿಗೆ ನೀರೇ ತಲುಪುವುದಿಲ್ಲ ಎಂದು ದೂರಿದರು.ನೀರಾವರಿ ಅಧಿಕಾರಿಗಳು ಹೇಳುವ ಪ್ರಕಾರ ಪ್ರತಿದಿನ ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರು ಬಿಡಲು 0.29 ಟಿಎಂಸಿ ನೀರು ಬೇಕಾಗುತ್ತದೆ. ಈಗ ಅಣೆಕಟ್ಟೆಯಲ್ಲಿ ಬಳಕೆಗೆ ಬಾರದ ಡೆಡ್ ಸ್ಟೋರೇಜ್ 13.83 ಟಿಎಂಸಿ ಬಿಟ್ಟರೆ, ಬಳಕೆಗೆ ಬರುವ 21.54 ಟಿಎಂಸಿ ನೀರು ಇದೆ. ಇದನ್ನು ಪ್ರತಿದಿನ 0.29ರಂತೆ 74 ದಿನ ಹರಿಸಬಹುದು ಎಂದರು.
ಕುಡಿಯುವ ನೀರು, ಕೈಗಾರಿಕೆಗಾಗಿ ಪ್ರತ್ಯೇಕವಾಗಿ ನೀರು ಮೀಸಲಿಡುವ ಅವಶ್ಯಕತೆ ಇಲ್ಲ. ನಾಲೆಗೆ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ಸೂಳೆಕೆರೆ, ದಾವಣಗೆರೆಯ ಟಿವಿ ಸ್ಟೇಷನ್ ಕೆರೆ, ಕುಂದುವಾಡದ ಕೆರೆ ಇನ್ನಿತರ ಕೆರೆಗಳಿಗೆ ತುಂಬಿಸಿಕೊಳ್ಳಬಹುದು. ಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿ ದಾವಣಗೆರೆ ಜಿಲ್ಲೆಯವರನ್ನೇ ಮಾಡಬೇಕು. ಐಸಿಸಿ ಸಭೆಯನ್ನು ಕಡ್ಡಾಯವಾಗಿ ದಾವಣಗೆರೆಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿದರು.ಹರಿಹರ ಶಾಸಕ ಬಿ.ಪಿ.ಹರೀಶ, ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಬನೂರು ಎಚ್.ಆರ್.ಲಿಂಗರಾಜ, ರೈತ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಟಿ.ಶ್ರೀನಿವಾಸ ದಾಸಕರಿಯಪ್ಪ, ಲೋಕಿಕೆರೆ ನಾಗರಾಜ, ಬೆಳನೂರು ಬಿ.ನಾಗೇಶ್ವರ ರಾವ್, ಎಲ್.ಎನ್.ಕಲ್ಲೇಶ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಎಂ.ಪಿ.ಕೃಷ್ಣಮೂರ್ತಿ ಪವಾರ್, ಆವರಗೊಳ್ಳ ಬಿ.ಎಂ.ಷಣ್ಮುಖಯ್ಯ, ಬಲ್ಲೂರು ಬಸವರಾಜ, ಶ್ಯಾಗಲೆ ದೇವೇಂದ್ರಪ್ಪ, ಬೇತೂರು ಸಂಗಪ್ಪ, ಆರನೇಕಲ್ಲು ವಿಜಯಕುಮಾರ, ಎಚ್.ಎನ್.ಗುರುನಾಥ, ಕುಂದುವಾಡ ಎಚ್.ಜಿ.ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಬಾತಿ ವೀರೇಶ ದೊಗ್ಗಳ್ಳಿ, ಪ್ರದೀಪ, ಶ್ಯಾಗಲೆ ಜಗದೀಶ ಗೌಡ, ಗೋಪನಾಳ ಮಲ್ಲಿಕಾರ್ಜುನಯ್ಯ, ಕಲ್ಪನಹಳ್ಳಿ ಸತೀಶ, ಅಣಬೇರು ಶಿವಪ್ರಕಾಶ, ಮಳಲ್ಕೆರೆ ಕಲ್ಲಪ್ಪ ಗುಡ್ಡದರ, ಸದಾನಂದ, ನಾಗರಸನಹಳ್ಳಿ ರುದ್ರೇಶ, ಕೈದಾಳೆ ಗುರುಪ್ರಸಾದ, ಗೋಣಿವಾಡ ನಾಗರಾಜಪ್ಪ, ಹೊಸಹಳ್ಳಿ ಶಿವಮೂರ್ತಿ ಇತರರಿದ್ದರು.
ಕೊನೆಯ ಭಾಗಕ್ಕೂ ನೀರು ತಲುಪಿಸಿನಾಲೆಯಲ್ಲಿ ನೀರು ಹರಿಸಿದಾಗ ಸೋರಿಕೆಯಾಗಿ, ಪೋಲಾಗುವ ನೀರನ್ನು ನಿಯಂತ್ರಿಸಲು ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕು. ನೀರಾವರಿ ನಿಗಮದ ಅಧಿಕಾರಿಗಳು ಹೊರ ಗುತ್ತಿಗೆ ಆಧಾರದಲ್ಲಿ ಸೌಡಿಗಳನ್ನು ನೇಮಿಸಿ, ಸಮರ್ಪಕವಾಗಿ ನೀರು ನಿರ್ವಹಣೆ ಮಾಡಿ, ಕೊನೆಯ ಭಾಗಕ್ಕೂ ನೀರು ತಲುಪಿಸಬೇಕು.
ರೈತ ಮುಖಂಡರು