ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಜಯವೀರಮಾತೆ ದೇವಾಲಯಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ ಹಾಗೂ ವಿವಿಧ ಕ್ರೀಡಾಕೂಟ ಜ.13ರಿಂದ 15ರ ವರೆಗೆ ನಡೆಯಲಿದೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ಸೇರಿದಂತೆ ವಿವಿಧ ಕ್ರೀಡೆಗಳು ಸಮೀಪದ ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಕ್ರಿಕೆಟ್ ವಿಜೇತರಿಗೆ ಮೊದಲ ಬಹುಮಾನ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ 30 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ಪುರುಷರ ಹಗ್ಗಜಗ್ಗಾಟಕ್ಕೆ ಮೊದಲ ಬಹುಮಾನ 10 ಸಾವಿರ ರು., ದ್ವಿತೀಯ ಬಹುಮಾನ 5 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ಮಹಿಳೆಯರಿಗೆ ನಡೆಯುವ ಥ್ರೋಬಾಲ್ ಸ್ಪರ್ಧಾ ವಿಜೇತರಿಗೆ10 ಸಾವಿರ ನಗದು, ದ್ವಿತೀಯ 5 ಸಾವಿರ ನಗದಿನೊಂದಿಗೆ ಟ್ರೋಫಿ ನೀಡಲಾಗುವುದು. ಹಗ್ಗಜಗ್ಗಾಟದ ವಿಜೇತರಿಗೆ 10 ಸಾವಿರ ಹಾಗೂ ದ್ವಿತೀಯ 5 ಸಾವಿರ ನಗದಿನೊಂದಿಗೆ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.13 ರಂದು ಬೆಳಿಗ್ಗೆ 8.30ಕ್ಕೆ ದ್ವಜಾರೋಹಣವನ್ನು ಓಎಲ್‍ವಿ ಚರ್ಚ್‍ನ ಸಹಾಯಕ ಫಾದರ್ ಜಾನ್ ಫರ್ನಾಂಡಿಸ್ ನೆರವೇರಿಸಲಿದ್ದಾರೆ. ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನೆರವೇರಿಸಲಿದ್ದಾರೆ. ಮೈಸೂರಿನ ಧರ್ಮಕ್ಷೇತ್ರದ ನಿವೃತ್ತ ಧಮಾಧ್ಯಕ್ಷ ಡಾ. ಬರ್ನಾಡ್ ಮೋರಸ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓಎಲ್‍ವಿ ಚರ್ಚ್‍ನ ಫಾದರ್ ಎಂ. ರಾಯಪ್ಪ ವಹಿಸುವರು. ಮುಖ್ಯ ಅತಿಥಿಗಳಾಗಿ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯ ಡಾ. ಶುಶ್ರೂತ್ ಗೌಡ, ಮೈಸೂರಿನ ಹೊಟೆಲ್ ಹೆರಿಟೇಜ್ ಮಾಲಕ ಗ್ರೇಷಿಯಸ್ ರೋಡ್ರೀಗಸ್, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ. ಪಾರ್ವತಿ, ಮಡಿಕೇರಿ ವಲಯದ ಫಾದರ್ ದೀಪಕ್ ಉಪಸ್ಥಿತರಿರುವರು. ಸಮಾರೋಪ ಸಮಾರಂಭ 15ರಂದು ಸಂಜೆ 4 ಗಂಟೆಗೆ ನಡೆಯಲಿದೆ. ವಿರಾಜಪೇಟೆ ವಲಯದ ಫಾದರ್ ಡಾ. ದಯಾನಂದ ಪ್ರಭು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ. ಡಿಸಿಲ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಶ್ರೀ ಸಾಮಾನ್ಯ ಆಯೋಗದ ಫಾದರ್ ಎಂ. ರಾಯಪ್ಪ, ಮಡಿಕೇರಿ ದಿವ್ಯ ಜ್ಯೋತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿರಿಲ್ ಮೋರಸ್, ಸ್ಥಾಪಕ ಅಧ್ಯಕ್ಷ ವಿ.ಎ. ಲಾರೆನ್ಸ್ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಅಥ್ಲೆಟಿಕ್ ತರಬೇತುದಾರರಾದ ಅಂತೋಣಿ ಡಿಸೋಜ, ಒಳಾಂಗಣ ಕ್ರಿಕೇಟ್ ಆಟಗಾರ ಆಶಿಸ್ ಕ್ರಿಸ್ಟಿ, ನ್ಯಾನೋ ಸೈನ್ಸ್ ನಲ್ಲಿ ಪಿಎಚ್‍ಡಿ ಪಡೆದ ಗ್ಲೆನಿಟಾ ಬ್ರಿಜಿತ್ ಡಿಸೋಜ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.