ಸಾರಾಂಶ
ರಾಮನಗರ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಸ್ವತ್ತಿನ ಮಾಲೀಕರಿಗೆ ನಮೂನೆ 3/ಎ ಇ - ಖಾತಾ ನೀಡಲು ರಾಜ್ಯ ಸರ್ಕಾರ ಇ-ಖಾತಾ ಅಭಿಯಾನದಂತಹ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಇದನ್ನು ಯಶಸ್ವಿಗೊಳಿಸಲು ನಗರಸಭೆ ಸಿದ್ಧವಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿ ರಿಜಿಸ್ಟರ್‌ನಲ್ಲಿ ದಾಖಲಿಸಿರುವ ಸ್ವತ್ತುಗಳಿಗೆ 3/ಎ ಇ-ಖಾತಾ ನೀಡಲು 2025ರ ಮೇ 10ರವರೆಗೆ ಗಡುವಿನೊಂದಿಗೆ ಸ್ವತ್ತಿನ ಮಾಲೀಕರಿಗೆ ಅವಕಾಶ ಕಲ್ಪಿಸಿದೆ. ಈ ಅಭಿಯಾನದ ಮೂಲಕ ನಗರಸಭೆ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ನೀಡಲು ಅಗತ್ಯ ಕ್ರಮ ವಹಿಸಲಾಗಿದ್ದು, ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಆಯುಕ್ತರು ಮತ್ತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅಭಿಯಾನಕ್ಕೆ ತಯಾರಾಗಿದ್ದೇವೆ. ನಗರದಲ್ಲಿ ಸುಮಾರು 7 ರಿಂದ 8 ಸಾವಿರ ಅರ್ಜಿಗಳು ಬರುವ ನಿರೀಕ್ಷೆಯಿದೆ ಎಂದು ಹೇಳಿದರು.ನಾಳೆಯಿಂದಲೇ ಅರ್ಜಿ ವಿತರಣೆ ಮತ್ತು ಸ್ವೀಕಾರಕ್ಕೆ ಸಿದ್ಧರಾಗಿದ್ದೇವೆ. ಸಕಾಲದಲ್ಲಿ ಕ್ರಮಬದ್ಧವಾದ ದಾಖಲೆ ಒದಗಿಸಿದ ಮಾಲೀಕರುಗಳಿಗೆ 3/ಎ ಇ- ಖಾತಾ ನೀಡಲಾಗುವುದು. ಈ ಅಭಿಯಾನವನ್ನು 3 ತಿಂಗಳೊಳಗೆ ಯಶಸ್ವಿಯಾಗಿ ಮುಗಿಸುತ್ತೇವೆ ಎಂದು ತಿಳಿಸಿದರು.
ಅನಧಿಕೃತ ಬಡಾವಣೆಗಳು, ರೆವಿನ್ಯೂ ಬಡಾವಣೆಗಳು ತಲೆ ಎತ್ತಬಾರದು. ಅನಧಿಕೃತ - ರೆವಿನ್ಯೂ ಬಡಾವಣೆಗಳಲ್ಲಿ ನಿವೇಶನ, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು. ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ರಾಜ್ಯಸರ್ಕಾರ ಒಮ್ಮೆ ಮಾತ್ರ ಅವಕಾಶ - ಒಂದು ಬಾರಿ ಪರಿಹಾರ (ಏಕ ಕಾಲಿಕ ಪರಿಹಾರ) ಕಲ್ಪಿಸಿದೆ. ಆಸ್ತಿದಾರರು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶೇಷಾದ್ರಿ ಕೋರಿದರು.ನಗರಸಭೆ ಆಯುಕ್ತ ಡಾ.ಜಯಣ್ಣ ಮಾತನಾಡಿ, ನಗರಸಭೆ ವ್ಯಾಪ್ತಿಯ ಅನಧಿಕೃತ, ಕಾನೂನು ಉಲ್ಲಂಘನೆ ಸ್ವತ್ತುಗಳಿಗೆ ನಮೂನೆ 3/ಎ ಇ - ಖಾತಾ ಕೊಡಲು ಸರ್ಕಾರ ಅನುಮತಿ ನೀಡಿದ್ದು, ಸ್ಥಳೀಯ ಸಂಸ್ಥೆಯ ಆದಾಯ ಮೂಲ ವೃದ್ದಿಸುವ ಜೊತೆಗೆ ಆಸ್ತಿ ಮಾಲೀಕರಿಗೆ ಇ-ಖಾತಾ ಸೃಜಿಸುವುದಾಗಿದೆ. 2024ರ ಸೆಪ್ಟೆಂಬರ್ 10ರೊಳಗೆ ನಿರ್ಮಾಣಗೊಂಡಿರುವ ಅನಧಿಕೃತ ಆಸ್ತಿಗಳಿಗೆ ಮಾತ್ರ 3/ಎ ಇ - ಖಾತಾ ಕೊಡಲಾಗುತ್ತಿದೆ ಎಂದರು.
ನಗರಸಭೆ ಕಚೇರಿ ಆವರಣದಲ್ಲಿಯೇ ಅರ್ಜಿ ಸ್ವೀಕಾರ ಕೇಂದ್ರ ತೆರೆಯಲಾಗುವುದು. ಹೆಚ್ಚಿನ ಅರ್ಜಿಗಳು ಬಂದಲ್ಲಿ ಮತ್ತೊಂದು ಸ್ವೀಕಾರ ಕೇಂದ್ರ ಆರಂಭಿಸುತ್ತೇವೆ. ಆನಂತರ ಈ ಅಭಿಯಾನವನ್ನು ವಾರ್ಡ್ ವಾರು ನಡೆಸುವ ಚಿಂತನೆ ಇದೆ. ದುಪ್ಪಟ್ಟ ತೆರಿಗೆ ಕಟ್ಟಬೇಕು. ಬಳಿಕ ರೆಗ್ಯುಲೇಟ್ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಇ - ಖಾತಾ ಕುರಿತು ಪರಿಪೂರ್ಣ ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿ ಸ್ಥಾಪಿಸಲಾಗುವುದು. ಸಹಾಯವಾಣಿಯ ಸಂಖ್ಯೆಯ ಮತ್ತು ವಾಟ್ಸ್ ಆಪ್ ಸಂಖ್ಯೆ ವ್ಯಾಪಕವಾಗಿ ಪ್ರಚುರ ಪಡಿಸಲಾಗುವುದು. ಕಸ ಸಂಗ್ರಹಿಸುವ ವಾಹನಗಳಲ್ಲಿ ಮುದ್ರಿತ ಧ್ವನಿ (ಆಡಿಯೋ), ಕರಪತ್ರ ಹಂಚಿಕೆ, ಮೊಬೈಲ್ ಸಂಖ್ಯೆಗಳಿಗೆ ಎಸ್ ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಮೊದಲು ಬಂದವರಿಗೆ ಮೊದಲು 3/ಎ ಇ ಖಾತಾ ವಿತರಿಸುವ ವ್ಯವಸ್ಥೆ ಮಾಡಲಾಗುವುದು. ಎಲ್ಲ ದಾಖಲೆಗಳನ್ನು ನೋಟರಿ ಮಾಡಿಸಿರಬೇಕು. ಆ ದಾಖಲಾತಿಗಳು ಸರಿಯಿದ್ದರೆ ಜನಹಿತ ಆಪ್ ನಲ್ಲಿ ಅರ್ಜಿ ಸ್ವೀಕರಿಸಲಾಗುವುದು. ದಾಖಲೆಗಳನ್ನು ಇ - ಆಸ್ತಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗುವುದು. 7 ದಿನಗಳೊಳಗಾಗಿ ತಂತ್ರಾಂಶದಲ್ಲಿ ನಿಗದಿ ಪಡಿಸಲಾಗಿರುವ ಕಾರ್ಯ ಹರಿವಿನಲ್ಲಿ ನಿರ್ವಹಿಸಿ ಇ - ಖಾತಾ ಸೃಜಿಸಿ ನೀಡಲಾಗುತ್ತದೆ. ಇ ಖಾತಾ ನಮೂನೆ 2/3 ಹಾಗೂ 2ಎ/3ಎ ನೀಡಲು ಸ್ಥಳೀಯ ಸಂಸ್ಥೆಗಳಿಂದ ನಿಗದಿ ಪಡಿಸಲಾದ ಶುಲ್ಕವನ್ನು ಮಾತ್ರ ಪಡೆಯಲಾಗುತ್ತದೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸದಸ್ಯರಾದ ಫೈರೋಜ್, ಅಜ್ಮತ್ , ಸೋಮಶೇಖರ್, ಬಿ.ಸಿ.ಪಾರ್ವತಮ್ಮ, ಗಿರಿಜಮ್ಮ, ಬೈರೇಗೌಡ, ಸಮದ್ , ಗೋವಿಂದರಾಜು, ನಾಗಮ್ಮ, ಗಿರಿಜಮ್ಮ, ಅಣ್ಣು, ಮುಖಂಡ ಅತಾ ಉಲ್ಲಾ, ಅಧಿಕಾರಿಗಳಾದ ಕಿರಣ್, ನಟರಾಜೇಗೌಡ, ಲಕ್ಷ್ಮಿ, ರೇಖಾ ಇತರರಿದ್ದರು.
ಬಾಕ್ಸ್ ..............ಬಿ ರಿಜಿಸ್ಟರ್ ನಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ 3/ಎ ಇ - ಖಾತಾ ನೀಡಲು ಪಡೆಯಬೇಕಾದ
*ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ 10-9-2024 ಪೂರ್ವದಲ್ಲಿ ನೊಂದಾಯಿತ ಮಾರಾಟಪತ್ರ / ದಾನ ಪತ್ರ/ವಿಭಾಗ ಪತ್ರ / ಹಕ್ಕು ಖುಲಾಸೆ ಪತ್ರಗಳು.*ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ
*ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ*ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ
* ಮಾಲೀಕರ ಗುರುತಿನ ದಾಖಲೆ ಪ್ರತಿ18ಕೆಆರ್ ಎಂಎನ್ 5.ಜೆಪಿಜಿ
ರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.