ವಿಜೃಂಭಣೆಯ ಮಾರಮ್ಮನ ಜಾತ್ರೆ

| Published : Feb 19 2025, 12:46 AM IST

ಸಾರಾಂಶ

ಚಾಮರಾಜನಗರ ತಾಲೂಕಿನ ನಂಜೇದೇವನಪುರ ಗ್ರಾಮದೇವತೆ ಉಯ್ಯಂಬಳ್ಳಿ ಮಾರಮ್ಮನ ಜಾತ್ರೆಯು ಸೋಮವಾರ ರಾತ್ರಿ ಬಾಣಬಿರುಸು, ಸತ್ತಿಗೆ ಸೂರಪಾನಿ, ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಚಾಮರಾಜನಗರ: ನಂಜೇದೇವನಪುರದ ಗ್ರಾಮದೇವತೆ ಉಯ್ಯಂಬಳ್ಳಿ ಮಾರಮ್ಮನ ಜಾತ್ರೆಯು ಭಾನುವಾರ ರಾತ್ರಿ ಮತ್ತು ಸೋಮವಾರ ರಾತ್ರಿ ಬಾಣಬಿರುಸು, ಸತ್ತಿಗೆ ಸೂರಪಾನಿ, ವಾದ್ಯಮೇಳ, ಕೇಲು ತರುವುದರ ಜೊತೆ ವಿಜೃಂಭಣೆಯಿಂದ ನಡೆಯಿತು.

ಭಾನುವಾರ ನಡುರಾತ್ರಿ, ಮಾರಮ್ಮನ ಬೆಳ್ಳಿ ವಿಗ್ರಹಕ್ಕೆ ಚಿನ್ನಾಭರಣ ತೊಡಿಸಿ, ವಿಶೇಷ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಮಾಡಿ, ಅಲಂಕೃತ ಮಂಟಪದಲ್ಲಿಟ್ಟು ಸತ್ತಿಗೆ ಸೂರಪಾನಿ, ವಾದ್ಯ ಮೇಳಗಳೊಂದಿಗೆ ನಾಯಕರ ಬೀದಿಯಿಂದ ಹೊರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಊರ ಹೊರಗಿರುವ ಮಾರಮ್ಮನ ದೇವಸ್ಥಾನಕ್ಕೆ ಕೊಂಡೊಯ್ದು ವಿಶೇಷ ಅಲಂಕಾರ ಮಾಡಿ ಇಡಲಾಯಿತು.

ಸೋಮವಾರ ಬೆಳಗ್ಗೆಯಿಂದಲೇ ಮಾರಮ್ಮನಿಗೆ ವಿಶೇಷ ಪೂಜೆಗಳು ನಡೆದವು. ರಾತ್ರಿಯಾಗುತ್ತಲೇ, ಪಕ್ಕದ ವೀರನಪುರ ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಹರಕೆ ಹೊತ್ತು ಬಂದು ಜಾತ್ರೆಯ ಅಂಗಳದಲ್ಲಿ ಸೌದೆ ಒಲೆ ಒಡ್ಡಿ ಅಕ್ಕಿಬೆಲ್ಲದ ಮಡೆ ಅನ್ನ ಮಾಡಿದರು. ಮಾಮೂಲಿನಂತೆ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು. ಬೆಳಗಿನ ಜಾವ ಮುಖ್ಯ ದೇವಸ್ಥಾನದಿಂದ ಕೇಲು ಮನೆಯವರೆಗೆ ಕೇಲು ಹೊತ್ತು, ಸತ್ತಿಗೆ ಸೂರಪಾನಿ, ವಾದ್ಯಮೇಳಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಬಾಣ ಬಿರುಸು ಕಂಗೊಳಿಸಿತು, ನಂತರ ಮಡೆ ಅನ್ನವನ್ನು ತಲೆ ಮೇಲೆ ಹೊತ್ತ ಭಕ್ತರು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಹರಕೆ ಹೊತ್ತ ಭಕ್ತರು ಕಾಣಿಕೆಗಳನ್ನು ಮಾರಮ್ಮನಿಗೆ ಅರ್ಪಿಸಿದರು.

ಜಾತ್ರೆಯ ಅಂಗವಾಗಿ ಮುಖ್ಯ ದೇವಸ್ಥಾನ ಸೇರಿದಂತೆ ಜಾತ್ರಾ ಅಂಗಳದಲ್ಲಿರುವ ಶಂಕರೇಶ್ವರ, ಬಸವೇಶ್ವರ, ಕೇಲು ಮನೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಂಗಳವಾರ, ಬುಧವಾರ ಮತ್ತು ಗುರುವಾರದವರೆಗೂ ಚಿನ್ನಾಭರಣ ತೊಟ್ಟ ಬೆಳ್ಳಿ ಮಾರಮ್ಮನ ವಿಗ್ರಹವು ದೇವಸ್ಥಾನದಲ್ಲಿ ಇರಲಿದ್ದು, ಮೂರು ದಿನವು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಶುಕ್ರವಾರ ಬೆಳಗ್ಗೆ ಭವ್ಯ ಮೆರವಣಿಗೆಯೊಂದಿಗೆ ಬೆಳ್ಳಿ ಮಾರಮ್ಮನ ವಿಗ್ರಹವು ನಾಯಕರ ಬೀದಿಯಲ್ಲಿರುವ ದೇವಸ್ಥಾನಕ್ಕೆ ತರುವುದರೊಂದಿಗೆ ಜಾತ್ರೆಗೆ ತೆರ ಬೀಳಲಿದೆ.