ಸಾರಾಂಶ
Formation of expert committee to advise on hill land problem: Krishna Byregowda
ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸಭೆ
ಮಲೆನಾಡು ಭಾಗದಲ್ಲಿ ರೈತರ ಸಾಗುವಳಿಯಲ್ಲಿರುವ ಸಿ ಆ್ಯಂಡ್ ಡಿ ಭೂಮಿ ಮತ್ತು ಪರಿಭಾವಿತ ಅರಣ್ಯ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಿ, ವರದಿ ನೀಡಲು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ತಜ್ಞರ ಸಮಿತಿ ರಚಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ಕಾಂಗ್ರೆಸ್‌ನ ಮಂಥರ್ ಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಕೊಡಗು ಜಿಲ್ಲೆಯ ಸಿ ಆ್ಯಂಡ್ ಡಿ ಭೂಮಿಗೆ ಸಂಬಂಧಿಸಿದಂತೆ 1994ರಿಂದ 2022ರವರೆಗೆ ನಾಲ್ಕು ಆದೇಶಗಳಾಗಿದ್ದು, 80 ಸಾವಿರ ಎಕರೆಗೂ ಹೆಚ್ಚಿನ ಭೂಮಿಯನ್ನು ಭೂ ಬ್ಯಾಂಕಿಗೆ ನೀಡಲಾಗಿತ್ತು. ಆದರೆ, 2022ರಲ್ಲಿ ಹಿಂದಿನ ಸರ್ಕಾರ ಭೂ ಬ್ಯಾಂಕಿನಲ್ಲಿನ ಭೂಮಿಯನ್ನು ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ಎಂದು ಗುರುತಿಸಿ ಕೇಂದ್ರಕ್ಕೆ ಮಾಹಿತಿ ನೀಡಿದ ನಂತರ ಡೀಮ್ಡ್ ಫಾರೆಸ್ಟ್ ಎಂದು ಘೋಷಿಸಲಾಗಿದೆ. ಹೀಗಾಗಿ ಡೀಮ್ಡ್ ಫಾರೆಸ್ಟ್ ಕುರಿತು ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೂ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡುಗು ಜಿಲ್ಲೆ ವ್ಯಾಪ್ತಿಯ ರೈತರ ಸಾಗುವಳಿಯಲ್ಲಿರುವ ಸಿ ಆ್ಯಂಡ್ ಡಿ ಭೂಮಿ ಮತ್ತು ಡೀಮ್ಡ್ ಅರಣ್ಯ ಭೂಮಿ ಕುರಿತಂತೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಕುರಿತು ಸಲಹೆ ನೀಡಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಿದರು.