ಗೃಹ ಸಚಿವರ ಹೆಸರಲ್ಲಿ ವಂಚನೆ: ಓರ್ವನ ಬಂಧನ

| Published : Dec 17 2024, 12:45 AM IST

ಸಾರಾಂಶ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಲು ವಿಐಪಿ ಪಾಸ್ ಗಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ಗೃಹ ಸಚಿವರಂತೆ ಮಾತನಾಡಿ ವಂಚಿಸುತ್ತಿದ್ದ ಆರೋಪಿಯನ್ನು ತುಮಕೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬೆಂಗಳೂರಿನ ಯಲಹಂಕ ಮೂಲದ ಮಾರುತಿ (30) ಎಂಬಾತನೇ ಬಂಧಿತ ಆರೋಪಿ.

ಕನ್ನಡಪ್ರಭ ವಾರ್ತೆ, ತುಮಕೂರು

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಲು ವಿಐಪಿ ಪಾಸ್ ಗಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ಗೃಹ ಸಚಿವರಂತೆ ಮಾತನಾಡಿ ವಂಚಿಸುತ್ತಿದ್ದ ಆರೋಪಿಯನ್ನು ತುಮಕೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬೆಂಗಳೂರಿನ ಯಲಹಂಕ ಮೂಲದ ಮಾರುತಿ (30) ಎಂಬಾತನೇ ಬಂಧಿತ ಆರೋಪಿ. ವೃತ್ತಿಯಲ್ಲಿ ಸಿವಿಲ್ ಕಂಟ್ರ್ಯಾಕ್ಟರ್ ಆಗಿರುವ ಮಾರುತಿ ಅಕ್ರಮವಾಗಿ ಹಣ ಸಂಪಾದನೆ ಮಾಡಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ.

ತನ್ನ ಲ್ಯಾಪ್ ಟಾಪ್ ನಲ್ಲಿ ಗೃಹ ಸಚಿವ ಪರಮೇಶ್ವರ್ ನಕಲಿ ಲೇಟರ್ ಹೆಡ್ ಇಟ್ಟುಕೊಂಡಿದ್ದ ಈತ ತಿರುಪತಿಗೆ ಹೋಗುವ ಭಕ್ತರನ್ನು ಸಂಪರ್ಕಿಸಿ ನಿಮಗೆ ವಿಐಪಿ ದರ್ಶನ ಮಾಡಿಸುವುದಾಗಿ ಭಕ್ತಾದಿಗಳಿಂದ 6 ಸಾವಿರದಿಂದ 10 ಸಾವಿರ ಹಣ ಪಡೆದು, ನಕಲಿ ಲೇಟರ್ ಹೆಡ್ ಕೊಟ್ಟು ಕಳುಹಿಸುತ್ತಿದ್ದ. ಕೆಲ ದಿನಗಳ ಹಿಂದೆ ಆಂಧ್ರಪ್ರದೇಶದ ಸಿಎಂ ಕಚೇರಿಯ ಸಿಬ್ಬಂದಿಗೆ ಕರೆ ಮಾಡಿದ್ದ ಈತ ನಾನೇ ಪರಮೇಶ್ವರ್ ಎಂದು ಮಾತನಾಡಿ ತನಗೆ ಬೇಕಾದ ಕುಟುಂಬವೊಂದು ಒಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಿದೆ. ಅವರಿಗೆ ದರ್ಶನಕ್ಕೆ ಬೇಕಾದ ಸಹಾಯ ಮಾಡಿಕೊಡಿ. ಇಲ್ಲದಿದ್ದರೆ ನಿಮ್ಮನ್ನು ಅಮಾನತು ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಕಲಿ ಲೆಟರ್ ಹೆಡ್ ಒಂದನ್ನು ಆಂಧ್ರ ಮುಖ್ಯಮಂತ್ರಿ ಕಚೇರಿಯ ನಂಬರ್ ಗೆ ವಾಟ್ಸಪ್ ಮಾಡಿದ್ದ. ಗೃಹ ಸಚಿವರ ಲೆಟರ್ ಬಗ್ಗೆ ಪುನರ್ ಪರಿಶೀಲಿಸಿದ ಆಂಧ್ರ ಸಿಎಂ ಕಚೇರಿ ಸಿಬ್ಬಂದಿ ಗೃಹ ಸಚಿವ ಪರಮೇಶ್ವರ್ ಕಚೇರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಮಾರುತಿ ನೀಡಿರುವುದು ನಕಲಿ ಲೆಟರ್ ಎಂದು ಪತ್ತೆಯಾಗಿದೆ.

ಕೂಡಲೇ ಆಂಧ್ರ ಸಿಎಂ ಕಚೇರಿ ಅಧಿಕಾರಿಗಳು ರಾಜ್ಯದ ಗೃಹ ಇಲಾಖೆ ಗಮನಕ್ಕೆತಂದಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಎಚ್ಚೆತ್ತ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣ ತುಮಕೂರು ನಗರ ಠಾಣೆಗೆ ದೂರು ನೀಡಿದ್ದರು. ನಾಗಣ್ಣ ಅವರ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಬೆಂಗಳೂರಿನ ಯಲಹಂಕ ನ್ಯೂಟೌನ್ ಬಳಿಯಿದ್ದ ಆರೋಪಿ ಮಾರುತಿಯನ್ನು ಬಂಧಿಸಿದ್ದಾರೆ. ಸದ್ಯ ಇನ್ನು ಹಲವರಿಗೆ ಇದೇ ರೀತಿ ವಂಚಿಸಿರುವ ಶಂಕೆ ಹಿನ್ನೆಲೆ ತುಮಕೂರು ನಗರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.