ಈ ಶಾಲೆಯ ಮೇಲುಸ್ತುವಾರಿ ಸಮಿತಿ ಪ್ರಸಕ್ತ ವರ್ಷದಿಂದ ಮೂರು ವರ್ಷಗಳ ಅವಧಿಗೆ ರಚಿಸಲು ಜ. 2ರಂದು ಸಭೆ ಕರೆದು ನಿಯಮಗಳಂತೆ ಒಟ್ಟು 18 ಸ್ಥಾನಕ್ಕೆ ತಲಾ 9 ಮಹಿಳೆ, ಪುರುಷರನ್ನು ರೋಸ್ಟರ್ ಪ್ರಕಾರ ಆಯ್ಕೆ ಮಾಡಲಾಗಿದೆ
ಕನಕಗಿರಿ: ರಜೆ ದಿನದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ರಚಿಸುವ ಮೂಲಕ ಶಿಕ್ಷಣ ಇಲಾಖೆಯ ನಿಯಮ ಉಲ್ಲಂಘಿಸಿದ ಘಟನೆ ತಾಲೂಕಿನ ಗೋಡಿನಾಳ ಗ್ರಾಮದ ಸಕಿಪ್ರಾ ಶಾಲೆಯಲ್ಲಿ ನಡೆದಿದೆ.
ಗೋಡಿನಾಳ ಗ್ರಾಮದ ಶಾಲಾಭಿವೃದ್ಧಿ ಸಮಿತಿಯನ್ನು ಜ.15 ಮಕರ ಸಂಕ್ರಾಂತಿ ರಜಾ ದಿನದಂದು ರಚಿಸಿರುವುದಕ್ಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಗ್ರಾಪಂ ಸದಸ್ಯರು, ಗ್ರಾಮದ ಹಿರಿಯರ ಗಮನಕ್ಕೆ ತರದೆ ಎಸ್ಡಿಎಂಸಿ ರಚಿಸಿದ್ದು, ಊರಲ್ಲಿ ಮುಖ್ಯಶಿಕ್ಷಕ ನಾಗರಾಜನ ಸರ್ವಾಧಿಕಾರ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಶಾಲೆಯ ಮೇಲುಸ್ತುವಾರಿ ಸಮಿತಿ ಪ್ರಸಕ್ತ ವರ್ಷದಿಂದ ಮೂರು ವರ್ಷಗಳ ಅವಧಿಗೆ ರಚಿಸಲು ಜ. 2ರಂದು ಸಭೆ ಕರೆದು ನಿಯಮಗಳಂತೆ ಒಟ್ಟು 18 ಸ್ಥಾನಕ್ಕೆ ತಲಾ 9 ಮಹಿಳೆ, ಪುರುಷರನ್ನು ರೋಸ್ಟರ್ ಪ್ರಕಾರ ಆಯ್ಕೆ ಮಾಡಲಾಗಿದೆ. ಆದರೆ, ಅಧ್ಯಕ್ಷ ಸ್ಥಾನದ ಆಯ್ಕೆಗೆ ಗೊಂದಲವುಂಟಾಗಿದ್ದರಿಂದ ಅಂತಿಮ ತೀರ್ಮಾನ ತೆಗೆದುಕೊಳ್ಳದೇ ಮುಂದೂಡಲಾಗಿತ್ತು.
ಜ.15ರ ಗುರುವಾರದಂದು ಮಕರ ಸಂಕ್ರಮಣ ರಜೆ ದಿನವಾಗಿತ್ತು. ಇದೇ ದಿನವೇ ಶಾಲೆಗೆ ಆಗಮಿಸಿದ ಮುಖ್ಯ ಶಿಕ್ಷಕ ನಾಗರಾಜ ಗ್ರಾಮದ ಹಿರಿಯರು, ಮುಖಂಡರೊಂದಿಗೆ ಸೇರಿ ಸದಸ್ಯರ ಗೈರಿನಲ್ಲಿಯೇ ಅಧ್ಯಕ್ಷರನ್ನಾಗಿ ದುರುಗಪ್ಪ ಹುಗ್ಗಿ ಹಾಗೂ ಉಪಾಧ್ಯಕ್ಷೆಯನ್ನಾಗಿ ಶರಣಮ್ಮ ಕನಕಗಿರಿ ಅವರನ್ನು ಆಯ್ಕೆ ಮಾಡಿರುವ ವಿಷಯ ಎಸ್‌ಡಿಎಂಸಿ ಸದಸ್ಯರ ಗಮನಕ್ಕೆ ತರದೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿರುವುದಕ್ಕೆ ಸ್ಥಳೀಯರಲ್ಲಿ ಅಸಮಾಧಾನ ಉಂಟಾಗಿದೆ.ಅಧಿಕಾರಿಗಳ ಭೇಟಿ: ಎಸ್ಡಿಎಂಸಿ ರಚನೆ ನಿಯಮ ಬಾಹಿರವಾಗಿ ನಡೆದಿದೆ ಎನ್ನುವ ಮಾಹಿತಿ ಅರಿತ ಶಿಕ್ಷಣ ಸಂಯೋಜಕ ಶ್ರೀಕಾಂತ, ಸಿಆರ್ ಪಿ ವಿಜಯಕುಮಾರ ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದಾರೆ. ಶಾಲಾ ರಜಾ ದಿನದಂದು ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರ ವಿವರ ಪಡೆದುಕೊಂಡರು. ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರ ಬದಲಿಸಬೇಕೆನ್ನುವ ಕೂಗು ಗ್ರಾಮಸ್ಥರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುಖ್ಯಶಿಕ್ಷಕ ನಾಗರಾಜಗೆ ನೋಟಿಸ್ ಜಾರಿ ಮಾಡಿದ್ದಾರೆನ್ನಲಾಗಿದೆ.
ಮುಖ್ಯ ಶಿಕ್ಷಕ ನಾಗರಾಜ ಹಾಗೂ ಗ್ರಾಮದ ಕೆಲ ಪ್ರಭಾವಿಗಳು ಸೇರಿಕೊಂಡು ರಜಾ ದಿನವೇ ಎಸ್ಡಿಎಂಸಿ ರಚಿಸಿರುವುದಕ್ಕೆ ಗ್ರಾಮದ ಬಹುತೇಕರು ನಮ್ಮೂರಿನ ಶಾಲೆಗೆ ಶಾಲಾಭಿವೃದ್ಧಿ ಸಮಿತಿಯೇ ಬೇಡ. ಏಕಪಕ್ಷಿಯ ನಿರ್ಧಾರದಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಇಲಾಖೆಯ ನಿಯಮ ಗಾಳಿಗೆ ತೂರಿ ಮುಖ್ಯೋಪಾಧ್ಯಾಯರು ರಜಾ ದಿನವೇ ಸಮಿತಿ ರಚಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ಪರಿಶೀಲಿಸಿ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಬೇಕು.ಇಲ್ಲವಾದರೆ ಪ್ರತಿಭಟಿಸಲಾಗುವುದು ಎಂದು ಗ್ರಾಮದ ಮುಖಂಡ ಹನುಮೇಶ ವಾಲ್ಮೀಕಿ ಎಚ್ಚರಿಸಿದ್ದಾರೆ.ಜ.15ರ ಶಾಲಾ ರಜಾ ದಿನವೇ ಗ್ರಾಮದ ಹಿರಿಯರು ಒತ್ತಾಯದಿಂದ ಪೋನ್ ಮಾಡಿ ಕರೆದು ಸಭೆ ನಡೆಸಿದರು. ಸಭೆಯಲ್ಲಿದ್ದ ಎಲ್ಲರ ಸಹಮತದ ಮೇರೆಗೆ ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮುಖ್ಯಶಿಕ್ಷಕ ನಾಗರಾಜ ತಿಳಿಸಿದ್ದಾರೆ.
ಗೋಡಿನಾಳ ಸರ್ಕಾರಿ ಶಾಲೆಯ ಎಸ್ಡಿಎಂಸಿ ರಚನೆ ರಜಾ ದಿನದಂದು ನಡೆದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಡಲೇ ವರದಿ ನೀಡುವಂತೆ ಬಿಇಒಗೆ ಸೂಚಿಸಿದ್ದೇನೆ. ಶಾಲಾ ರಜಾ ದಿನದಂದು ಎಸ್ಡಿಎಂಸಿ ರಚಿಸುವುದು ನಿಯಮ ಬಾಹಿರವಾಗಲಿದೆ ಎಂದು ಕೊಪ್ಪಳ ಡಿಡಿಪಿಐ ಸೋಮಶೇಖರಗೌಡ ತಿಳಿಸಿದ್ದಾರೆ.