ಕನ್ನಡ ತಾಯಿ ಭಾಷೆಯಾಗಿದ್ದು, ಕನ್ನಡ ಭಾಷೆಯಿಂದ ಭಾವನಾತ್ಮಕ ಸಂಬಂಧ ಬೆಸೆಯುತ್ತದೆ
ಕುಷ್ಟಗಿ: ಕನ್ನಡ ಭಾಷೆ ಮನುಷ್ಯನ ಮನಸ್ಸಲ್ಲಿ ಚೈತನ್ಯ ತುಂಬುವ ಶಕ್ತಿ ಹೊಂದಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಬಿಜಿಎಸ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸ್ವಾತಂತ್ರ್ಯಯೋಧ ಸೋಮಪ್ಪ ಚಳಗೇರಿಯವರ ಸ್ಮರಣಾರ್ಥವಾಗಿ ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಹಾಗೂ ಭಾರತಿಬಾಯಿ ಆಶ್ರಿತ್ ಸ್ಮರಣಾರ್ಥವಾಗಿ ದಾಸ ಸಾಹಿತ್ಯದ ಚಿಂತನೆಯ ಕುರಿತು ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕತೆಯ ದಿನಗಳಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದ್ದು ವಿಪರ್ಯಾಸದ ಸಂಗತಿಯಾಗಿದೆ ಎಂದರು.ಕನ್ನಡ ತಾಯಿ ಭಾಷೆಯಾಗಿದ್ದು, ಕನ್ನಡ ಭಾಷೆಯಿಂದ ಭಾವನಾತ್ಮಕ ಸಂಬಂಧ ಬೆಸೆಯುತ್ತದೆ ಕನ್ನಡಿಗರಾದ ನಾವು ಅನ್ಯ ಭಾಷಿಕರ ಜತೆಗೆ ನಾವು ಅನ್ಯ ಭಾಷೆ ಮಾತನಾಡದೆ ಅವರಿಗೆ ಕನ್ನಡ ಭಾಷೆ ಕಲಿಸಬೇಕು ಎಂದ ಅವರು, ಕನ್ನಡ ಭಾಷೆಯ ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಹಿರಿದಾಗಿದೆ ಎಂದರು.
ಸಾಹಿತಿ ಡಾ. ನಾಗರಾಜ ಹೀರಾ ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಒಂದು ವರ್ಷದ ನಂತರ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯಸಿಕ್ಕಿದ್ದು ಇದಕ್ಕೂ ಮೊದಲು ನಿಜಾಮರ ದಬ್ಬಾಳಿಕೆಯಿಂದ ಹಿಂಸೆಗೊಳಗಾಗಿತ್ತು ಪುಂಡಲೀಕಪ್ಪ ಜ್ಞಾನಮೋಟೆ, ಮುರುಡಿ ಭೀಮಜ್ಜನವರಂತಹ ನೂರಾರು ಮಹನೀಯರು ಹೋರಾಟ ಮಾಡಿದ್ದಾರೆ ಅವರ ಆದರ್ಶ ಅಳವಡಿಸಿಕೊಳ್ಳಬೇಕು ಇದರ ಜತೆಗೆ ದೇಶಭಕ್ತಿ ಹೊಂದಬೇಕು ಎಂದು ತಿಳಿಸಿದರು.ಉಪನ್ಯಾಸಕಿ ಸುಜಾತ ಹಿರೇಮಠ ದಾಸ ಸಾಹಿತ್ಯದ ಚಿಂತನೆಯ ಕುರಿತು ಮಾತನಾಡಿ, ದಾಸ ಸಾಹಿತ್ಯವೂ ಸಮಾಜವನ್ನು ತಿದ್ದುವಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ ಇಂದಿನ ಯುವಪೀಳಿಗೆಯ ಪುಸ್ತಕದ ಓದಿನ ಜತೆಗೆ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು, ದಾಸ ಸಾಹಿತ್ಯದಲ್ಲಿ ಧೈರ್ಯ ಆತ್ಮಸ್ಟೈರ್ಯ ತುಂಬುವ ಕೆಲಸ ಮಾಡಲಿದೆ ಎಂದರು.
ದತ್ತಿದಾನಿಗಳಾದ ಫಕೀರಪ್ಪ ಚಳಗೇರಿ, ಕೃಷ್ಣ ಆಶ್ರೀತ್ ಇತರರು ಮಾತನಾಡಿದರು, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ, ಆಡಳಿತಾಧಿಕಾರಿ ಶ್ರೀಶೈಲಪ್ಪ ವಾದಿ, ರವೀಂದ್ರ ಬಾಕಳೆ, ಅಬ್ದುಲ್ ಕರೀಂ ವಂಟೇಳಿ, ಆರ್. ಕೆ.ಸುಭೆದಾರ, ಹನಮೇಶ ಗುಮಗೇರಿ, ಪವಾಡೆಪ್ಪ ಚೌಡ್ಕಿ, ಲಲಿತಮ್ಮ ಹಿರೇಮಠ, ದೊಡ್ಡಪ್ಪ ಕೈಲವಾಡಗಿ, ಕಂದಕೂರಪ್ಪ ವಾಲ್ಮೀಕಿ, ಪರಶಿವಮೂರ್ತಿ ಮಾಟಲದಿನ್ನಿ, ಬಸವರಾಜ ಉಪಲದಿನ್ನಿ, ನಿಂಗಪ್ಪ ಸಜ್ಜನ, ಶ್ರೀನಿವಾಸ ಕಂಟ್ಲಿ, ಶರಣಪ್ಪ ಲೈನದ, ಪ್ರಸನ್ನ ಹಿರೇಮಠ, ಮಾರುತಿ ಗುಮಗೇರಿ, ಭೀಮನಗೌಡ ಮಂಡಲಮರಿ, ಸಂಗಮೇಶ ಲೂತಿಮಠ ಸೇರಿದಂತೆ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.