ಹೊನ್ನಾವರ: ಒಂದು ವರ್ಗ, ಒಂದೇ ಜಾತಿಗೆ ಸಿಮೀತವಾಗದೇ, ಎಲ್ಲ ಸಮಾಜದವರಿಗೂ ಕೊಡುಗೆ ನೀಡಿದ ಮಹಾನ್ ಚೇತನ ದಿ. ಎಸ್. ಬಂಗಾರಪ್ಪ ಎಂದು ಬ್ರಹ್ಮರ್ಷಿ ನಾರಾಯಣಗುರು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ವಿಕ್ರಂ ನಾಯ್ಕ ಅಭಿಪ್ರಾಯಪಟ್ಟರು.

ಪಟ್ಟಣದ ನಾಮಧಾರಿ ಸಭಾಭವನದಲ್ಲಿ ದಿ. ಎಸ್ ಬಂಗಾರಪ್ಪ ಪ್ರತಿಷ್ಠಾನ ಹೊನ್ನಾವರ ಮತ್ತು ಬ್ರಹ್ಮರ್ಷಿ ನಾರಾಯಣಗುರು ಹಿಂದುಳಿದ ವರ್ಗಗಳ ವೇದಿಕೆ ಹೊನ್ನಾವರ ಇವರ ವತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪನವರ 94ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ವಿವಿಧ ಕೊಡುಗೆಯನ್ನು ಹಲವರು ನೀಡಿದ್ದಾರೆ. ಹಲವು ಯೋಜನೆಗಳು ಅಧಿಕಾರದಿಂದ ಇಳಿದಾಗ ನಿಂತು ಹೋದರೂ, ರೈತರಿಗಾಗಿ ಆರಂಭಿಸಿದ ಉಚಿತ ಪಂಪ್‌ಸೆಟ್ ಬಿಲ್ ಯೋಜನೆ ಇಂದಿಗೂ ಜಾರಿಯಲ್ಲಿದೆ. ಈ ಯೋಜನೆಯಿಂದ ರೈತರ ದುಡಿಮೆಯ ಹೆಚ್ಚಿನ ಲಾಭ ಸಿಗುವಂತಾಗಿದೆ. ಇದರಿಂದಲೇ ರೈತರ ಮಕ್ಕಳು ಸಾಧನೆ ಮಾಡಲು ಸಾಧ್ಯವಾಗಿದೆ. ಹಲವರು ಜಾಗವಿಲ್ಲದೇ ಮನೆಯಿಲ್ಲದೇ ಇರುವಾಗ, ಆರಾಧನಾ ಯೋಜನೆಯ ಮೂಲಕ ಜಾಗ ನೀಡಿ ಸರ್ಕಾರದಿಂದ ಮನೆ ನಿರ್ಮಿಸಿ ಕೊಟ್ಟಿದ್ದರು ಎಂದರು.

ನಾಮಧಾರಿ ಸಂಘದ ಕಾರ್ಯದರ್ಶಿ ಕೆ.ಕೆ. ನಾಯ್ಕ ಮಾತನಾಡಿ, ಅನೇಕ ಜನರಿಗೆ ಜೀವನ ಕಟ್ಟಿಕೊಳ್ಳಲು ಬಂಗಾರಪ್ಪ ನೆರವಾಗಿದ್ದರು ಎಂದರು.ಸಾಮಾಜಿಕ ಹೋರಾಟಗಾರರಾದ ಡಾ. ಇಸ್ಮಾಯಿಲ್ ತಲಕರ್ಣೆ, ಕೃಷಿಕರಾದ ಹನುಮಂತ ಹಳ್ಳೇರ್, ಮುಕುಂದ ನಾಯ್ಕ, ಯಕ್ಷಗಾನ ಕಲಾವಿದ ಮಂಜು ಗೌಡ ಹಕ್ಕಲಕೇರಿ, ಕಲಾವಿದ ದೇವು ಮರಾಠಿ ತೊಳಸಾಣಿ ಅವರನ್ನು ಸನ್ಮಾನಿಸಲಾಯಿತು.‌

ಜಿಪಂ ಮಾಜಿ ಸದಸ್ಯೆ ಪುಷ್ಪಾ ನಾಯ್ಕ, ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷ ವಾಸು ಗೌಡ, ಕಾಂಗ್ರೆಸ್ ಮುಖಂಡ ವಿಠ್ಠಲ್ ನಾಯ್ಕ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಿ. ಎಸ್. ಬಂಗಾರಪ್ಪ ಪ್ರತಿಷ್ಠಾನ ಅಧ್ಯಕ್ಷ ಆರ್.ಪಿ. ನಾಯ್ಕ ಅವರು ಮಾತನಾಡಿದರು. ಕುಮಾರಿ ಮಧುರಾ ನಾಯ್ಕ ಪ್ರಾರ್ಥಿಸಿದರು. ದಿ. ದೇವರಾಜ ಅರಸು ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಸ್ವಾಗತಿಸಿ, ಮಾದೇವ ನಾಯ್ಕ ವಂದಿಸಿದರು. ಶಿಕ್ಷಕ ಪ್ರಕಾಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.