ಸರ್ಕಾರ ಪ್ರತಿ ತಾಲೂಕಿನ ಅಭಿವೃದ್ಧಿಗಾಗಿ ಕೊಟ್ಯಂತರ ಹಣ ಮೀಸಲಿಡುತ್ತಿದೆ. ಆದರೆ ಇಲ್ಲಿನ ಶಾಸಕರು ಇಡೀ ರಾಜ್ಯದಲ್ಲೇ ನಾನೊಬ್ಬನೆ ಭ್ರಷ್ಟಾಚಾರ ರಹಿತ ಶಾಸಕ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವುದು ನಾಟಕೀಯವಾಗಿದೆ. ನಿಮ್ಮ ಯೋಗ್ಯತೆ ಏನೆಂದು ನೀವು ಪರಾಮರ್ಶಿಸಿ ಮಾತನಾಡಿ. ನಾನು ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಪರವಾಗಿ ನಿಲ್ಲುವ ನಾಯಕನಲ್ಲ. ನಿಮ್ಮ ಘನತೆ ಏನೆಂಬುದು ಬಿಕ್ಕೋಡು ಭಾಗದ ಗ್ರಾಮಗಳಿಗೆ ಹೋಗಿ ನಿಮ್ಮ ಸಾಧನೆ ಏನು ಎಂಬುದನ್ನು ತೋರಿಸಿ. ಗುಂಡಿ ಮುಚ್ಚಲು ಸಾಧ್ಯವಾಗದ ನಿಮಗೆ ನಿಮ್ಮ ಅಧ್ಯಕ್ಷನ ಕೈಯಲ್ಲಿ ಹೇಳಿಕೆ ಕೊಡಿಸುವುದು ನಿಮಗೆ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅಭಿವೃದ್ಧಿ ಗುದ್ದಲಿ ಹಿಡಿದು ತಿರುಗಿ ಬಡಾಯಿ ಕೊಚ್ಚಿಕೊಂಡರೆ ಆಗುವುದಿಲ್ಲ. ನಿಮಗೆ ತಾಲೂಕಿನ ಅಭಿವೃದ್ಧಿ ಬಗ್ಗೆ ನಿಜವಾಗಿ ಚಿಂತೆ ಇದ್ದರೆ ಮೊದಲು ಬಿಕ್ಕೋಡು ರಸ್ತೆ ದುರಸ್ತಿ ಮಾಡಿಸಿ ನಿಮ್ಮ ಸಾಮರ್ಥ್ಯ ತೋರಿಸಿ ಎಂದು ಶಾಸಕ ಎಚ್ ಕೆ ಸುರೇಶ್‌ ವಿರುದ್ಧ ಮಾಜಿ ಸಚಿವ ಬಿ.ಶಿವರಾಂ ಗುಟುರು ಹಾಕಿದರು.

ಹಗರೆ ಮಾದಿಹಳ್ಳಿ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಪ್ರತಿ ತಾಲೂಕಿನ ಅಭಿವೃದ್ಧಿಗಾಗಿ ಕೊಟ್ಯಂತರ ಹಣ ಮೀಸಲಿಡುತ್ತಿದೆ. ಆದರೆ ಇಲ್ಲಿನ ಶಾಸಕರು ಇಡೀ ರಾಜ್ಯದಲ್ಲೇ ನಾನೊಬ್ಬನೆ ಭ್ರಷ್ಟಾಚಾರ ರಹಿತ ಶಾಸಕ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವುದು ನಾಟಕೀಯವಾಗಿದೆ. ನಿಮ್ಮ ಯೋಗ್ಯತೆ ಏನೆಂದು ನೀವು ಪರಾಮರ್ಶಿಸಿ ಮಾತನಾಡಿ. ನಾನು ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಪರವಾಗಿ ನಿಲ್ಲುವ ನಾಯಕನಲ್ಲ. ನಿಮ್ಮ ಘನತೆ ಏನೆಂಬುದು ಬಿಕ್ಕೋಡು ಭಾಗದ ಗ್ರಾಮಗಳಿಗೆ ಹೋಗಿ ನಿಮ್ಮ ಸಾಧನೆ ಏನು ಎಂಬುದನ್ನು ತೋರಿಸಿ. ಗುಂಡಿ ಮುಚ್ಚಲು ಸಾಧ್ಯವಾಗದ ನಿಮಗೆ ನಿಮ್ಮ ಅಧ್ಯಕ್ಷನ ಕೈಯಲ್ಲಿ ಹೇಳಿಕೆ ಕೊಡಿಸುವುದು ನಿಮಗೆ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ರೈತರಿಗೆ ಕಷ್ಟವಾದರೆ ಕೈಯಲ್ಲಿ ಅಧಿಕಾರ ಇರಲಿ, ಬಿಡಲಿ ಅವರ ಹೋರಾಟಕ್ಕೆ ತಾವು ಸದಾ ಬದ್ಧ. ಶಿವಪುರ ಹಾಗೂ ಅಡಗೂರು ಸೇರಿದಂತೆ ಇತರ ಭಾಗದಲ್ಲಿ ಅರಣ್ಯ ಇಲಾಖೆಯವರು ರೈತರನ್ನು ಒಕ್ಕಲೆಬ್ಬಿಸಲು ಹೊರಟಿದ್ದು ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ. ನಾನೇ ಅವರ ಪರವಾಗಿ ನಿಂತು ಜಾಗವನ್ನು ಕೊಡಿಸುತ್ತೇನೆ. ಈಗಾಗಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಮೂರು ವರ್ಷಗಳ ಹತ್ತಿರಕ್ಕೆ ಬಂದಿದ್ದು ಸರ್ಕಾರ ನುಡಿದಂತೆ ನಡೆಯುತ್ತಿದೆ. ಜಿಲ್ಲಾ ಗ್ರಾಪಂ ತಾಪಂ ಚುನಾವಣೆಗಳು ಶೀಘ್ರದಲ್ಲಿ ಇರುವುದರಿಂದ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಬಲಿಷ್ಠರಾಗಬೇಕು ಎಂದರು.

ಇಡೀ ತಾಲೂಕಿನಲ್ಲಿ ೫೦ ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ನಮ್ಮ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು ಉಪಯೋಗವಾಗುತ್ತಿದ್ದು ಇದನ್ನು ಪ್ರತಿ ಮಹಿಳೆಯರಿಗೆ ನಮ್ಮ ಕಾರ್ಯಕರ್ತರು ಅದನ್ನು ಮತವನ್ನಾಗಿ ಬದಲಿಸುವ ಶಕ್ತಿಯನ್ನಾಗಿ ಪರಿವರ್ತಿಸಬೇಕು. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಬೂತ್ ಮಟ್ಟದಲ್ಲಿ ನಮ್ಮ ಪಕ್ಷದ ನಿಷ್ಟಾವಂತ ಮತದಾರರ ಪಟ್ಟಿಗಳನ್ನು ಕೈಬಿಡುವ ಹುನ್ನಾರ ನಡೆಯುತ್ತಿದೆ. ಅದರ ಬಗ್ಗೆ ಬೂತ್ ಮಟ್ಟದ ಕಾರ್ಯಕರ್ತರು ಎಚ್ಚೆತ್ತು ಗಮನ ಹರಿಸಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಜಿ ನಿಶಾಂತ್ ಮಾತನಾಡಿ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಡಿಸೆಂಬರ್‌ ೬ರಂದು ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಗೆ ಬರುವ ಹಿನ್ನೆಲೆಯಲ್ಲಿ ತಾಲೂಕಿನ ಶಕ್ತಿ ಏನೆಂದು ಸಾಬೀತುಪಡಿಸಬೇಕು. ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಆಯೋಜಿಸಿ ಮತ್ತೆ ಕಾಂಗ್ರೆಸ್ ಪಕ್ಷ ತಾಲೂಕಿನಲ್ಲಿ ಬಲಿಷ್ಠವಾಗಿದೆ ಎಂದು ತೋರಿಸುತ್ತೇವೆ ಎಂದರು.ಬೇಲೂರು- ಹಳೇಬೀಡು ಪ್ರಾಧಿಕಾರದ ಅಧ್ಯಕ್ಷ ಸೈಯದ್ ತೌಫಿಕ್ ಮಾತನಾಡಿ ಪ್ರತಿ ಬಾರಿಯೂ ಬಿಜೆಪಿ ಜಾಗು ಜೆಡಿಎಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಮಾತ್ರ ನಿಮ್ಮ ಬಳಿ ಬರುತ್ತಾರೆ. ನಿಮ್ಮ ಕಷ್ಟಸುಖವನ್ನು ಇಲ್ಲಿಯವರೆಗೆ ಆಲಿಸಿಲ್ಲ. ಇತ್ತೀಚಿಗೆ ನಡೆದ ಬಿಹಾರ ಚುನಾವಣೆಯಲ್ಲಿ ಸುಮಾರು ೪೦ ಸಾವಿರಕ್ಕೂ ಹೆಚ್ಚು ಮತವನ್ನು ಡಿಲೀಟ್ ಮಾಡಿಸಿದ್ದಾರೆ. ಇಲ್ಲಿಯೂ ಸಹ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮತಗಳನ್ನು ಡಿಲೀಟ್ ಮಾಡಿಸುವ ಹುನ್ನಾರವಿದೆ. ಈಗಾಗಲೇ ಬಿ ಶಿವರಾಂ ಅವರು ಪಕ್ಷವನ್ನು ಆಂತರಿಕವಾಗಿ ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಗುಂಪುಗಾರಿಕೆಗೆ ಜಾಗವಿಲ್ಲ, ಇಲ್ಲಿ ಕೆಲವರು ನನ್ನಿಂದಲೇ ಪಕ್ಷ, ನಾನೇ ಮುಖ್ಯ ಎಂಬ ಭ್ರಮೆ ಬಿಟ್ಟು ಕೆಲಸ ಮಾಡಬೇಕು ಎಂದರು. ಇದೇ ವೇಳೆ ಬೇರೆ ಪಕ್ಷದಿಂದ ಸುಮಾರು ೫೦ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ ಆರ್ ವೆಂಕಟೇಶ್, ರಾಮೇಗೌಡ, ಭೀಮೇಗೌಡ, ರವೀಶ್ ಬಸವಾಪುರ, ಬಿಎಂ ಸಂತೋಷ್, ಸೌಮ್ಯ ಆನಂದ್, ಚೇತನ್, ಜಿ ಶಾಂತಕುಮಾರ್, ಬಿಎಂ ರಂಗನಾಥ್, ಯಮಸಂಧಿ ಪಾಪಣ್ಣ, ಸೇರಿದಂತೆ ಇತರರು ಹಾಜರಿದ್ದರು.