ಶತಮಾನಗಳಿಂದ ವಿದ್ಯಾರ್ಥಿಗಳಿಗೆ ಜ್ಞಾನ ಬೆಳಗುತ್ತಿರುವ ಈ ಶಾಲೆಯು ಇತ್ತೀಚಿನ ವರ್ಷಗಳಲ್ಲಿ ಕಿಡಿಗೇಡಿಗಳ ದುರಾಸೆಗೆ ಗುರಿಯಾಗಿದೆ. ಹಿಂದೆಯೂ ಶಾಲೆಯ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವ ಘಟನೆಗಳು ನಡೆದಿವೆ. ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳು ಮತ್ತು ವಿದ್ಯುತ್ ದೀಪಗಳನ್ನೂ ಕಿಡಿಗೇಡಿಗಳು ಧ್ವಂಸ ಮಾಡಿರುವುದು ಚಿಂತಾಜನಕ. ಇವು ವಿದ್ಯಾರ್ಥಿಗಳ ಅಧ್ಯಯನದ ವಾತಾವರಣಕ್ಕೆ ಧಕ್ಕೆ ತರುತ್ತಿವೆ ಎಂದುಬಬೇಸರ ವ್ಯಕ್ತಪಡಿಸಿದರು. ಪದೇಪದೇ ನಡೆಯುತ್ತಿರುವ ಇಂತಹ ದುಷ್ಕೃತ್ಯಗಳಿಂದ ಶಿಕ್ಷಕರಲ್ಲೂ, ಪೋಷಕರಲ್ಲೂ ಆತಂಕ ಹೆಚ್ಚಾಗಿದೆ. ಶಾಲೆಯ ಪರಿಸರ ಸುರಕ್ಷಿತವಾಗಿರದಿದ್ದರೆ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ನೇರ ಪರಿಣಾಮ ಬೀಳುತ್ತದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ರಾಷ್ಟ್ರೀಯ ಹೆದ್ದಾರಿ–206 ಸಮೀಪದಲ್ಲಿರುವ ಸರ್ಕಾರಿ ಹಳೆಯ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಿಡಿಗೇಡಿಗಳು ಕಿಟಕಿಯ ರಂಧ್ರದ ಮೂಲಕ ಬೆಂಕಿ ಹಚ್ಚಿದ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಗ್ಗೆಯೇ ಶಿಕ್ಷಕರು ಗಮನಿಸಿದ ಬಳಿಕ ಶಾಲಾ ಆಡಳಿತದಲ್ಲಿ ಆತಂಕ ಸೃಷ್ಟಿಯಾಗಿದೆ. ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಐದನೇ ತರಗತಿಯ ಕೊಠಡಿಯಲ್ಲಿ ಇಟ್ಟಿದ್ದ ಹಲವು ಪೀಠೋಪಕರಣಗಳು, ಮಕ್ಕಳ ಆಟೋಪಕರಣಗಳು ಹಾಗೂ ಕಲಿಕಾ ಸಾಮಗ್ರಿಗಳು ಸಂಪೂರ್ಣವಾಗಿ ಕರಕಲಾಗಿ ನಾಶವಾಗಿವೆ. ಶಾಲಾ ಆಡಳಿತದ ದೂರು ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಪರಿಶೀಲನೆ ನಡೆಸಿ ಮಾತನಾಡಿ, ಶತಮಾನಗಳಿಂದ ವಿದ್ಯಾರ್ಥಿಗಳಿಗೆ ಜ್ಞಾನ ಬೆಳಗುತ್ತಿರುವ ಈ ಶಾಲೆಯು ಇತ್ತೀಚಿನ ವರ್ಷಗಳಲ್ಲಿ ಕಿಡಿಗೇಡಿಗಳ ದುರಾಸೆಗೆ ಗುರಿಯಾಗಿದೆ. ಹಿಂದೆಯೂ ಶಾಲೆಯ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವ ಘಟನೆಗಳು ನಡೆದಿವೆ. ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳು ಮತ್ತು ವಿದ್ಯುತ್ ದೀಪಗಳನ್ನೂ ಕಿಡಿಗೇಡಿಗಳು ಧ್ವಂಸ ಮಾಡಿರುವುದು ಚಿಂತಾಜನಕ. ಇವು ವಿದ್ಯಾರ್ಥಿಗಳ ಅಧ್ಯಯನದ ವಾತಾವರಣಕ್ಕೆ ಧಕ್ಕೆ ತರುತ್ತಿವೆ ಎಂದುಬಬೇಸರ ವ್ಯಕ್ತಪಡಿಸಿದರು. ಪದೇಪದೇ ನಡೆಯುತ್ತಿರುವ ಇಂತಹ ದುಷ್ಕೃತ್ಯಗಳಿಂದ ಶಿಕ್ಷಕರಲ್ಲೂ, ಪೋಷಕರಲ್ಲೂ ಆತಂಕ ಹೆಚ್ಚಾಗಿದೆ. ಶಾಲೆಯ ಪರಿಸರ ಸುರಕ್ಷಿತವಾಗಿರದಿದ್ದರೆ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ನೇರ ಪರಿಣಾಮ ಬೀಳುತ್ತದೆ. ಆದ್ದರಿಂದ, ಪೊಲೀಸರು ಗಸ್ತು ಬಿಗಿಗೊಳಿಸಿ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.ಶಾಲೆಯ ಸುತ್ತಮುತ್ತ ವಾಸಿಸುವ ನಾಗರಿಕರೊಂದಿಗೆ ಸಭೆ ನಡೆಸಿ ಜಾಗೃತಿ ಮೂಡಿಸುವುದು ಹಾಗೂ ಭದ್ರತಾ ಕ್ರಮಗಳನ್ನು ಬಲಪಡಿಸುವ ಬಗ್ಗೆ ಶಿಕ್ಷಣ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.ಸ್ಥಳೀಯ ಸಮೂಹ ಸಂಪನ್ಮೂಲ ಅಧಿಕಾರಿ ವಿಷ್ಣುವರ್ಧನ್, ಶಾಲೆಯ ಮುಖ್ಯಶಿಕ್ಷಕಿ ಚಂದ್ರಕಲಾ, ಶಿಕ್ಷಕರಾದ ಚಂದ್ರನಾಯಕ್, ಮಹೇಶ್ ಸೇರಿದಂತೆ ಹಲವು ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.