ಮಾಜಿ ಸಚಿವ ಎಚ್.ವೈ.ಮೇಟಿ ನಿಧನ

| Published : Nov 05 2025, 02:00 AM IST

ಸಾರಾಂಶ

ಬಾಗಲಕೋಟೆ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ಎಚ್.ವೈ ಮೇಟಿ (79) ಅವರು ತೀವ್ರ ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಾಗಲಕೋಟೆ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ಎಚ್.ವೈ ಮೇಟಿ (79) ಅವರು ತೀವ್ರ ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಎಚ್.ವೈ.ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ) ಅವರು ಕಳೆದ ಒಂದು ವಾರದಿಂದ ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೇಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.

ಆದರೆ, ಮೇಟಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರಲಿಲ್ಲ. ಮಂಗಳವಾರ ಬೆಳಗ್ಗೆ ತೀವ್ರ ಉಸಿರಾಟ ಸಮಸ್ಯೆಯಿಂದ ಅವರನ್ನು ಐಸಿಯುಗೆ ಸ್ಥಳಾಂತರಿಸಿ ಹೆಚ್ಚುವರಿ ಚಿಕಿತ್ಸೆಗೆ ಒಳಪಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ 12.30 ಗಂಟೆಗೆ ಅವರು ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನದಿಂದ ಬೆಂಗಳೂರಿನ ನಿವಾಸದ ಎದುರು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಗಲಕೋಟೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

ಕಂಬನಿ ಮಿಡಿದ ಗಣ್ಯರು:

ಮೇಟಿ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಸೇರಿ ಹಲವು ಸಚಿವರು, ಶಾಸಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಜತೆಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.- ಓಪನ್‌-

4 ಬಾರಿ ಶಾಸಕ, 2 ಬಾರಿ ಸಚಿವ

ಹಿರಿಯ ರಾಜಕಾರಣಿಯಾದ ಎಚ್.ವೈ.ಮೇಟಿ ಅವರು 1989ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ, ಬಳಿಕ ಒಂದು ಬಾರಿ ಸಂಸದರಾಗಿ ಗೆಲುವು ಸಾಧಿಸಿದ್ದರು. ಎರಡು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಜನತಾ ಪರಿವಾರದ ಹಿನ್ನೆಲೆಯ ಅವರು 1989ರಲ್ಲಿ ಗುಳೇದಗುಡ್ಡದಿಂದ ಮೊದಲ ಬಾರಿಗೆ ಜೆಡಿಎಸ್‌ನಿಂದ ಶಾಸಕರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1994ರಲ್ಲಿ ಮತ್ತೊಮ್ಮೆ ಗುಳೇದಗುಡ್ಡದಿಂದ ಜೆಡಿಎಸ್‌ನಿಂದ ಪುನರ್‌ ಆಯ್ಕೆಯಾಗಿ ದೇವೇಗೌಡರ ಸಂಪುಟದಲ್ಲಿ ಅರಣ್ಯ ಸಚಿವ ಸ್ಥಾನಕ್ಕೇರಿದ್ದರು.

ಬಳಿಕ ಬಾಗಲಕೋಟೆಯಿಂದ ಸಂಸದರಾಗಿ ಆಯ್ಕೆಯಾಗಿದ್ದರು. 2005ರಲ್ಲಿ ಜೆಡಿಎಸ್‌ನಿಂದ ಸಿದ್ದರಾಮಯ್ಯ ಹೊರ ಬಂದಾಗ ಕಾಂಗ್ರೆಸ್‌ಗೆ ಬಂದಿದ್ದರು. 2008ರಲ್ಲಿ ಪರಾಭವಗೊಂಡಿದ್ದ ಅವರು 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರೂ ಆಗಿದ್ದರು. ಬಳಿಕ 2018ರಲ್ಲಿ ಸೋಲುಂಡಿದ್ದ ಅವರು 2023ರಲ್ಲಿ ಮತ್ತೆ ಗೆಲುವು ಸಾಧಿಸಿ ಸದ್ಯ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.

ಲೈಂಗಿಕ ಹಗರಣದ ಕಪ್ಪುಚುಕ್ಕೆ2013ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಎಚ್.ವೈ.ಮೇಟಿ ಅವರು ಅಬಕಾರಿ ಸಚಿವರಾಗಿದ್ದರು. ಈ ವೇಳೆ ಮಹಿಳೆಯೊಬ್ಬರಿಗೆ ಉದ್ಯೋಗದ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂಬ ಆರೋಪದ ಮೇಲೆ ಸೆಕ್ಸ್‌ ವಿಡಿಯೋ ಬಹಿರಂಗಗೊಂಡಿತ್ತು. ಈ ಬಗ್ಗೆ ಭಾರೀ ಟೀಕೆ, ವಿರೋಧಗಳು ವ್ಯಕ್ತವಾಗಿದ್ದವು. ಬೆನ್ನಲ್ಲೇ ಅಬಕಾರಿ ಸಚಿವ ಸ್ಥಾನ ಹಾಗೂ ಬಾಗಲಕೋಟೆ ಉಸ್ತುವಾರಿ ಸಚಿವ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸಿ ಸಂತ್ರಸ್ತೆ ದೂರು ಹಿಂಪಡೆದಿದ್ದರಿಂದ ಪ್ರಕರಣ ಕೈಬಿಡಲಾಗಿತ್ತು.