ಸಾರಾಂಶ
ಹಗರಣಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆಂದು ಕೆಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಗರಣಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆಂದು ಕೆಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ವಿಭಿನ್ನವಾಗಿ ಗುರುತಿಸಿಕೊಂಡಿದ್ದರು. ಮೊದಲ ಅವಧಿಯಲ್ಲಿ ಈ ರೀತಿ ಆರೋಪಗಳು ಅವರ ಮೇಲೆ ಬಂದಿರಲಿಲ್ಲ. ಈಗ ಅವರ ಸ್ಥಿತಿ ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬಂತಾಗಿದೆ ಎಂದು ಕಿಡಿಕಾರಿದರು.
ಹಗರಣಗಳಿಂದ ಅವರಿಗೆ ಮುಜುಗರ ಉಂಟಾಗಿದೆ. ಅದಕ್ಕೆ ವಿಚಲಿತರಾಗಿ ಕೆಸರು ಎರಚುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯ ಆರೋಪಗಳನ್ನು ತನಿಖೆಗೆ ಕೊಡಲಿ ಯಾರಾದರೂ ಅವರಿಗೆ ಬೇಡ ಎಂದಿದ್ದೇವಾ. ಅವರ ಮೇಲೆ ಬಂದಿರುವ ಆರೋಪಕ್ಕೂ ಸಿಬಿಐ ತನಿಖೆಗೆ ಕೊಡಲಿ ಎಂದು ಟಾಂಗ್ ನೀಡಿದರು.ಮುಡಾದಲ್ಲಿ ಪಡೆದಿರುವ 14 ಸೈಟ್‌ಗಳನ್ನು ವಾಪಾಸ್ ಕೊಡಲಿ, ಹಗರಣದ ತನಿಖೆಯನ್ನು ಸಿಬಿಐಗೆ ಕೊಡಿ. ಇ.ಡಿ, ಸಿಬಿಐ ಕಾಂಗ್ರೆಸ್ ಅವಧಿಯಲ್ಲೂ ಇತ್ತು, ಈಗಲೂ ಇದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವ್ಯವಸ್ಥೆಯನ್ನು ಪಾರದರ್ಶಕ ಮಾಡಿದೆ. ಮೊಸರಲ್ಲಿ ಕಲ್ಲು ಹುಡುಕದೇ, ಕೆಸರನ್ನು ಬೇರೆಯವರಿಗೆ ಎರಚಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಯಾರಾದರೂ ಕೇಳಿದ್ರಾ ಗ್ಯಾರಂಟಿ ಕೊಡಿ ಎಂದು, ಗ್ಯಾರಂಟಿಯಿಂದಾಗಿ ಖಜಾನೆ ಖಾಲಿಯಾಗಿದೆ. ಮೊದಲ ಅವಧಿಯಲ್ಲಿ ವಿಭಿನ್ನ ಸಿಎಂ ಎನಿಸಿಕೊಂಡಿದ್ದೀರಿ, ಈಗಲೂ ಅದೇ ರೀತಿ ಇರಿ. ಸೋಮಣ್ಣನನ್ನು ಮುಗಿಸಿಬಿಟ್ಟರು ಎನ್ನುತ್ತಿದ್ದರು. ಆದರೆ, ಮಲೆ ಮಾದಪ್ಪ ನನ್ನ ಕೈ ಬಿಡಲಿಲ್ಲ, ನಾಯಕರು ನನ್ನ ಕೈ ಬಿಡಲಿಲ್ಲ, ಕೆಲಸಗಾರನಿಗೆ ಭಗವಂತನ ಆಶೀರ್ವಾದ ಯಾವಾಗಲೂ ಇರಲಿದೆ ಎಂದರು.