ಸಾರಾಂಶ
ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಮಾಹಿತಿ । ಚೈಲ್ಡ್ ರವಿಯ ಸ್ನೇಹಿತರಾಗಿದ್ದ ಹಂತಕರು । ಪತ್ನಿ ದೂರಿನಿಂದ ತನಿಖೆ
ಕನ್ನಡಪ್ರಭ ವಾರ್ತೆ ಹಾಸನಕಳೆದ ಎರಡು ದಿನಗಳ ಹಿಂದೆ ರಸ್ತೆ ಮಧ್ಯೆ ಲಾಂಗ್ ಮತ್ತು ಮಚ್ಚಿನಿಂದ ರೌಡಿಶೀಟರ್ ಚೈಲ್ಡ್ ರವಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಕ್ಕೆ ಮಾಹಿತಿ ನೀಡಿ, ‘ನೀರು ತರಲೆಂದು ಖಾಲಿ ಕ್ಯಾನನ್ನು ತನ್ನ ವಾಹನದಲ್ಲಿ ಇಟ್ಟುಕೊಂಡು ಹೋಗುತ್ತಿದ್ದಾಗ ಹೇಮಾವತಿ ನಗರದ ೩ನೇ ಮುಖ್ಯ ರಸ್ತೆ, 9ನೇ ಕ್ರಾಸ್ ಹತ್ತಿರ ನಾಲ್ವರು ಕಾರಿನಲ್ಲಿ ಬಂದು ಬೈಕಿಗೆ ಗುದ್ದಿಸಿದ ನಂತರ ಚೈಲ್ಡ್ ರವಿ ಮೇಲೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಅಲ್ಲಿಂದ ತಪ್ಪಿಸಿಕೊಂಡಿದ್ದರು.ಈ ಬಗ್ಗೆ ಪತ್ನಿ ಗೌತಮಿ ಸ್ಥಳಕ್ಕೆ ಬಂದಿದ್ದರು. ಆರೋಪಿಗಳು ಚೈಲ್ಡ್ ರವಿಯ ಸ್ನೇಹಿತರು ಕೂಡ ಆಗಿದ್ದರು. ಆದರೇ ಹಳೇ ಧ್ವೇಷದಿಂದ ಇಬ್ಬರೂ ಮಾತನಾಡುತ್ತಿರಲಿಲ್ಲ. ಈ ಹಿಂದೆಯೂ ಕೂಡ ಚೈಲ್ಡ್ ರವಿ ಕೊಲೆ ಮಾಡಿ ದೊಡ್ಡ ಹೆಸರು ಮಾಡಬೇಕೆಂದು ಆರೋಪಿ ಪ್ರೀತಮ್ ಹೇಳಿಕೊಂಡಿದ್ದ. ಈ ನಾಲ್ಕು ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ನಿ ಗೌತಮಿ ಕೊಟ್ಟ ದೂರಿನ ಮೇರೆಗೆ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅಪರ ಪೊಲೀಸ್ ಅಧೀಕ್ಷಕ ವೆಂಕೇಶ್ ನಾಯ್ಡು, ಡಿವೈಎಸ್ಪಿ ಮುರುಳೀಧರ್ ನೇತೃತ್ವದಲ್ಲಿ ಮುಂದಿನ ತನಿಖೆ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ಪತ್ತೆ ಕಾರ್ಯದಲ್ಲಿ ತೊಡಗಿದ್ದ ವೇಳೆ ಜೂ.೬ ರ ಗುರುವಾರ ರಾತ್ರಿ ೮ ಗಂಟೆಯ ಸಮಯದಲ್ಲಿ ತಾಲೂಕಿನ ಕಸಬಾ ಹೋಬಳಿ ಗ್ಯಾರಹಳ್ಳಿ ಮದ್ಯದ ಅಂಗಡಿ ಹತ್ತಿರ ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಂದಿತು. ಆರೋಪಿಗಳಲ್ಲಿ ಮೊದಲ ಆರೋಪಿ ಸಾಲಗಾಮೆ ರಸ್ತೆ ಬ್ರಾಹ್ಮಣರ ಹಾಸ್ಟೆಲ್ ಹಿಂಭಾಗ ಇರುವ ವಿಮೆ ಏಜೆಂಟ್ ಕೆಲಸ ಮಾಡುವ ಪ್ರೀತಂ (೨೭), ಎರಡನೇ ಆರೋಪಿ ರಾಜಕುಮಾರ್ ನಗರದ ಪುರದಮ್ಮ ದೇವಸ್ಥಾನದ ಹಿಂಭಾಗ ವಾಸವಿರುವ ತರಕಾರಿ ವ್ಯಾಪಾರ ಮಾಡುವ ಕೀರ್ತಿ (೨೬), ಮೂರನೇ ಆರೋಪಿ ಗೌರಿಕೊಪ್ಪಲು ವಿವೇಕಾನಂದ ಪ್ರತಿಮೆ ಬಳಿ ವಾಸವಿರುವ ವ್ಯವಸಾಯ ಕೆಲಸ ಮಾಡುವ ರಂಗನಾಥ್ (೨೬) ಹಾಗೂ ನಾಲ್ಕನೇ ಆರೋಪಿ ಶಾಂತಿ ನಗರದ ನಿವಾಸಿ ಉಮಾಮಹೇಶ್ವರಿ ದೇವಸ್ಥಾನದ ಹತ್ತಿರದ ನಿವಾಸಿ ಈರುಳ್ಳಿ ವ್ಯಾಪಾರ ಮಾಡುವ ಅಮಿತ್. ಆರೋಪಿ ಪ್ರೀತಂ ಮತ್ತು ಚೈಲ್ಡ್ ರವಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇನ್ನು ಪ್ರೀತಂ ಮೇಲೆ ಈಗಾಗಲೇ ೧೩ ಪ್ರಕರಣಗಳಿವೆ. ಇನ್ನು ಹೆಚ್ಚಿನ ತನಿಖೆ ಮುಂದುವರೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.ಆರೋಪಿಗಳು ಹಾಗೂ ಮೃತ ರೌಡಿಶೀಟರ್ ರವಿ ಅಲಿಯಾಸ್ ಚೈಲ್ಡ್ ರವಿ ಸ್ನೇಹಿತರೇ ಆಗಿದ್ದು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕಳೆದ ಅನೇಕ ದಿನಗಳಿಂದ ಇವರು ಮಾತನಾಡುತ್ತಿರಲಿಲ್ಲ. ಚೈಲ್ಡ್ ರವಿ ಪತ್ನಿ ಗೌತಮಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.