ಸಾರಾಂಶ
ಬಾಲ್ಯವಿವಾಹ ಪ್ರಕರಣ ಕಂಡುಬಂದರೆ ಸಂಬಂಧಿತ ಅಧಿಕಾರಿಗಳು ತಡೆಯಾಜ್ಞೆ ತರಬೇಕೆಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಬಾಲ್ಯವಿವಾಹ ಪ್ರಕರಣ ಕಂಡುಬಂದಾಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಬಾಲ್ಯ ವಿವಾಹ ನಿಷೇಧಾಧಿಕಾರಿ ಅದಕ್ಕೆ ತಡೆಯಾಜ್ಞೆ ತರಬೇಕು. ಪ್ರಕರಣ ಕಂಡುಬಂದಾಗ ಸಿಡಿಪಿಒಗಳು ತಕ್ಷಣವೇ ಮುಂದಾಳತ್ವ ವಹಿಸಿಕೊಂಡು ಸಂಬಂಧಿಸಿದ ಇಲಾಖೆಗಳ ಸಮನ್ವಯದ ಜೊತೆಗೆ ಬಾಲ್ಯವಿವಾಹ ತಡೆಗೆ ಅರಿವು ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಇಲ್ಲಿನ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ (ಕಲ್ಯಾಣ) ರಕ್ಷಣಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಕ್ರಮಬದ್ಧ ರೀತಿಯಲ್ಲಿ ಪಾಲನೆ ಮತ್ತು ಪೋಷಣೆ ಒದಗಿಸಿ, ಮಕ್ಕಳ ಮೇಲೆ ದೌರ್ಜನ್ಯ ಕಂಡುಬಂದರೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಒಟ್ಟು 59 ಬಾಲ್ಯವಿವಾಹಗಳನ್ನು ತಡೆದು ಪೊಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿರುತ್ತವೆ. ಬಾಲ್ಯ ವಿವಾಹ ತಡೆದ ಮಕ್ಕಳು ಸಮಿತಿಯ ಮುಂದೆ ಅನುಪಾಲನೆಯಲ್ಲಿರುತ್ತಾರೆ. ಅಂಗನವಾಡಿ ಮೇಲ್ವಿಚಾರಕಿಯರ ಮೂಲಕ ಅನುಪಾಲನೆಯಲ್ಲಿ ಇರುತ್ತಾರೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಅವರನ್ನು ಮರಳಿ ತರಗತಿಗಳಿಗೆ ಕರೆತರಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.ಸಂಕಷ್ಟದಲ್ಲಿರುವ ಮಕ್ಕಳಿಗೆ ಸಹಾಯ:
ರಸ್ತೆಯ ಮೇಲೆ ವಾಸಿಸುವ ಕುಟುಂಬದ ಮಕ್ಕಳು, ತಂದೆ-ತಾಯಿ ಕಳೆದುಕೊಂಡು ಬೀದಿಮೇಲೆ ಅಲೆಯುವ ಮಕ್ಕಳು, ಶಾರೀರಿಕ ಮತ್ತು ಮಾನಸಿಕ, ವಿಕಲಚೇತನ ಮಕ್ಕಳು, ಬಾಲ ಕಾರ್ಮಿಕರು, ಕೆಲಸ ಮಾಡುವ ಮಕ್ಕಳು, ಭಿಕ್ಷಾಟನೆಯ ಮಕ್ಕಳು, ಚಿಂದಿ ಆಯುವ ಮಕ್ಕಳು, ರೈಲ್ವೆ ನಿಲ್ದಾಣದಲ್ಲಿ ಅಲೆದಾಡುವ ಮಕ್ಕಳು, ದೇವಸ್ಥಾನ ಬಸ್ ನಿಲ್ದಾಣದಲ್ಲಿ ವಾಸಮಾಡುವ ಮಕ್ಕಳು, ಕಟ್ಟಡ ಕೆಲಸ ಮತ್ತು ಕೊಳಚೆ ಪ್ರದೇಶದಲ್ಲಿ ವಾಸಿಸುವ ಮಕ್ಕಳು, ಮಾದಕ ಸೇವನೆಗಳಿಗೆ ಒಳಗಾಗುತ್ತಿರುವ ಮಕ್ಕಳು, ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನ ಸ್ವಚ್ಚಗೊಳಿಸುತ್ತಿರುವ ಮಕ್ಕಳು, ಹೊಲಗದ್ದೆಗಳಲ್ಲಿ ಕೂಲಿಗಾಗಿ ಹೋಗುವ ಮಕ್ಕಳು ಹೀಗೆ ಇಂತಹ ಮಕ್ಕಳನ್ನು ರಕ್ಷಣೆ ಮಾಡಿದ ನಂತರ ಕರೆದುಕೊಂಡು ಬಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಿಪಡಿಸುತ್ತಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಬಾಲ ಕಾರ್ಮಿಕ ನಿರ್ಮೂಲನ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ, ಹಣಮಂತ್ರಾಯ ಕರಡ್ಡಿ, ಪ್ರೇಮಮೂರ್ತಿ, ಮಕ್ಕಳ ರಕ್ಷಣಾಧಿಕಾರಿ ದಶರಥನಾಯಕ, ಕಾನೂನು ಅಧಿಕಾರಿ ರಾಜೇಂದ್ರಕುಮಾರ, ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ನಾಗಮ್ಮ ಹಿರೇಮಠ, ಸೇರಿದಂತೆ ಇತರರಿದ್ದರು.