ಮೆಡಿಕಲ್ ಸೀಟ್ ಹೆಸರಲ್ಲಿ ಯುವತಿಗೆ ವಂಚನೆ?

| Published : Jan 16 2025, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವೈದ್ಯಳಾಗಬೇಕು, ಬಡ ರೋಗಿಗಳ ಸೇವೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದ ಆಕೆಗೆ ವೈದ್ಯಕೀಯ ಸೀಟ್‌ ಸಿಗಲಿಲ್ಲ. ಎರಡು ಬಾರಿ ನೀಟ್ ಪರೀಕ್ಷೆ ಬರೆದರೂ ರ್‍ಯಾಂಕಿಂಗ್ ಬಂದಿರಲಿಲ್ಲ. ಹೀಗಾಗಿ, ಆಕೆ ಮುಂದೇನು ಎಂಬ ಚಿಂತೆಯಲ್ಲಿದ್ದಳು. ಅದೇ ಸಮಯದಲ್ಲೇ ನಿಮಗೆ ಎಂಬಿಬಿಎಸ್ ಸೀಟು ಕೊಡಿಸುತ್ತೇವೆ ಎಂದು ಹೇಳಿ ನಂಬಿಸಿದ ಜಾಲವೊಂದು ಇವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.ಮೆಡಿಕಲ್ ಸೀಟು ಕೊಡಿಸುತ್ತೇವೆ ಎಂದು ಹೇಳಿ 2023 ಅಗಸ್ಟ್‌ನಲ್ಲಿ ₹33 ಲಕ್ಷ ಪಡೆದು ವಂಚಿಸಿದ ಮೂವರ ವಿರುದ್ಧ 2024 ನವೆಂಬರ್ 21ರಂದು ನೊಂದ ಯುವತಿ ಜಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸರ್ಕಾರಿ ಸೀಟು ಸಿಗದವರಿಗೆ ಪೇಮೆಂಟ್ ಸೀಟು ಕೊಡಿಸುತ್ತೇವೆ ಎಂದು ಹೇಳಿ ಮಾಡುವ ಈ ಮೆಡಿಕಲ್ ವಂಚನೆಯಲ್ಲಿ ಪರಿಚಯಸ್ಥರೇ ಮತ್ತು ಪ್ರಮುಖರೇ ಇದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ವೈದ್ಯಳಾಗಬೇಕು, ಬಡ ರೋಗಿಗಳ ಸೇವೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದ ಆಕೆಗೆ ವೈದ್ಯಕೀಯ ಸೀಟ್‌ ಸಿಗಲಿಲ್ಲ. ಎರಡು ಬಾರಿ ನೀಟ್ ಪರೀಕ್ಷೆ ಬರೆದರೂ ರ್‍ಯಾಂಕಿಂಗ್ ಬಂದಿರಲಿಲ್ಲ. ಹೀಗಾಗಿ, ಆಕೆ ಮುಂದೇನು ಎಂಬ ಚಿಂತೆಯಲ್ಲಿದ್ದಳು. ಅದೇ ಸಮಯದಲ್ಲೇ ನಿಮಗೆ ಎಂಬಿಬಿಎಸ್ ಸೀಟು ಕೊಡಿಸುತ್ತೇವೆ ಎಂದು ಹೇಳಿ ನಂಬಿಸಿದ ಜಾಲವೊಂದು ಇವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.ಮೆಡಿಕಲ್ ಸೀಟು ಕೊಡಿಸುತ್ತೇವೆ ಎಂದು ಹೇಳಿ 2023 ಅಗಸ್ಟ್‌ನಲ್ಲಿ ₹33 ಲಕ್ಷ ಪಡೆದು ವಂಚಿಸಿದ ಮೂವರ ವಿರುದ್ಧ 2024 ನವೆಂಬರ್ 21ರಂದು ನೊಂದ ಯುವತಿ ಜಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸರ್ಕಾರಿ ಸೀಟು ಸಿಗದವರಿಗೆ ಪೇಮೆಂಟ್ ಸೀಟು ಕೊಡಿಸುತ್ತೇವೆ ಎಂದು ಹೇಳಿ ಮಾಡುವ ಈ ಮೆಡಿಕಲ್ ವಂಚನೆಯಲ್ಲಿ ಪರಿಚಯಸ್ಥರೇ ಮತ್ತು ಪ್ರಮುಖರೇ ಇದ್ದಾರೆ.

ಪ್ರಾಂಶುಪಾಲ, ಮಹಿಳೆಯೇ ವಂಚಕರು!:

ವಿಜಯಪುರದ ಯುವತಿ ಶ್ರೇಷ್ಠಾ ಮುದುಕನಾಳ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಪಿಯುಸಿ ವಿಜ್ಞಾನ ಪಾಸಾದ ಬಳಿಕ ನೀಟ್ ಪರೀಕ್ಷೆ ಬರೆದರೂ ಸೀಟ್‌ ಸಿಕ್ಕಿರಲಿಲ್ಲ. ಈ ವೇಳೆ ಬೆಂಗಳೂರಿನ ರಾಮಯ್ಯ ಕಾಲೇಜಿಗೆ ಕೊಲ್ಯಾಬರೇಷನ್ ಹೊಂದಿತ್ತು ಎನ್ನಲಾದ ಮಲೇಷಿಯನ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಸೀಟು ಕೊಡಿಸುತ್ತೇವೆ ಎಂದು ಹೇಳಿದ್ದ ಪರಿಚಯಸ್ಥರಾದ ಜೆಜೆ ಪಿಯು ಕಾಲೇಜಿನ ಪ್ರಾಂಶುಪಾಲ ಸೋಮನಾಥ ವಾಲಿಕಾರ ಎಂಬುವವರು ಇವರನ್ನು ನಂಬಿಸಿದ್ದಾರೆ. ಅಲ್ಲದೆ, ತಮ್ಮೊಂದಿಗೆ ಎಆರ್‌ಜಿ ಕಾಲೇಜಿನ ಪ್ರಾಂಶುಪಾಲ ಧನರಾಜ ಬಸವಂತ ಅವರನ್ನು ಕರೆದುಕೊಂಡು ಬಂದು ತಮಗೆ ₹33 ಲಕ್ಷ ಹಣ ಕೊಟ್ಟರೆ ಮೆಡಿಕಲ್ ಸೀಟ್ ಪಕ್ಕಾ ಎಂದು ವಿಶ್ವಾಸ ಹುಟ್ಟಿಸಿದ್ದರು. ಜೊತೆಗೆ ಬೆಂಗಳೂರಿನಲ್ಲಿ ಎಕ್ಸಾಂ ಬೋರ್ಡ್‌ನಲ್ಲಿ ಕೆಲಸ ಮಾಡುವ ಸಹನಾ ಎಂಬ ಮಹಿಳೆ ಕೂಡ ಇದರಲ್ಲಿ ಹೆಸರು ತಳುಕು ಹಾಕಿಕೊಂಡಿದೆ.

ಹಣ ಪಡೆದಿದ್ದು ಹೇಗೆ?:

ಯುವತಿಯ ತಂದೆಯ ಕೆನರಾ ಬ್ಯಾಂಕ್ ಖಾತೆಯಿಂದ 2023 ಅ.18 ರಂದು ಧನರಾಜ ಬಸವಂತನ ಎಸ್‌ಬಿಐ ಬ್ಯಾಂಕ್ ಖಾತೆಗೆ ₹3 ಲಕ್ಷ ಆರ್‌ಟಿಜಿಎಸ್‌ ಮಾಡಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳಾದ ಸೋಮನಾಥ ವಾಲಿಕಾರ ಮತ್ತು ಧನರಾಜ ಬಸವಂತ ಇಬ್ಬರು ಯುವತಿಯ ಮನೆಗೆ ಹೋಗಿ ₹2 ಲಕ್ಷ ನಗದು ಪಡೆದಿದ್ದಾರೆ. ಅದಾದ 2-3 ದಿನಗಳ ಬಳಿಕ ಸೋಮನಾಥ ವಾಲಿಕಾರ ಮತ್ತು ಧನರಾಜ ಬಸವಂತ ಇಬ್ಬರು ಸೇರಿ ಮತ್ತೆ ಯುವತಿಯ ಮನೆಗೆ ಹೋಗಿ ₹ 10 ಲಕ್ಷ ಪಡೆದಿದ್ದಾರೆ. ಬಳಿಕ ಯುವತಿ ಹಾಗೂ ಅವರ ತಂದೆ-ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮೆಡಿಕಲ್ ಸೀಟು ಕೊಡಿಸುತ್ತೇವೆ ಎಂದು ಹೇಳಿ, ಸೋಮನಾಥ ವಾಲಿಕಾರ, ಧನರಾಜ ಬಸವಂತಿ ಬೆಂಗಳೂರಿನ ಮಹಿಳೆ ಸಹನಾ ಎಂಬುವರು ಮೂವರು ಸೇರಿ 2023 ಆಗಸ್ಟ್ 23ರಂದು ₹ 18 ಲಕ್ಷ ತೆಗೆದುಕೊಂಡಿದ್ದಾರೆ ಎಂದು ನೊಂದ ವಂಚನೆಗೊಳಗಾಗಿರುವ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮುಂದೆ ಕೆಲವು ದಿನಗಳು ಕಳೆದರೂ ಸೀಟು ಸಿಗಲಿಲ್ಲ, ಹಣವು ಬರಲಿಲ್ಲ. ಸೆಲೆಕ್ಷನ್ ಲಿಸ್ಟ್‌ನಲ್ಲಿ ಯುವತಿಯ ಹೆಸರೂ ಇರಲಿಲ್ಲ. ಬಳಿಕ ಯುವತಿ ಕೊಟ್ಟ ಹಣ ವಾಪಸ್ ಕೊಡದೇ ಸುಳ್ಳು ಹೇಳುತ್ತಿದ್ಧಾರೆ. ಹೀಗಾಗಿ ವಂಚಿಸಿದ ಮೂವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಯುವತಿ ದೂರು ನೀಡಿದ್ದಾರೆ.

ಆರೋಪಕ್ಕೊಳಗಾದವರು ಹೇಳುವುದೇನು..?:

ದೂರುದಾರರೇ ನಮ್ಮ ಬಳಿಗೆ ಬಂದು ಬೆಂಗಳೂರಿನ ಮೆಡಿಕಲ್ ಕಾಲೇಜೊಂದರಲ್ಲಿ ಸೀಟು ಕೊಡಿಸಿ ಎಂದು ಹೇಳಿದ್ದರು. ಅದರಂತೆ ನಾವು ಪರಿಚಯವಿರುವವರಲ್ಲಿ ಒಂದು ಸೀಟು ಕೊಡಿಸಿ ಇವರಿಗೆ ಸಹಾಯ ಮಾಡಲು ಮುಂದಾಗಿದ್ದೇವು. ಆದರೆ ಸೀಟು ಸಿಗದ ಕಾರಣ ಯುವತಿಗೆ ಹಣ ವಾಪಸ್‌ ಕೊಡುವುದು ವಿಳಂಬವಾಗಿದೆ. ಅಷ್ಟಕ್ಕೆ ಅವರು ನಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ. ನಾವು ಸಹ ವಿಚಾರಣೆಗೆ ಹಾಜರಾಗಿದ್ದು, ಠಾಣೆಯಲ್ಲಿ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದೇವೆ. ಒಳ್ಳೆಯತನಕ್ಕೆ ಈಗ ಕಾಲವಿಲ್ಲ. ನಮ್ಮಿಂದಲೇ ಸಹಾಯ ಪಡೆಯಲು ಮುಂದಾದವರು ಇಂದು ನಮ್ಮ ಮೇಲೆಯೇ ₹ 33 ಲಕ್ಷದ ಸುಳ್ಳು ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ ಎಂದು ಆರೋಪಿಯಾಗಿರುವ ಜೆಜೆ ಪಿಯು ಕಾಲೇಜಿನ ಪ್ರಾಂಶುಪಾಲ ಸೋಮನಾಥ ವಾಲಿಕಾರ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.

---------

ಕೋಟ್

ನಾವು ಅವರಿಂದ ₹ 33 ಲಕ್ಷ ಹಣ ಪಡೆದಿಲ್ಲ. ಅವರಿಗೆ ಮೆಡಿಕಲ್ ಸೀಟು ಬೇಕು ಎಂದು ಅವರೇ ನಮಗೆ ₹ 15ಲಕ್ಷ ಹಣವನ್ನು ಕೊಟ್ಟಿದ್ದಾರೆ. ಅದರಲ್ಲಿ ನಾವು ಈಗಾಗಲೇ ₹ 9.40 ಲಕ್ಷ ವಾಪಸ್ ಕೊಟ್ಟಿದ್ದೇವೆ. ಇನ್ನು ಕೇವಲ ₹ 5.60 ಲಕ್ಷ ದಷ್ಟು ಮಾತ್ರ ಕೊಡಬೇಕಿದ್ದು, ಅದನ್ನೂ ಸಹ ವಾಪಸ್ ಕೊಡಲಿದ್ದೇವೆ. ನಾವು ಅವರಿಗೆ ಯಾವುದೇ ರೀತಿಯಲ್ಲಿ ಮೋಸ ಮಾಡಿಲ್ಲ.

- ಸೋಮನಾಥ ವಾಲಿಕಾರ, ಆರೋಪಕ್ಕೊಳಗಾದವರು