ಮಕ್ಕಳಿಗೆ ಅಗತ್ಯವಾದ ಶೈಕ್ಷಣಿಕ ಹಾಗೂ ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಒದಗಿಸಿ ಸಮರ್ಪಕವಾಗಿ ಪೋಷಿಸಿದರೆ ಅವರು ಭವಿಷ್ಯದಲ್ಲಿ ಸಮಾಜಕ್ಕೆ ದಾರಿದೀಪವಾಗುತ್ತಾರೆ ಎಂದು ರೋಟರಿ ಕಣ್ಣಿನ ಆಸ್ಪತ್ರೆ ಅಧ್ಯಕ್ಷ ಕೆಪಿಎಸ್ ವಿಶ್ವನಾಥ್ ಹೇಳಿದರು. 2018ರಲ್ಲಿ ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ. ಈ ಹಿಂದೆ ಸರ್ಕಾರದ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಕಣ್ಣು ತಪಾಸಣೆ ನಡೆಸಿ ಹಾಸನ ಜಿಲ್ಲಾ ಆಸ್ಪತ್ರೆಯ ಮೂಲಕ ಕನ್ನಡಕ ವಿತರಿಸಲಾಗುತ್ತಿತ್ತು ಎಂದು ತಿಳಿಸಿದರು.

ಅರಸೀಕೆರೆ: ಮಕ್ಕಳಿಗೆ ಅಗತ್ಯವಾದ ಶೈಕ್ಷಣಿಕ ಹಾಗೂ ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಒದಗಿಸಿ ಸಮರ್ಪಕವಾಗಿ ಪೋಷಿಸಿದರೆ ಅವರು ಭವಿಷ್ಯದಲ್ಲಿ ಸಮಾಜಕ್ಕೆ ದಾರಿದೀಪವಾಗುತ್ತಾರೆ ಎಂದು ರೋಟರಿ ಕಣ್ಣಿನ ಆಸ್ಪತ್ರೆ ಅಧ್ಯಕ್ಷ ಕೆಪಿಎಸ್ ವಿಶ್ವನಾಥ್ ಹೇಳಿದರು.ನಗರದ ರೋಟರಿ ಶಾಲೆಯಲ್ಲಿ ಸಕ್ರಿಯ ವಕೀಲರ ಸಂಘ ಬೆಂಗಳೂರು, ರೋಟರಿ ಸಂಸ್ಥೆ, ಇನ್ನರ್‌ವ್ಹೀಲ್‌ ಸಂಸ್ಥೆ ಹಾಗೂ ರೋಟರಿ ವಾಸವಾಂಬಾ ಸುಂದರರಾಜ ಶೆಟ್ಟಿ ನೇತ್ರಾಲಯ, ಅರಸೀಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಉಚಿತ ಕಣ್ಣು ಪರೀಕ್ಷೆ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1995ರಲ್ಲಿ ರೋಟರಿ ಸಂಸ್ಥೆಯ ಮೂಲಕ ನಗರದಲ್ಲಿ ನೇತ್ರಾಲಯವನ್ನು ಆರಂಭಿಸಿ ಇದುವರೆಗೆ 15 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ, ಔಷಧಿ ಹಾಗೂ ಲೆನ್ಸ್ ವಿತರಿಸಲಾಗಿದೆ. 2018ರಲ್ಲಿ ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ. ಈ ಹಿಂದೆ ಸರ್ಕಾರದ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಕಣ್ಣು ತಪಾಸಣೆ ನಡೆಸಿ ಹಾಸನ ಜಿಲ್ಲಾ ಆಸ್ಪತ್ರೆಯ ಮೂಲಕ ಕನ್ನಡಕ ವಿತರಿಸಲಾಗುತ್ತಿತ್ತು. ಆದರೆ ಕಳೆದ ಎಂಟು ತಿಂಗಳಿಂದ ಸರ್ಕಾರದ ಉಚಿತ ಶಸ್ತ್ರಚಿಕಿತ್ಸೆ ಹಾಗೂ ಇತರ ಸೌಲಭ್ಯಗಳು ಸ್ಥಗಿತಗೊಂಡಿರುವುದು ವಿಷಾದಕರವಾಗಿದೆ. ಈ ಹಿನ್ನೆಲೆ ನಗರದ ಎಲ್ಲಾ ಶಾಲಾ ಮಕ್ಕಳಿಗೆ ಉಚಿತ ಕಣ್ಣು ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು. ಲೋಕೇಶ್ ಲಾಯರ್ ಮಾತನಾಡಿ, ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಮಕ್ಕಳು ತಮ್ಮ ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಪೋಷಕರು ಅಥವಾ ಶಿಕ್ಷಕರಿಗೆ ತಿಳಿಸಬೇಕು. ಬೇಗ ಗುರುತಿಸಿದಷ್ಟು ಬೇಗ ಸಮಸ್ಯೆ ಪರಿಹಾರ ಸಾಧ್ಯವಾಗುತ್ತದೆ. ಇಂತಹ ಸೇವೆಗಳು ಮಕ್ಕಳ ಉದ್ಧಾರಕ್ಕೆ ಸಹಕಾರಿಯಾಗುತ್ತವೆ ಎಂದು ಹೇಳಿದರು. ರೋಟರಿ ಸಂಸ್ಥೆಯ ನವೀನ್ ಕುಮಾರ್ ಮಾತನಾಡಿ, ನಗರದ ಶಾಲೆಗಳ ಎಲ್ಲಾ ಮಕ್ಕಳ ಕಣ್ಣು ಪರೀಕ್ಷೆ ನಡೆಸಿ ದೃಷ್ಟಿದೋಷ ಇರುವ ಮಕ್ಕಳಿಗೆ ಉಚಿತ ಕನ್ನಡಕ ವಿತರಿಸಲಾಗುತ್ತದೆ. ದೃಷ್ಟಿ ಸಮಸ್ಯೆಯಿಂದ ಮಕ್ಕಳ ಕಲಿಕೆಗೆ ಅಡಚಣೆ ಆಗಬಾರದೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.ರೋಟರಿ ಸಂಸ್ಥೆಯ ಯೋಗೇಶ್ ಆಚಾರ್‌ ಮಾತನಾಡಿ, ಈ ಹಿಂದೆ ರಕ್ತ ಪರೀಕ್ಷೆ, ಕಣ್ಣು ಪರೀಕ್ಷೆ ಸೇರಿದಂತೆ ಹಲವು ಆರೋಗ್ಯ ತಪಾಸಣೆಗಳನ್ನು ಸಂಸ್ಥೆಯ ಮೂಲಕ ಆಯೋಜಿಸಲಾಗಿದೆ. ಈ ಬಾರಿ ನಗರದ 25ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳಿಗೆ ಕಣ್ಣು ಪರೀಕ್ಷೆ ನಡೆಸಿ ಅಗತ್ಯವಿರುವವರಿಗೆ ಉಚಿತ ಕನ್ನಡಕ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಮಲ್ಲಿಕಾರ್ಜುನ್, ರೋಟರಿ ಸಂಸ್ಥೆಯ ರಾಜೇಗೌಡ, ಲೋಕೇಶ್ ಕುಮಾರ್, ಮಹಮದ್ ಖುರೇಷಿ, ಲಕ್ಷ್ಮೀಪ್ರಸಾದ್, ಹೈಟೆಕ್ನಿಷಿಯನ್ ಮೊಹಮ್ಮದ್ ಮಾಝಿ, ಇನ್ನರ್ ವೀಲ್ ಸಂಸ್ಥೆಯ ಸಂಧ್ಯಾ ವಿಶ್ವನಾಥ್, ಶ್ವೇತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.