ವಾಸವಿ ಸಪ್ತಾಹ -2026ರ ಅಂಗವಾಗಿ ಕುಶಾಲನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು.

ಕುಶಾಲನಗರ: ವಾಸವಿ ಸಪ್ತಾಹ -2026ರ ಅಂಗವಾಗಿ ಕುಶಾಲನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ, ವಾಸವಿ ಯುವಜನ ಚಾರಿಟೇಬಲ್ ಟ್ರಸ್ಟ್ ಮತ್ತು ವಾಸವಿ ಯುವಜನ ಸಂಘದ ಸಹಯೋಗದಲ್ಲಿ ಕನ್ನಿಕಾ ಪರಮೇಶ್ವರಿ ದೇವಾಲಯದ ಬ್ರಹ್ಮ ಕಳಶೋತ್ಸವ ಅಂಗವಾಗಿ ನಡೆದ ಶಿಬಿರಕ್ಕೆ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು.ಶಿಬಿರದ ಸದುಪಯೋಗವನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕು. ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಕುಶಾಲನಗರ ಆರ್ಯವೈಶ್ಯ ಮಂಡಳಿ ಮತ್ತು ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಬಡ ಮಧ್ಯಮ ಜನತೆಯ ಆರೋಗ್ಯದ ಬಗ್ಗೆ ಚಿಂತನೆ ಹರಿಸಿರುವುದು ಶ್ಲಾಘನೀಯ ಅಂಶ ಎಂದರು. ರಕ್ತದಾನ ಶಿಬಿರ ಉದ್ಘಾಟಿಸಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಸಂಘ ಸಂಸ್ಥೆಗಳು ಈ ರೀತಿಯ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮೆಚ್ಚುಗೆಯ ವಿಚಾರವಾಗಿದೆ. ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ. ನಂಜುಂಡಯ್ಯ ಅವರ ನೇತೃತ್ವದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಸೇರಿದಂತೆ ಒಟ್ಟು 60 ಮಂದಿ ಶಿಬಿರವನ್ನು ನಡೆಸಿಕೊಟ್ಟರು.

ಸುಮಾರು 500ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡರು. ಸಾಮಾನ್ಯ ವೈದ್ಯಶಾಸ್ತ್ರ, ಶಸ್ತ್ರ ಚಿಕಿತ್ಸಾ ವಿಭಾಗ, ಕೀಲು ಮತ್ತು ಮೂಳೆ ವಿಭಾಗ, ಇಎನ್ಟಿ ವಿಭಾಗ, ಸ್ತ್ರೀ ರೋಗ ವಿಭಾಗ, ಮಕ್ಕಳ ವಿಭಾಗ, ಚರ್ಮರೋಗ, ದಂತಶಾಸ್ತ್ರ, ಸಮುದಾಯ ವೈದ್ಯಶಾಸ್ತ್ರ, ಮಾನಸಿಕ ಆರೋಗ್ಯ ವಿಭಾಗ, ನೇತ್ರ ತಪಾಸಣೆ, ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆ ವಿಭಾಗದ ತಜ್ಞರಿಂದ ಪರಿಶೀಲನೆ ಸೇರಿದಂತೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮತ್ತು ಅಂಗವಿಕಲರ ಕಾರ್ಡ್ ನೀಡುವ ಕಾರ್ಯ ನಡೆಯಿತು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಕಾರ್ಯದರ್ಶಿ ಕೆ. ಪ್ರವೀಣ್, ಖಜಾಂಚಿ ಪಿ. ಎಸ್. ಪ್ರಶಾಂತ್, ವಾಸವಿ ಸಪ್ತಾಹ ಯೋಜನಾ ನಿರ್ದೇಶಕ ಎ.ಎಸ್. ಕುಮಾರ್, ವಾಸವಿ ಯುವಜನ ಸಂಘದ ಕಾರ್ಯದರ್ಶಿ ಬಿ.ಎನ್. ಅಂಜನ್ ಮತ್ತು ಪದಾಧಿಕಾರಿಗಳು ಇದ್ದರು.