ಹೊದ್ರಾಳಿಯ ಸುಬ್ಬಣ್ಣ ನಾಗರಾಜ್-ಮೀನಾಕ್ಷಿ ನಾಗರಾಜ್ ದಂಪತಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಒಳಾಂಗಣದಲ್ಲಿ ಸುಮಾರು 1 ಕೋಟಿ ರು. ಮೌಲ್ಯದ ನೂತನವಾಗಿ ಸಾಗುವಾನಿ ಮರದಿಂದ ನಿರ್ಮಿಸಿದ ದಾರುಶಿಲ್ಪವನ್ನು ಶ್ರೀ ದೇವರಿಗೆ ಸಮರ್ಪಣಾ ಕಾರ್ಯಕ್ರಮ ಶುಕ್ರವಾರದಂದು ನಡೆಯಿತು.
ಕುಂದಾಪುರ: ಹೊದ್ರಾಳಿಯ ಸುಬ್ಬಣ್ಣ ನಾಗರಾಜ್ ಹಾಗೂ ಮೀನಾಕ್ಷಿ ನಾಗರಾಜ್ ದಂಪತಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಒಳಾಂಗಣದಲ್ಲಿ ಸುಮಾರು 1 ಕೋಟಿ ರು. ಮೌಲ್ಯದ ನೂತನವಾಗಿ ಸಾಗುವಾನಿ ಮರದಿಂದ ನಿರ್ಮಿಸಿದ ದಾರುಶಿಲ್ಪವನ್ನು ಶ್ರೀ ದೇವರಿಗೆ ಸಮರ್ಪಣಾ ಕಾರ್ಯಕ್ರಮ ಶುಕ್ರವಾರದಂದು ನಡೆಯಿತು.
ದಾನಿಗಳಾದ ಶ್ರೀಯುತ ದಂಪತಿ ಇಲ್ಲಿನ ಕೋಟೇಶ್ವರದ ಹೊದ್ರಾಳಿ ನಿವಾಸಿಗಳಾಗಿದ್ದು ಬೆಂಗಳೂರಿನಲ್ಲಿ ಆನೆಗುಡ್ಡೆ ಶ್ರೀ ವಿನಾಯಕನ ಅನುಗ್ರಹದಿಂದ ಎವಿಯೇಷನ್ ಟ್ರಾವೆಲ್ಸ್ ಎನ್ನುವ ಉದ್ಯಮ ನಡೆಸುತ್ತಿದ್ದಾರೆ. ಕಳೆದು 50 ವರ್ಷಗಳಿಂದ ಪ್ರತಿವರ್ಷ ಜ. 1ರಂದು ತಪ್ಪದೇ ಆನೆಗುಡ್ಡೆ ಬರುತ್ತಿದ್ದು, ತಮ್ಮ ಲಾಭದಲ್ಲಿ ಶ್ರೀ ದೇವರಿಗೆ ಯಥಾಶಕ್ತಿ ಸೇವೆ ಸಲ್ಲಿಸುತಿದ್ದರು. ಈ 50ನೇ ವರ್ಷದ ನೆನಪಿಗಾಗಿ ಈ ದಾರು ಶಿಲ್ಪದ ನಿರ್ಮಾಣಕ್ಕೆ ಸಂಪೂರ್ಣ ವೆಚ್ಚವನ್ನು ಭರಿಸಿದ್ದಾರೆ.ದೇವಸ್ಥಾನದ ಎದುರು ಶ್ರೀಯುತ ದಂಪತಿಗಳನ್ನು, ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಗೌರವಿಸಿ ಶ್ರೀದೇವರ ಅನುಗ್ರಹ ಪ್ರಸಾದ, ಸ್ಮರಣಿಕೆ ನೀಡಿ, ದಂಪತಿಗಳು ಎರಡು ಹಸ್ತದಿಂದ ದಾನ ಮಾಡುತ್ತಿದ್ದು ಶ್ರೀ ದೇವರು ಅವರಿಗೆ ಅನಂತ ಹಸ್ತದಿಂದ ಅವರ ಇಷ್ಟಾರ್ಥವನ್ನು ಅನುಗ್ರಹಿಸುವಂತಾಗಲಿ ಎಂದು ಪ್ರಾರ್ಥಿಸಿದರು. ದೇವಳದ ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯರು ದಾನಿಗಳನ್ನು ಪರಿಚಯಿಸಿ, ಅವರ ದೇವಳದ ಅವಿನಾಭಾವ ಸಂಬಂಧ ವಿವರಿಸಿ, ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಷ್ಟಶಿಲ್ಪದ ಕರ್ತೃಗಳಾದ ಸುಕುಮಾರ ಗುಡಿಗಾರ ಹಾಗೂ ಕೃಷ್ಣ ಗುಡಿಗಾರ ಸಹೋದರರು ಹಾಗೂ ದೇವಳದ ಇಂಜಿನಿಯರ್ ಎಚ್.ಶ್ರೀಕಾಂತ ಆಚಾರ್ಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಧರ್ಮದೇಶಿಗಳಾದ ಕೆ.ನಿರಂಜನ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ ವ್ಯಾಸ ಉಪಾಧ್ಯಾಯ ಸಹೋದರರು, ದೇವಳದ ಮ್ಯಾನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕೆ. ರಾಜಾರಾಮ ಉಪಾಧ್ಯಾಯ ಕಾರ್ಯಕ್ರಮವನ್ನು ನಿರ್ವಹಿಸಿದರು.