ಕಾರ್ಮಿಕರಿಗೆ ತ್ವರಿತವಾಗಿ, ಕೆಲಸದ ಸ್ಥಳಗಳಲ್ಲೇ ವೈದ್ಯಕೀಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ‘ಸಂಚಾರಿ ಆರೋಗ್ಯ ಘಟಕ’ (ಮೊಬೈಲ್ ಮೆಡಿಕಲ್ ಯುನಿಟ್) ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಕಾರ್ಮಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾರ್ಮಿಕರಿಗೆ ತ್ವರಿತವಾಗಿ, ಕೆಲಸದ ಸ್ಥಳಗಳಲ್ಲೇ ವೈದ್ಯಕೀಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ‘ಸಂಚಾರಿ ಆರೋಗ್ಯ ಘಟಕ’ (ಮೊಬೈಲ್ ಮೆಡಿಕಲ್ ಯುನಿಟ್) ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಕಾರ್ಮಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಆನಗೋಡು ಗ್ರಾಮದಲ್ಲಿ ಮಂಗಳವಾರ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ ನೀಡಿ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ‘ಸಂಚಾರಿ ಆರೋಗ್ಯ ಘಟಕ’ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. ಅವರ ಆರೋಗ್ಯದ ಹಿತದೃಷ್ಟಿಯಿಂದ ವಾಹನಗಳನ್ನು ವಿಶೇಷ ರೀತಿಯಲ್ಲಿ ಸಿದ್ಧಗೊಳಿಸಲಾಗಿದೆ ಎಂದರು.

ಕಾರ್ಮಿಕರಿಗೆ ಆರೋಗ್ಯದಲ್ಲಿ ಸಮಸ್ಯೆ ಎದುರಾದಲ್ಲಿ ಅವರಿದ್ದಲ್ಲಿಗೆ ವೈದ್ಯರ ಸಮೇತ ಈ ಯೂನಿಟ್ ತೆರಳಿ ಉಚಿತ ಚಿಕಿತ್ಸೆ, ಔಷಧ ಕೂಡ ಕೊಡಲಾಗುತ್ತದೆ. ಕಾರ್ಮಿಕರ ಕಾರ್ಡ್ ಪಡೆದಿರುವ ಕಾರ್ಮಿಕರಿಗೆ ಮೊದಲ ಆದ್ಯತೆ ಇದೆ. ಪ್ರತಿಯೊಬ್ಬ ಕಾರ್ಮಿಕರು ಆನ್‌ಲೈನ್ ಮೂಲಕ ಅರ್ಜಿ ಹಾಕಿ ಕಾರ್ಡ್ ಪಡೆದುಕೊಳ್ಳಬೇಕು. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿ ಕಾರ್ಡ್ ಮಾಡಿಸುವ ಕೆಲಸ ಮಾಡಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಾರ್ಮಿಕರು ಆರೋಗ್ಯದ ಮೇಲೆ ಗಮನ ಕೊಡದೆ ಸದಾ ಕೆಲಸದಲ್ಲಿ ಕಾಲ ಕಳೆಯುತ್ತಾರೆ. ಶ್ರಮಿಕರ ಆರೋಗ್ಯ ಕಾಪಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಚಿಕಿತ್ಸೆಗಾಗಿ ಅಧಿಕ ಹಣ ಭರಿಸದಿರುವ, ವೈದ್ಯರ ಬಳಿ ತೆರಳದ ಅದೆಷ್ಟೋ ಕಾರ್ಮಿಕರಿದ್ದು, ಅಂತಹ ಶ್ರಮಿಕರಿಗೆ ಉಚಿತ ಚಿಕಿತ್ಸೆ, ಉಚಿತ ಔಷದ ಸಿಗಲೆಂದು ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಅಧಿಕಾರಿಗಳು ಈ ಯೋಜನೆಯನ್ನು ಕಾರ್ಮಿಕರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಕೆಲಸದ ಸುರಕ್ಷತೆ ವಸ್ತು ಹಾಗೂ ಸಾಮಗ್ರಿಗಳನ್ನು ವಿತರಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಆರ್.ಅರವಿಂದ್, ಸಂಚಾರಿ ಕ್ಲಿನಿಕ್‌ನ ಜಿಲ್ಲಾ ಮಡಿಕಲ್ ಅಧಿಕಾರಿ ಡಾ.ಕೆ.ಎನ್.ಕಸ್ತೂರಿ, ಕಾರ್ಮಿಕ ಅಧಿಕಾರಿ ರಾಜಶೇಖರ್ ಹಿರೇಮಠ್, ಮುಮ್ತಾಜ್ ಬೇಗಂ, ರಾಜಪ್ಪ, ಪಿಡಿಒ ಸುಮಲತಾ, ಮುಖಂಡರಾದ ಕರಿಬಸಪ್ಪ, ಪ್ರಕಾಶ್, ಬಸಣ್ಣ, ರವಿ, ಜಾಕೀರ್, ರಾಜಣ್ಣ, ಹಾಗೂ ಕಾರ್ಮಿಕರು, ಗ್ರಾಮಸ್ಥರು ಹಾಜರಿದ್ದರು.

ಸಂಚಾರಿ ಆರೋಗ್ಯ ಘಟಕವು ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಹೋಗಲಿದ್ದು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಒತ್ತು ನೀಡಬೇಕು.

ಕೆ.ಎಸ್.ಬಸವಂತಪ್ಪ ಶಾಸಕ.