ಸೌಹಾರ್ದ ಬೆಸೆದ ಸಕ್ಕರೆ ಆರತಿ

| Published : Nov 06 2025, 02:30 AM IST

ಸಾರಾಂಶ

ದುಡಿಮೆಗಾಗಿ 70 ವರ್ಷಗಳ ಹಿಂದೆ ಮಂಗಳೂರಿನಿಂದ ಇಲ್ಲಿಗೆ ಬಂದಿದ್ದ ಈ ಕುಟುಂಬ ಇಂದು ಮಂಗಳೂರು ಕುಟುಂಬವೆಂದೇ ಫೇಮಸ್‌ ಆಗಿವೆ.

ಎಂ. ಪ್ರಹ್ಲಾದ್ ಕನಕಗಿರಿ

ಸಕ್ಕರೆ ಆರತಿ ಎಂದಾಕ್ಷಣ ನೆನಪಿಗೆ ಬರುವುದು ಗೌರಿ ಹಬ್ಬ. ಉತ್ತರ ಕರ್ನಾಟಕದಲ್ಲಿ ವೈಶಿಷ್ಟ್ಯ, ವಿಭಿನ್ನತೆಗೆ ಹೆಸರುವಾಸಿಯಾಗಿರುವ ಈ ಹಬ್ಬಕ್ಕೆ ಮುಸ್ಲಿಂ ಕುಟುಂಬವೊಂದು ಮೂರು ತಲೆಮಾರುಗಳಿಂದ ಆರತಿ ತಯಾರಿಸಿ ರಿಯಾಯಿತಿ ದರದಲ್ಲಿ ಸೌಹಾರ್ದದ ಸಿಹಿ ಹಂಚುತ್ತಿದೆ.

ಹೌದು, ಮೂರು ತಲೆಮಾರುಗಳಿಂದ ಗೌರಿ ಹಬ್ಬದ ಅಂಗವಾಗಿ ಕ್ವಿಂಟಲ್ ಗಟ್ಟಲೆ ಸಕ್ಕರೆ ಆರತಿ ತಯಾರಿಸಿ ಮಾರುಕಟ್ಟೆಯಲ್ಲಿ ರಿಯಾಯಿತಿ ದರದಲ್ಲಿ ಮಾರುವುದು ಇಲ್ಲಿನ ಮಂಗಳೂರು ಕುಟುಂಬದ ಕಾಯಕವಾಗಿದೆ. ಲಾಭದ ನೀರಿಕ್ಷೆ ಇಟ್ಟುಕೊಂಡು ಎಂದಿಗೂ ವ್ಯಾಪಾರ ಮಾಡದ ಈ ಕುಟುಂಬ ಗೌರಿ ಹಬ್ಬ ಮಾತ್ರವಲ್ಲ, ಕನಕಗಿರಿಯ ಕನಕಾಚಲಪತಿ, ಕೊಪ್ಪಳದ ಗವಿಸಿದ್ದೇಶ್ವರ, ಛತ್ತರದ ಆಂಜನೇಯ್ಯಸ್ವಾಮಿ, ಘಡಿವಡಕಿಯ ಮಹಾಲಕ್ಷ್ಮೀ ಸೇರಿದಂತೆ ನಾನಾ ಜಾತ್ರೆಗಳಲ್ಲಿ ಮಿಠಾಯಿ ವ್ಯಾಪಾರವನ್ನೂ ಮಾಡಲಾಗುತ್ತಿದೆ.

ಮಂಗಳೂರಿನಿಂದ ಬಂದ ಕುಟುಂಬ

ದುಡಿಮೆಗಾಗಿ 70 ವರ್ಷಗಳ ಹಿಂದೆ ಮಂಗಳೂರಿನಿಂದ ಇಲ್ಲಿಗೆ ಬಂದಿದ್ದ ಈ ಕುಟುಂಬ ಇಂದು ಮಂಗಳೂರು ಕುಟುಂಬವೆಂದೇ ಫೇಮಸ್‌ ಆಗಿವೆ. ಮೊದಮೊದಲು ಡಬ್ಬಾ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ನಂತರ ಜಾತ್ರೆ, ಉತ್ಸವ, ಹಬ್ಬಹರಿದಿನಗಳಲ್ಲಿ ವ್ಯಾಪಾರ ಶುರು ಮಾಡಿದರು. ಹೀಗೆ ಗೌರಿ ಹಬ್ಬದಲ್ಲಿ ಸಕ್ಕರೆ ಆರತಿ ಮಾಡಲು ಮುಂದಾದರು. ಹೀಗೆ ಆರಂಭವಾದ ಸಕ್ಕರೆ ಆರತಿ ತಯಾರಿಕೆ ಕಾರ್ಯ ಈಗಲೂ ಮುಂದುವರೆದಿದೆ. ಆರತಿ ತಯಾರಿಕೆ ಕಾರ್ಯಕ್ಕೆ ಮೌಲಸಾಬ್‌ ಮಂಗಳೂರು, ಪತ್ನಿ ಬುಡಾನಬೀ, ಸೊಸೆಯಂದಿರಾದ ರಜಿಯಾಬೇಗಂ, ಶಂಶಾದಬೇಗಂ, ಮಕ್ಕಳಾದ ಕಾಸಿಂಸಾಬ, ಮಮ್ಮದರಫಿ ಮೈಮುದಾ, ಮುರ್ತುಜಾ, ಹುಸೇನಬೀ ಸಾಥ್ ನೀಡುತ್ತಿದ್ದಾರೆ.

₹100 ನಿಗದಿ:

ಕಳೆದ ವರ್ಷ ಗೌರಿ ಹಬ್ಬದಲ್ಲಿ ಸಕ್ಕರೆ ಆರತಿಯ ಬೆಲೆ ₹70 ನಿಂದ ₹80ಕ್ಕೆ ಮಾರಾಟವಾಗಿತ್ತು. ಈ ಬಾರಿ ನೂರು ನಿಗದಿಗೊಳಿಸಿದ್ದು, ದಿನಕ್ಕೆ ಎರಡ್ಮೂರು ಕ್ವಿಂಟಲ್ ಆರತಿ ತಯಾರಿಸಲಾಗುತ್ತಿದೆ. ಹೀಗೆ ಮಾರಾಟಕ್ಕೆ ಸಿದ್ಧಗೊಂಡ ಆರತಿಯನ್ನು ಮಾರುಕಟ್ಟೆಗೆ ತರಲಾಗುತ್ತದೆ. ನ. 6ರಂದು ಗೌರಿಯೂ ವಿಸರ್ಜನೆಗೊಳ್ಳುವುದರಿಂದ ಬುಧವಾರ ಗ್ರಾಹಕರು ಆರತಿ ಖರೀದಿಯ ಭರಾಟೆ ಜೋರಾಗಿತ್ತು.

ಮಂಗಳೂರು ಕುಟುಂಬದವರು ಮುಸ್ಲಿಂರಾದರೂ ಹಿಂದೂಗಳ ಹಬ್ಬ ಹಾಗೂ ಜಾತ್ರೆಗಳಲ್ಲಿ ಮಿಠಾಯಿ, ಖಾರಾ, ಡಾಣಿ, ದಿನಸಿ ಸಿಹಿ ಖಾದ್ಯಗಳನ್ನು ತಯಾರಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದರಿಂದ ತಾಲೂಕಿಗೆ ಫೇಮಸ್ ಆಗಿದ್ದಾರೆ.

ವ್ಯಾಪಾರಕ್ಕಿಂತ ಎಲ್ಲರೂ ನಮ್ಮವರೆಂದು ಭಾವಿಸಿರುವ ಈ ಕುಟುಂಬದವರು ತಯಾರಿಸಿದ ಖಾದ್ಯಗಳಿಗೆ ಇರುವ ಬೇಡಿಕೆ ಕಡಿಮೆಯಾಗಿಲ್ಲ. ಹೀಗಾಗಿ ಮಂಗಳೂರು ಕುಟುಂಬ ಎಂದರೆ ಸಾಕು ಕನಕಗಿರಿ ಸೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಜನಮನ್ನಣೆ ಪಡೆದುಕೊಂಡಿದೆ.

ಸಕ್ಕರೆ ಆರತಿ, ಮಿಠಾಯಿ ವ್ಯಾಪಾರದ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಂಗಳೂರು ಕುಟುಂಬದ ಕಾರ್ಯ ಮೆಚ್ಚುವಂಥದ್ದು. ಆಧುನಿಕತೆಯಲ್ಲಿ ಪೂರ್ವಜರ ಕಾಯಕ ಮುಂದುವರೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಮಾದರಿ ಎಂದು ಗ್ರಾಹಕ ರಾಜಶೇಖರ ತಿಳಿಸಿದ್ದಾರೆ.

ಲಾಭಾಂಶ ನೋಡಿ ವ್ಯಾಪಾರ ಮಾಡಬಾರದು ಎಂದು ನಮ್ಮ ಹಿರಿಯರು ಹೇಳಿದಂತೆ ಇಂದಿಗೂ ನಡೆದುಕೊಳ್ಳುತ್ತಿದ್ದೇವೆ. ಗೌರಿ ಹಬ್ಬಕ್ಕೆ 20 ಕ್ವಿಂಟಲ್ ಸಕ್ಕರೆ ಆರತಿ ತಯಾರಿಸಲಾಗಿದೆ. ಮಿಠಾಯಿ ವ್ಯಾಪಾರ ಮಾಡುತ್ತೇವೆ. ನಮಗೆ ಯಾವುದೇ ಜಾತಿ ಇಲ್ಲ. ಎಲ್ಲರೂ ನಮ್ಮವರೆ. ಪ್ರೀತಿ, ವಿಶ್ವಾಸ ಶಾಶ್ವತ ಎಂದು ಮಂಗಳೂರು ಸಕ್ಕರೆ ಆರತಿ ತಯಾರಕ ಮಮ್ಮದರಫಿ ತಿಳಿಸಿದ್ದಾರೆ.