ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ

| Published : Nov 06 2025, 02:15 AM IST

ಸಾರಾಂಶ

ಸೂಕ್ತ ಚಿಕಿತ್ಸೆ ನೀಡಿದರೂ ರೋಗಿ ಬದುಕುಳಿಯದಿದ್ದರೆ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಸಂಸ್ಕೃತಿ ಸರಿಯಲ್ಲ. ಆಧುನಿಕ ವೈದ್ಯಕೀಯ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ವೈದ್ಯರ ಆಯಸ್ಸು 10ರಿಂದ 12 ವರ್ಷ ಕಡಿಮೆಯಾಗುತ್ತಿದೆ.

ಹುಬ್ಬಳ್ಳಿ:

ರೋಗಿಗಳಿಗೆ ಸೂಕ್ತ ಸಮಯದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಜವಾಬ್ದಾರಿ ವೈದ್ಯರ ಮೇಲಿದ್ದು, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವಲ್ಲಿ ವೈದ್ಯರು ಕಾಳಜಿ ವಹಿಸಬೇಕಿದೆ ಎಂದು ವೈದ್ಯ, ಸಂಸದ ಡಾ. ಸಿ.ಎನ್. ಮಂಜುನಾಥ ಸಲಹೆ ನೀಡಿದರು.

ಇಲ್ಲಿನ ವಿದ್ಯಾನಗರದ ಅಶೋಕಾ ಆಸ್ಪತ್ರೆಯಲ್ಲಿ ಬುಧವಾರ ಕ್ಯಾಥ್‌ಲ್ಯಾಬ್‌, ಡಯಾಲಿಸಿಸ್‌ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಸೂಕ್ತ ಚಿಕಿತ್ಸೆ ನೀಡಿದರೂ ರೋಗಿ ಬದುಕುಳಿಯದಿದ್ದರೆ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಸಂಸ್ಕೃತಿ ಸರಿಯಲ್ಲ. ಆಧುನಿಕ ವೈದ್ಯಕೀಯ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ವೈದ್ಯರ ಆಯಸ್ಸು 10ರಿಂದ 12 ವರ್ಷ ಕಡಿಮೆಯಾಗುತ್ತಿದೆ. ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಜನರಿಗೆ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದ ಸ್ಥಿತಿ ಇದೆ. ದೇಶದಲ್ಲಿ 4,300 ಕ್ಯಾಥ್‌ಲ್ಯಾಬ್‌ಗಳಿವೆ. ಜನಸಂಖ್ಯೆ, ಕಾಯಿಲೆ ಪ್ರಮಾಣ ನೋಡಿದರೆ 6,500 ಕ್ಯಾಥ್‌ಲ್ಯಾಬ್‌ಗಳ ಅಗತ್ಯ ಇದೆ ಎಂದರು.

ಜೀವನಶೈಲಿಯಿಂದಾಗಿ ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಕ್ಯಾನ್ಸರ್‌ನಂತಹ ಕಾಯಿಲೆಗಳು ಬರುತ್ತವೆ. ಈ ಗುಂಪಿಗೆ ಸ್ಕ್ರೀನ್ ಅಡಿಕ್ಷನ್‌ (ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ) ಮತ್ತು ಒಂಟಿತನ ಸಹ ಸೇರಿದೆ ಎಂದು ಹೇಳಿದರು.

ರೋಗಿಗಳಿಗೆ ವರದಾನ:

ಅಶೋಕಾ ಆಸ್ಪತ್ರೆಯಲ್ಲಿ ಕ್ಯಾಥ್‌ಲ್ಯಾಬ್ ಯಂತ್ರ ಅಳವಡಿಸಿರುವುದು ಹೃದ್ರೋಗಿಗಳಿಗೆ ವರದಾನವಾಗಿದೆ. ಶೇ. 50ರಷ್ಟು ಹೃದಯ ಸಂಬಂಧಿ ಕಾಯಿಲೆಗಳನ್ನು ಕ್ಯಾಥ್‌ಲ್ಯಾಬ್‌ ಮೂಲಕ ಪರಿಹರಿಸಬಹುದು. ಹೃದಾಯಾಘವಾದಾಗ 30 ನಿಮಿಷ ಚಿಕಿತ್ಸೆ ನೀಡುವುದು ವಿಳಂಬವಾದರೆ ಸಾವಿನ ಪ್ರಮಾಣ ಶೇ. 7ರಷ್ಟು ಹೆಚ್ಚಾಗುತ್ತದೆ ಎಂದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಹದಲ್ಲಿನ ನೋವು ನಿವಾರಿಸುವ ಶಕ್ತಿ ಇರುವುದು ವೈದ್ಯರಿಗೆ ಮಾತ್ರ. ಹೀಗಾಗಿ ಸಮಾಜದಲ್ಲಿ ವೈದ್ಯರಿಗೆ ಗೌರವದ ಸ್ಥಾನ ಇದೆ. ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಇನ್ನಷ್ಟು ವೇಗವಾಗಿ ನಡೆಯಬೇಕು ಎಂದು ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ಆಸ್ಪತ್ರೆಯ ಮುಖ್ಯಸ್ಥ ಡಾ. ಅಶೋಕ ಬಂಗಾರಶೆಟ್ಟರ, ಡಾ. ವರ್ಷಾ ಬಂಗಾರಶೆಟ್ಟರ, ಡಾ. ಸೃಷ್ಟಿ ವಾಳದ, ಡಾ. ನವೀನ ಪಟ್ಟಣಶೆಟ್ಟಿ, ಹಿರಿಯರಾದ ಕೆ.ವಿ. ಶಂಕರಗೌಡ್ರ, ಶರಣಪ್ಪ ಕೊಟಗಿ ಸೇರಿದಂತೆ ಹಲವರಿದ್ದರು.