ಸಾರಾಂಶ
ಹಾವೇರಿ: ಜಾನುವಾರುಗಳು ರೈತನ ಬೆನ್ನೆಲುಬು, ಅವುಗಳ ರಕ್ಷಣೆಗೆ ಕಾಲಕಾಲಕ್ಕೆ ಲಸಿಕೆ ಹಾಕುವ ಮೂಲಕ ಮತ್ತು ರೋಗ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಏರ್ಪಡಿಸಿದ್ದ 8ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ಹಾವೇರಿ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಲು ಬಾಯಿ ಬೇನೆ ರೋಗವು ಜಾನುವಾರುಗಳಿಗೆ ಮಾರಕವಾಗಿದ್ದು, ನಮ್ಮ ದೇಶದಿಂದ ರೋಗ ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಾರ್ಷಿಕವಾಗಿ 2 ಬಾರಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ರೋಗದ ನಿರ್ಮೂಲನೆಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯೊಂದಿಗೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಸಂಬಂಧಪಟ್ಟ ಇತರ ಇಲಾಖೆಗಳು ಪಶುಪಾಲನಾ ಇಲಾಖೆಯೊಂದಿಗೆ ಕೈಜೋಡಿಸಿ ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಸೂಚನೆ ನೀಡಿದರು.ಈ ಕಾಲು ಬಾಯಿ ಬೇನೆ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆಗೆ ಅರ್ಹವಿರುವ ಜಾನುವಾರುಗಳಿಗೆ ಶೇ. 100ರಷ್ಟು ಲಸಿಕೆ ಹಾಕುವ ಕಾರ್ಯವನ್ನು ನಿಗದಿಪಡಿಸಿದ 30 ದಿನಗಳ ಅವಧಿಯಲ್ಲಿಯೇ ಕೈಗೊಂಡು ಪೂರ್ಣಗೊಳಿಸಲು ಎಲ್ಲ ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಸೂಚಿಸಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಶಿವಯೋಗಿ ಯಲಿ ಮಾತನಾಡಿ, ನ. 3ರಂದು ಆರಂಭವಾಗಿದ್ದು, ಡಿ. 2ರ ವರೆಗೆ ಜಿಲ್ಲೆಯಲ್ಲಿ ಕಾಲು ಬಾಯಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅಂದಾಜು 2.99 ಲಕ್ಷ (ದನ ಮತ್ತು ಎಮ್ಮೆ) ಜಾನುವಾರುಗಳಿರುತ್ತವೆ ಎಂದರು.ಪಶುಪಾಲನಾ ಇಲಾಖೆಯ ಹಾಗೂ ಇಲಾಖೇತರ ಲಸಿಕೆದಾರರನ್ನು ಒಳಗೊಂಡು ಒಟ್ಟು 149 ತಂಡಗಳನ್ನು ರಚಿಸಲಾಗಿರುತ್ತದೆ. ಪ್ರತಿ ತಾಲೂಕಿನಲ್ಲಿ ಲಸಿಕಾ ವೇಳಾ ಪಟ್ಟಿ ಮತ್ತು ಜಾನುವಾರು ಹೊಂದಿರುವ ರೈತರ ಮಾಹಿತಿಯನ್ನು ಗ್ರಾಮವಾರು ತಯಾರಿಸಿಟ್ಟುಕೊಳ್ಳಲಾಗಿದೆ. ಪ್ರತಿ ಗ್ರಾಮ ಅಥವಾ ನಗರ ಪ್ರದೇಶವನ್ನು 100 ರಿಂದ 120 ಜಾನುವಾರುಗಳಿಗೆ ಒಂದು ಬ್ಲಾಕ್ ಎಂದು ವರ್ಗೀಕರಿಸಿ ಒಟ್ಟು 2,935 ಬ್ಲಾಕ್‌ಗಳಲ್ಲಿ ಲಸಿಕಾದಾರರು ಲಸಿಕೆ ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.8ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಹಾವೇರಿ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಎಸ್.ಎಂ., ಪಾಲಿಕ್ಲಿನಿಕ್‌ನ ಉಪನಿರ್ದೇಶಕ ಡಾ. ಜಯಕುಮಾರ ಕಂಕನವಾಡಿ, ಲಸಿಕಾ ಕಾರ್ಯಕ್ರಮದ ಜಿಲ್ಲಾ ಉಸ್ತುವಾರಿ ಅಧಿಕಾರಿ ಡಾ. ಕಿರಣ ಕೊಪ್ಪದ ಇದ್ದರು.3,10,950 ಡೋಸ್ ಲಸಿಕೆ ಸರಬರಾಜು: ಜಿಲ್ಲೆಗೆ ಈಗಾಗಲೇ 3,10,950 ಡೋಸ್ ಲಸಿಕೆ ಸರಬರಾಜಾಗಿದ್ದು, ಈ ಲಸಿಕೆಯನ್ನು ತಾಲೂಕಿನಲ್ಲಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ವಿಂಗಡಿಸಿ ಮರು ಹಂಚಿಕೆ ಮಾಡಲಾಗಿದೆ. ಸೀರೋಮಾನಿಟರಿಂಗ್ ಮಾಡಲು ಹಾನಗಲ್ಲ ತಾಲೂಕಿನ ಕೋಡಿಯಲ್ಲಾಪುರ, ಶಿಗ್ಗಾಂವಿ ತಾಲೂಕಿನ ದುಂಡಶಿ ಮತ್ತು ಬ್ಯಾಡಗಿ ತಾಲೂಕಿನ ಬಡಮಲ್ಲಿ ಗ್ರಾಮಗಳಿಂದ ತಲಾ 16 ಮಾದರಿಗಳನ್ನು ತಪಾಸಣೆಗೆ ಸಲ್ಲಿಸಲಾಗುತ್ತದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಶಿವಯೋಗಿ ಯಲಿ ಹೇಳಿದರು.
;Resize=(128,128))
;Resize=(128,128))