ಕನ್ನಡಪ್ರಭ ವಾರ್ತೆ ಉಡುಪಿ
ಹಿಂದೆ ಎಷ್ಟು ಎಕ್ರೆ ಕೃಷಿ ಭೂಮಿ ಇದೆ ಎಂಬುದರ ಮೇಲೆ ಶ್ರೀಮಂತಿಕೆ ಅಳೆಯಲಾಗುತ್ತಿತ್ತು, ಇಂದು ಹಣದಿಂದ ಶ್ರೀಮಂತಿಕೆ ಲೆಕ್ಕಹಾಕಲಾಗುತ್ತಿದೆ, ಇದರಿಂದ ನಮ್ಮ ಸಾಂಪ್ರದಾಯಿಕ ಸಾವಯವ ಕೃಷಿ ಸಂಸ್ಕೃತಿಯೇ ನಾಶವಾಗುತ್ತಿದೆ ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.ಅವರು ಬುಧವಾರ ಶ್ರೀಮಠದಲ್ಲಿ, ಶುದ್ಧ ನೈವೇದ್ಯ ಸಮರ್ಪಣಂ ಯೋಜನೆಯಡಿ ಸಾವಯವ ಅಕ್ಕಿ ಬೆಳೆಸುವ ರೈತರಿಗೆ, ದೇಶಿ ತಳಿಯ ಭತ್ತದ ಬೀಜಗಳನ್ನು ನೀಡುವ ಬೊಗಸೆ ಬೀಜ ಪ್ರಧಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸಾಂಪ್ರದಾಯಿಕ ಕೃಷಿಗೆ ಉತ್ತೇಜನ ನೀಡಲು ತಮ್ಮ ಮುಂದಿನ ಪರ್ಯಾಯದ ಸಂದರ್ಭ ಕೃಷ್ಣಮಠದಲ್ಲಿ ಸಂಪೂರ್ಣ ಸಾವಯವ ಅಕ್ಕಿಯನ್ನೇ ಬಳಸುತ್ತೇವೆ, ರೈತರ ಗದ್ದೆಯಿಂದ ದೇಶಿ ಅಕ್ಕಿ ಕೃಷ್ಣನ ಗರ್ಭಗುಡಿಗೆ ಬರುವಂತೆ, ಶುದ್ಧ ನೈವೇದ್ಯ ಸಮರ್ಪಣಂ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಭತ್ತದ ತಳಿಗಳಿದ್ದವು, ಅವುಗಳಲ್ಲಿ ಇಂದು ಕೇವಲ 72 ಸಾವಿರ ತಳಿಗಳು ಮಾತ್ರ ಉಳಿದಿವೆಯಂತೆ, ಭೂಮಿ ತಾಯಿ ಕೇಳುತ್ತಿದ್ದಾಳೆ ನನ್ನಲ್ಲಿ ಬೆಳೆದ ತಳಿ ಎಲ್ಲಿ ಎಂದು, ಅವಳಿಗೆ ಉತ್ತರ ನೀಡಬೇಕು, ಆದ್ದರಿಂದ ಈ ಅಳಿದುಳಿದ ತಳಿಗಳನ್ನಾದರೂ ಉಳಿಸಿಕೊಳ್ಳೊಣ ಎಂದವರು ಕರೆ ನೀಡಿದರು.ರೈತರು ತಾವು ಬೆಳೆದ ಸಾವಯವ ದೇಶಿ ತಳಿಗೆ ಮಾರುಕಟ್ಟೆ ಎಲ್ಲಿದೆ ಎನ್ನುವ ಭಯ ಬೇಡ, ಎಷ್ಟು ಸಾವಯವ ಅಕ್ಕಿಯನ್ನಾದರೂ, ಶುದ್ದ ಮನಸ್ಸಿನಿಂದ ನಿರ್ವಂಚನೆಯಿಂದ ಬೆಳೆಸಿ, ಉತ್ತಮ ಬೆಲೆಯನ್ನು ಕೊಟ್ಟು ಕೊಳ್ಳುವುದಕ್ಕೆ ಸೋದೆ ಮಠ ಇದೆ ಎಂದವರು ಅಭಯ ನೀಡಿದರು. ತಮ್ಮ ಮಠ ಮಾತ್ರವಲ್ಲ ಬೇರೆ ಮಠ ದೇವಾಲಯಗಳಲ್ಲಿಯೂ ದೇಶಿ ಅಕ್ಕಿಯನ್ನೇ ಬಳಸುವಂತೆ ತಾವು ಪ್ರಚಾರ ಮಾಡುತ್ತೇವೆ ಎಂದೂ ಭರವಸೆ ನೀಡಿದರು, ಈ ಸಂದರ್ಭ ಶ್ರೀಗಳು ಸುಮಾರು 10 ಜಿಲ್ಲೆಗಳಿಂದ ಬಂದ 20ಕ್ಕೂ ಅಧಿಕ ತಂಡಗಳಿಗೆ ಹತ್ತಾರು ತಳಿಯ ಭತ್ತದ ಬೀಜಗಳನ್ನು ಹಸ್ತಾಂತರಿಸಿದರು.ವೇದಿಕೆಯಲ್ಲಿ ಹಾದಿಗಲ್ಲು ಅಭಯನರಸಿಂಹ ದೇವಸ್ಥಾನದ ಪ್ರಮುಖರಾದ ಲಕ್ಷ್ಮೀನಾರಾಯಣ ರಾವ್, ಕೃಷಿ ಪ್ರಯೋಗ ಪರಿವಾರದ ನಿರ್ವಾಹಕ ವಿಶ್ವಸ್ಥ ದಿನೇಶ್ ಸರು, ಪುರುಷೋತ್ತಮ ಪ್ರತಿಷ್ಠಾನದ ಆನಂದ, ಸೋದೆ ಮಠದ ದಿವಾನರಾದ ಶ್ರೀನಿವಾಸ ತಂತ್ರಿ ಉಪಸ್ಥಿತರಿದ್ದರು.ಕೃಷಿ ಪ್ರಯೋಗ ಪರಿವಾರದ ಅರುಣ್ ಕುಮಾರ್ ಸ್ವಾಗತಿಸಿದರು, ಶ್ರೀವತ್ಸ ಅವರು ವಿಷಯ ಮಂಡಿಸಿದರು, ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರೂಪಿಸಿದರು, ಶ್ರೀನಿವಾಸ ಭಟ್ ಇರ್ವತ್ತೂರು ವಂದಿಸಿದರು. ದೇಶಿ ತಳಿ ಜಾಗೃತಿಗೆ ಪಾದಯಾತ್ರೆ
ಗ್ರಾಮೀಣ ಭಾಗದ ರೈತರಲ್ಲಿ ಮತ್ತೆ ದೇಶಿ ತಳಿ, ಸಾವಯವ ಕೃಷಿ ಪದ್ದತಿಯ ಬಗ್ಗೆ ಜಾಗೃತಿ ಮೂಡಿಸಲು ತಾವು ಕರಾವಳಿ ಮತ್ತು ಮಲೆನಾಡು ಹಳ್ಳಿಗಳಲ್ಲಿ ಪಾದಯಾತ್ರೆ ಮಾಡುತ್ತೇವೆ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಈ ಸಂದರ್ಭ ಘೋಷಿಸಿದರು.