ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬಕ್ರೀದ್ ಹಬ್ಬವನ್ನು ಸಂಪ್ರದಾಯದಂತೆ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಮುಂಜಾನೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಡವರಿಗೆ ದಾನ ಮಾಡುವುದರ ಮೂಲಕ ಹಬ್ಬ ಆಚರಿಸಲಾಯಿತು.ಮಡಿಕೇರಿಯ ಮಹದೇವಪೇಟೆ ಮಸೀದಿ ಸೇರಿದಂತೆ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಮುಂಜಾನೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಹಬ್ಬದ ವಿಶೇಷವಾಗಿ ಬಡವರು ಮತ್ತು ನಿರ್ಗತಿಕರಿಗೆ ಅನ್ನದಾನ ಹಾಗೂ ವಸ್ತ್ರದಾನ ಮಾಡಿ ಹಬ್ಬಕ್ಕೆ ಮೆರುಗು ನೀಡಿದರು.
ಕುಟುಂಬಸ್ಥರು, ಸ್ನೇಹಿತರು ಹಾಗೂ ನೆರೆಹೊರೆಯವರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ವಿಶೇಷ ಭಕ್ಷ್ಯಗಳು ಮತ್ತು ಮಾಂಸಾಹಾರಿ ಅಡುಗೆಗಳನ್ನು ಸವಿಯುವ ಮೂಲಕ ಸಂಭ್ರಮಿಸಿದರು. ಹಬ್ಬದ ಅಂಗವಾಗಿ ಸ್ಥಳೀಯ ಮಸೀದಿಗಳು ಮತ್ತು ಮುಸ್ಲಿಂ ಸಂಘಟನೆಗಳು ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.
ಮುಸ್ಲಿಮರ ಪವಿತ್ರ ಹಬ್ಬವಾದ ತ್ಯಾಗ ಮತ್ತು ಬಲಿದಾನದ ಸಂಕೇತವಾದ "ಬಕ್ರೀದ್ " ಹಬ್ಬವನ್ನು ಕಂಡಕರೆಯಲ್ಲಿ ಸಂಭ್ರಮದಿಂದ ಆಚರಿಸಿದರು.ಬೆಳಗ್ಗೆ ಎಂಟು ಗಂಟೆಗೆ ಈದ್ ನಮಾಜ್ ಗೆ ಮಹಲ್ ಖತೀಬರಾದ ಸುಫಿಯಾನ್ ಸಹದಿ ಅವರು ನೇತೃತ್ವ ವಹಿಸಿದರು.ಈ ಸಂದರ್ಭ ಮಾತನಾಡಿದ ಅವರು, ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನವನ್ನು ಸೂಚಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಮನುಷ್ಯರಲ್ಲಿ ದ್ವೇಷ, ಅಸೂಯೆ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಮಾತ್ರ ಸುಂದರವಾರದ ಶಾಂತಿಯುತ ಸಮಾಜವನ್ನು ಕಟ್ಟಲು ಸಾಧ್ಯ. ಆದ್ದರಿಂದ ಎಲ್ಲರೂ, ದ್ವೇಷ, ಅಸೂಯೆ ಮರೆತು ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಪರಸ್ಪರ ಒಗ್ಗೂಡಿ ಜೀವನ ನಡೆಸಲು ಸುಫಿಯಾನ್ ಸಹದಿ ಕರೆ ನೀಡಿದರು.ಈದ್ ನಮಾಜ್ ಬಳಿಕ ಪರಸ್ಪರ ಬಕ್ರೀದ್ ಶುಭಾಯಶಯ ಕೋರಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.
ಸೈಫುದ್ದೀನ್ ಸಖಾಫಿ, ಮಹಲ್ ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ಹಾಜಿ, ಪ್ರಧಾನ ಕಾರ್ಯದರ್ಶಿ ಪಿ.ಎಂ ಅಲಿ, ಉಪಾಧ್ಯಕ್ಷ ಪಿ.ಎಚ್ ಗಫೂರ್, ಸಹ ಕಾರ್ಯದರ್ಶಿ ಮನ್ಸೂರ್, ಖಜಾಂಜಿ ಹಾರಿಸ್, ಸ್ವಲಾತ್ ಕಮಿಟಿ ಅಧ್ಯಕ್ಷ ಪಿ.ಎ ಹುಸೇನ್ ಮತ್ತಿತರರು ಇದ್ದರು.