ಕನ್ನಡಪ್ರಭ ವಾರ್ತೆ, ಮಣಿಪಾಲ

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ನ್ಯೂರೋಡೆವಲಪ್ ಮೆಂಟಲ್ ಚಿಕಿತ್ಸಾಲಯವು ಮೆದುಳು ಅಭಿವೃದ್ಧಿ ಸಮಸ್ಯೆ ಹೊಂದಿರುವ ಮಕ್ಕಳಿಗಾಗಿ ‘ಪ್ರಗತಿ’ ಎಂಬ ಕುಟುಂಬ ಕಾರ್ಯಕ್ರಮವನ್ನು ಮೇ 26ರಿಂದ 28ರವರೆಗೆ ಆಯೋಜಿಸಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ. ಪ್ರಸಾದ್ ಎಸ್.ಎಸ್., ಮೆದುಳು ಬೆಳವಣಿಗೆಯ ಅಸ್ವಸ್ಥತೆ ಹೊಂದಿರುವ ಮಕ್ಕಳ ಆರಂಭಿಕ ಗುರುತಿಸುವಿಕೆ ಮತ್ತು ಬಹು ಆಯಾಮದ ಚಿಕಿತ್ಸಾ ಕ್ರಮದ ಮಹತ್ವವನ್ನು ಹೇಳಿದರು. ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಡೀನ್ ಡಾ. ಅರುಣ್ ಜಿ. ಮಯ್ಯ, ಬೆಳವಣಿಗೆಯ ಸವಾಲುಗಳನ್ನು ಹೊಂದಿರುವ ಮಕ್ಕಳ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಆರೋಗ್ಯ ವೃತ್ತಿಪರರು ಮತ್ತು ಆರೈಕೆದಾರರಿಂದ ಸಂಘಟಿತ ಬೆಂಬಲವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, “ಪ್ರಗತಿ”ಯಂತಹ ಜಾಗೃತಿ ಕಾರ್ಯಕ್ರಮಗಳು ಪೋಷಕರು ಮೆದುಳು ಬೆಳವಣಿಗೆ ಸಮಸ್ಯೆ ಹೊಂದಿರುವ ಮಕ್ಕಳ ಅಗತ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಸಕಾಲಿಕ ಚಿಕಿತ್ಸೆಯ ಮೂಲಕ ಸಮಾಜದ ಸ್ವೀಕಾರವನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಅವರು, ನ್ಯೂರೋಡೆವಲಪ್ ಮೆಂಟಲ್ ಕ್ಲಿನಿಕ್ ಒದಗಿಸುವ ಸಮರ್ಪಿತ ಸೇವೆಗಳನ್ನು ಶ್ಲಾಘಿಸಿದರು ಮತ್ತು ಸಮಗ್ರ ಮಕ್ಕಳ ಬೆಳವಣಿಗೆಗೆ ಮನೋವೈದ್ಯಶಾಸ್ತ್ರ, ಮಕ್ಕಳ ಚಿಕಿತ್ಸೆ, ಅಲೈಡ್ ಹೆಲ್ತ್ ಪ್ರೊಫೆಷನಲ್ಸ್ ಮತ್ತು ಕುಟುಂಬದ ಭಾಗವಹಿಸುವಿಕೆಯನ್ನು ಒಳಗೊಂಡ ಸಮಗ್ರ ಆರೋಗ್ಯ ರಕ್ಷಣಾ ವಿಧಾನಗಳ ಮಹತ್ವವನ್ನು ಒತ್ತಿ ಹೇಳಿದರು.ಕಾರ್ಯಕ್ರಮದ ಭಾಗವಾಗಿ, ಮೆದುಳು ಬೆಳವಣಿಗೆಯ ಸಮಸ್ಯೆ ಹೊಂದಿರುವ ಪೋಷಕರು ಮತ್ತು ಮಕ್ಕಳಿಗಾಗಿ ವಿವಿಧ ವಿನೋದಾವಳಿ ಚಟುವಟಿಕೆಗಳನ್ನು, ಮೆದುಳು ಬೆಳವಣಿಗೆಯ ಸಮಸ್ಯೆ ಕುರಿತು ಪೋಷಕರಿಗೆ ಜಾಗೃತಿ ಶಿಕ್ಷಣ ಕಾರ್ಯಕ್ರಮ ನಡೆಯಿತು. ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಸವಿತಾ ಸೋಮನ್ ಉಪಸ್ಥಿತರಿದ್ದರು. ನ್ಯೂರೋಡೆವಲಪ್ ಮೆಂಟಲ್ ಚಿಕಿತ್ಸಾಲಯದ ಉಸ್ತುವಾರಿ ಡಾ. ಅಮೃತವರ್ಷಿಣಿ ಆರ್. ಸ್ವಾಗತಿಸಿದರು. ಡಾ. ಮಹೇಶ್ ಮೋಹನ್ ವಂದಿಸಿದರು.