ಕನ್ನಡಪ್ರಭ ವಾರ್ತೆ ವಿಜಯಪುರ

ನಕಲಿ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಿ, ನಿಜವಾದ ಮತದಾರರನ್ನು ಪಟ್ಟಿಯಲ್ಲಿ ಉಳಿಸುವ ಮಹತ್ತರ ಉದ್ದೇಶದಿಂದ ಚುನಾವಣೆ ಆಯೋಗ ಎಸ್‌ಐಆರ್‌ ಪ್ರಕ್ರಿಯೆ ನಡೆಸುತ್ತಿದೆ. ಇದರಿಂದ ಹತಾಶರಾಗಿ ಕೆಲ ಗೂಂಡಾಗಳು ನಗರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ನಗರ ಮತಕ್ಷೇತ್ರದ ವಾರ್ಡ್ ನಂ.5ರ ಅದರ್ಶನಗರದ ನಮ್ಮ ಸರ್ಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.16ರಲ್ಲಿ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಸಹಭಾಗಿತ್ವ ಸಮಿತಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ತೆರೆಯಲಾದ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಮತದಾರರ ಸೌಲಭ್ಯ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ, ಎಸ್‌ಐಆರ್‌ ಪ್ರಕ್ರಿಯೆ ಕುರಿತಂತೆ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.

ವಿಜಯಪುರ ನಗರದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆ ವೇಳೆ ಅನಗತ್ಯ ಗೊಂದಲ ಸೃಷ್ಟಿ, ಮಸೀದಿಗಳಲ್ಲಿ ಕಾನೂನು ಬಾಹಿರವಾಗಿ ಬಿಎಲ್‌ಒ ಗಳನ್ನು ಒತ್ತಾಯಪೂರ್ವಕವಾಗಿ ಹೆದರಿಸಿ ಕರೆಸಿಕೊಂಡು ಸಭೆ ನಡೆಸುವುದು, ವಿನಾಕಾರಣ ಬಿಎಲ್‌ಒಗಳಿಗೆ ತೊಂದರೆ ನೀಡುತ್ತ ಎಸ್‌ಐಆರ್‌ ಪ್ರಕ್ರಿಯೆಯ ಅಮೂಲ್ಯ ಸಮಯ ವ್ಯರ್ಥ ಮಾಡುತ್ತಿದ್ದು, ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈಗಾಗಲೇ ಎಸ್‌ಐಆರ್‌ ಪೂರ್ಣಗೊಂಡಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದ ಖೊಟ್ಟಿ ಮತಗಳು ಡಿಲೀಟ್ ಆಗಿ, ಚುನಾವಣೆಗಳಲ್ಲಿ ಭಾರಿ ಬದಲಾವಣೆ ಆಗಿದೆ. ಅದೇ ರೀತಿ ವಿಜಯಪುರ ನಗರದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಖೊಟ್ಟಿ ಮತಗಳಿವೆ. ಮೃತಪಟ್ಟಿರುವ ಸಾವಿರಾರು ಜನರ ಹೆಸರಿನಲ್ಲಿಯೂ ಮತದಾನ ಮಾಡುತ್ತಿದ್ದಾರೆ. ಇಲ್ಲಿ ಕೂಡ ಎಸ್‌ಐಆರ್‌ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಿಂದ ಸಾವಿರಾರು ಸಂಖ್ಯೆ ಖೊಟ್ಟಿ ಮತಗಳು ಡಿಲೀಟ್ ಆಗಿ, ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ಮಾತ್ರ ಉಳಿಯಲಿದ್ದಾರೆ. ಹೀಗಾಗಿ ಬಿಎಲ್‌ಒಗಳು ಯಾರ ಒತ್ತಡಕ್ಕೂ ಮಣಿಯದೆ ಧೈರ್ಯವಾಗಿ ಮತ್ತು ಪಾರದರ್ಶಕವಾಗಿ ಚುನಾವಣೆ ಆಯೋಗದ ನಿಯಮದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಅರ್ಹ ಮತದಾರರು ಮತದಾನದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.


ದೂಳಾಪುರವಾಗಿದ್ದ ವಿಜಯಪುರ ನಗರದಲ್ಲಿ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರಿಂದ ಮಾದರಿ ನಗರವಾಗಿ ಅಭಿವೃದ್ಧಿ ಆಗಿದೆ. ಅಭಿವೃದ್ಧಿ ಸಹಿಸದ ಕೆಲವರು ಎಲ್ಲೋ ಒಂದು ಮೂಲೆಯಲ್ಲಿ ಸಣ್ಣ ತಗ್ಗು ತೋರಿಸಿ, ಏನೂ ಆಗಿಲ್ಲವೆಂಬಂತೆ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ನಮ್ಮ ಅಭಿವೃದ್ಧಿ ಕಾರ್ಯಕ್ಕೆ ಶುದ್ಧ ಗಾಳಿ ಬೀಸುವ ನಗರಗಳ ಪಟ್ಟಿಯಲ್ಲಿ ವಿಜಯಪುರ ನಗರ ದೇಶದಲ್ಲಿ 4ನೇ ಸ್ಥಾನ ಇರುವುದೇ ಸಾಕ್ಷಿ ಎಂದು ಹೇಳಿದರು.

ಸಂದರ್ಭದಲ್ಲಿ ಮಹಾಪೌರ ಎಂ.ಎಸ್.ಕರಡಿ, ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ಜವಾಹರ ಗೋಸಾವಿ, ಮುಖಂಡರಾದ ರಾಜಕುಮಾರ ಜಾಧವ, ಚಂದ್ರಕಾಂತ ಏವೂರ ಸೇರಿದಂತೆ ಅಧಿಕಾರಿಗಳು, ಬಿಎಲ್‌ಒ ಗಳು ಉಪಸ್ಥಿತರಿದ್ದರು.