ಕನ್ನಡಪ್ರಭ ವಾರ್ತೆ ಮೂಡಲಗಿ
ಹಿಂದುಳಿದ ಗಂಗಾಮತಸ್ಥ ಸಮಾಜದವರು ಒಗ್ಗಟ್ಟಿನ ಮಂತ್ರ ಜಪಿಸಿದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕೇವಲ ನಾವು ಹಿಂದುಳಿದವರು ಎಂದ ಮಾತ್ರಕ್ಕೆ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ಏಕತೆಯಿಂದ ಹೋರಾಡಿದರೆ ಮಾತ್ರ ಸೌಲಭ್ಯಗಳು ಸಿಗುತ್ತವೆ. ಈ ದಿಸೆಯಲ್ಲಿ ಸಮಾಜ ಬಾಂಧವರು ಒಗ್ಗಟ್ಟಿನ ಹೋರಾಟಕ್ಕೆ ಮುನ್ನುಡಿ ಬರೆಯಬೇಕಿದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ತಾಲೂಕಿನ ಹುಣಶ್ಯಾಳ ಪಿವೈ ಗ್ರಾಮದಲ್ಲಿ ದಿ.ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕಪರಟ್ಟಿ- ಕಳ್ಳಿಗುದ್ದಿ ಆಶ್ರಮದ ಜಂಟಿ ಸಹಯೋಗದಲ್ಲಿ ಜ್ಯೇಷ್ಠ ಮಾಸದ ಪ್ರಯುಕ್ತ ಒಂದು ತಿಂಗಳವರೆಗೆ ಜರುಗಿದ ಅಂಬಿಗರ ಚೌಡಯ್ಯನವರ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಗೋಕಾಕ ನಗರದಲ್ಲಿ ಮೂಡಲಗಿ- ಗೋಕಾಕ ತಾಲೂಕಿನ ಸಮಸ್ತ ಗಂಗಾಮತಸ್ಥರ ಸಮಾಜದ ಆಶಯದಂತೆ ಸಮುದಾಯ ಭವನ ನಿರ್ಮಾಣಕ್ಕೆ ಮುಂದೆ ಬಂದಿದ್ದೇವೆ. ಜಿಲ್ಲಾಧಿಕಾರಿಗಳು ಇದಕ್ಕಾಗಿ ನಿವೇಶನವನ್ನು ಗುರುತಿಸಿದ್ದು, 30 ವರ್ಷದ ಗುತ್ತಿಗೆಗೆ ಅನುಮೋದನೆ ನೀಡಿದ್ದಾರೆ. ಸರ್ಕಾರದ ₹ 10 ಲಕ್ಷ ಅನುದಾನದ ಜೊತೆಗೆ ನಾನೂ ಕೂಡ ವೈಯಕ್ತಿಕವಾಗಿ ₹ 10 ಲಕ್ಷ ಹಣಕಾಸಿನ ನೆರವು ನೀಡುತ್ತೇನೆ. ಈ ಭವನ ನಿರ್ಮಾಣದಿಂದ ಸಮಾಜದ ಅನೇಕ ಕಲ್ಯಾಣ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ಹಿಂದುಳಿದ ಸಮಾಜಗಳೂ ಸಹ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಕಳೆದ 4 ವರ್ಷಗಳಿಂದ ನಮ್ಮ ಟ್ರಸ್ಟ್ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಇದಕ್ಕೆ ಕಪರಟ್ಟಿಯ ಬಸವರಾಜ ಸ್ವಾಮಿಗಳು ಕೈಜೋಡಿಸಿದ್ದಾರೆ. ಕೇವಲ ಓಟ್ ಬ್ಯಾಂಕ್ ಆಗಲಿ, ಚುನಾವಣೆಯ ಸಂದರ್ಭವೇನೂ ಇದರಲ್ಲಿ ಇಲ್ಲ. ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಸಮಾಜದ ಒಳಿತಿಗಾಗಿ ಪ್ರವಚನಗಳ ಮೂಲಕ ಸಮಾಜಗಳನ್ನು ಒಂದುಮಾಡಲು ಬಯಸಿದ್ದೇವೆ. ಹಿಂದುಳಿದವರ ಜತೆಗೆ ಎಲ್ಲ ಸಮಾಜಗಳ ಪ್ರಗತಿಗೂ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.ಗಂಗಾಮತಸ್ಥ, ಕೋಳಿ, ಅಂಬಿಗೇರ, ಬೆಸ್ತ, ತಳವಾರ, ಕಬ್ಬಲಿಗ ಜಾತಿಯನ್ನೊಳಗೊಂಡ ಈ ಸಮಾಜದ ಅಭಿವೃದ್ಧಿಗೆ ನಾವೆಲ್ಲರೂ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ಸಮಾಜದ ಪ್ರಮುಖರು ಅನೇಕ ಮನವಿಗಳನ್ನು ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಸಮಾಜದ ಅಶೋತ್ತರಗಳಿಗೆ ಸ್ಪಂದಿಸುತ್ತೇನೆ. ದೇವಸ್ಥಾನ, ಪ್ರಮಾಣಪತ್ರದ ಸಮಸ್ಯೆಗಳಿರಬಹುದು. ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಪರಿಹಾರ ದೊರಕಿಸಿಕೊಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.ಅಂಬಿಗರ ಚೌಡಯ್ಯ ಗುರುಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಹಿಂದುಳಿದವರನ್ನು ಮೇಲೆತ್ತುವ ಕೆಲಸವನ್ನು ಜಾರಕಿಹೊಳಿ ಸಹೋದರರು ಮಾಡುತ್ತಿದ್ದಾರೆ. ನಮ್ಮ ಸಮಾಜಕ್ಕೆ ಆಸರೆಯಾಗಿ ನಿಂತು ತನು, ಮನ, ಧನದಿಂದ ಸಹಕಾರ ನೀಡುತ್ತಿದ್ದಾರೆ. ಸಹೋದರರ ಸಮಾಜಮುಖಿ ಕೆಲಸಗಳನ್ನು ಮುಕ್ತ ಕಂಠದಿಂದ ಕೊಂಡಾಡಿದರು.ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ನಿಜವನ್ನೇ ಹೇಳುತ್ತಿದ್ದವರು ಅಂಬಿಗರ ಚೌಡಯ್ಯನವರು. ಇದ್ದುದ್ದನ್ನೇ ನೇರವಾಗಿ ಹೇಳುತ್ತಿದ್ದ ಚೌಡಯ್ಯನವರನ್ನು ನಿಜ ಶರಣರೆಂದು ಬಸವಣ್ಣನವರ ಕಾಲದಲ್ಲೇ ಕರೆಯುತ್ತಿದ್ದರು. ನಿಜಶರಣರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.ಕಪರಟ್ಟಿ ಮಠದ ಬಸವರಾಜ ಸ್ವಾಮಿಗಳು ಮಾತನಾಡಿ, ಮುಂದಿನ ದಿನಗಳಲ್ಲಿಯೂ ಮಹಾನ್ ಪುರುಷರ ತತ್ವಗಳನ್ನು ಯುವ ಜನಾಂಗಕ್ಕೆ ತಿಳಿಸಿಕೊಡುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.ವಿಧಾನ ಪರಿಷತ್ತಿನ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಮುಂದುವರಿದ ಜಾತಿಯವರಂತೆ ನಮ್ಮ ಸಮಾಜವೂ ಸಹ ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡಿರುವುದು ಸಂತಸ ಹೆಚ್ಚಿಸಿದೆ. ಚೌಡಯ್ಯನವರ ವಚನಗಳನ್ನು ನಿರಂತರವಾಗಿ 30 ದಿನಗಳವರೆಗೆ ಪ್ರತಿ ಹಳ್ಳಿಗಳಿಗೆ ಮುಟ್ಟಿಸಿರುವ ಸ್ವಾಮೀಜಿಯವರ ಕಾರ್ಯವು ಸ್ತುತ್ಯಾರ್ಹ. ಧರ್ಮ ಮತ್ತು ವಿಜ್ಞಾನಗಳೆರಡೂ ಒಂದಾದರೆ ಮಾತ್ರ ಭಾರತ ಮುಂದೆ ಬರಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ಪ್ರಸ್ತಾಪಿಸಿದ ಅವರು, ನಮ್ಮ ಸಮಾಜದ ಜಾಗೃತಿಗಾಗಿ ಶ್ರಮ ಪಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಕೋಳಿ- ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ, ಬಿಜೆಪಿ ಜಿಲ್ಲಾ (ಗ್ರಾ) ಅಧ್ಯಕ್ಷ ಸುಭಾಸ ಪಾಟೀಲ, ಬೆಮುಲ್ ನಿರ್ದೇಶಕರಾದ ಮಲ್ಲು ಪಾಟೀಲ, ಬಸವರಾಜ ಮಾಳೇದವರ, ಗಂಗಾಮತಸ್ಥ ಸಮಾಜದ ತಾಲೂಕಾಧ್ಯಕ್ಷ ಮುದುಕಪ್ಪ ತಳವಾರ, ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಬಿ.ಬಿ.ಹೊಸಮನಿ, ಕೃಷ್ಣಾ ನಾಶಿ, ತಿಮ್ಮಣ್ಣ ದಡ್ಡಗೋಳ, ಲಕ್ಷ್ಮಣ ದಡ್ಡಗೋಳ, ಬಿಇಒ ಪ್ರಕಾಶ ಹಿರೇಮಠ, ನಾಗಪ್ಪ ಅಂಬಿ, ಲಕ್ಷ್ಮಣ ಯಮಕನಮರಡಿ, ಆನಂದ ಹಿರಿಹೋಳಿ, ಕಾಶಪ್ಪ ಕೋಳಿ, ಪುಂಡಲೀಕ ಸುಂಕದ, ಬಸು ಮೋತ್ಯಾಗೋಳ, ಅಶೋಕ ದಡ್ಡಗೋಳ, ಗೋಕಾಕ ಮತ್ತು ಮೂಡಲಗಿ ತಾಲೂಕಿನ ಗಂಗಾಮತಸ್ಥ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.ಒಗ್ಗಟ್ಟಿನಿಂದ ಹೋರಾಡಿದ್ರೆ ಮಾತ್ರ ಸೌಲಭ್ಯ
ಕನ್ನಡಪ್ರಭ ವಾರ್ತೆ ಮೂಡಲಗಿ ಹಿಂದುಳಿದ ಗಂಗಾಮತಸ್ಥ ಸಮಾಜದವರು ಒಗ್ಗಟ್ಟಿನ ಮಂತ್ರ ಜಪಿಸಿದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕೇವಲ ನಾವು ಹಿಂದುಳಿದವರು ಎಂದ ಮಾತ್ರಕ್ಕೆ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ಏಕತೆಯಿಂದ ಹೋರಾಡಿದರೆ ಮಾತ್ರ ಸೌಲಭ್ಯಗಳು ಸಿಗುತ್ತವೆ. ಈ ದಿಸೆಯಲ್ಲಿ ಸಮಾಜ ಬಾಂಧವರು ಒಗ್ಗಟ್ಟಿನ ಹೋರಾಟಕ್ಕೆ ಮುನ್ನುಡಿ ಬರೆಯಬೇಕಿದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.