ಕನ್ನಡಪ್ರಭ ವಾರ್ತೆ ಖಾನಾಪುರ: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದ ಪಟ್ಟಣದ ಯುವಕನೊಬ್ಬ ಸ್ನೇಹಿತನಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ನೇಪಾಳದಲ್ಲಿ ನಡೆದಿದೆ.

ನೇಪಾಳಕ್ಕೆ ತೆರಳಿದ್ದ ಪಟ್ಟಣದ ಮುಸ್ಲಿಂ ನಿಂಗಾಪುರ ಗಲ್ಲಿಯ ನಿವಾಸಿ ಸಾಹಿಲ್ ರಿಯಾಜ್ ಅಹ್ಮದ್ ಮೊಮೀನ್(25) ಎಂಬ ಯುವಕನ ಹತ್ಯೆ ಮಾಡಲಾಗಿದೆ. ಒಂದೇ ಕೊಠಡಿಯಲ್ಲಿ ವಾಸವಾಗಿದ್ದ ರೂಮ್‌ಮೇಟ್ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸಾಹಿಲ್ ಮೊಮೀನ್ ಕೆಲ ವರ್ಷಗಳ ಕಾಲ ದುಬೈನಲ್ಲಿ ಹಾಗೂ ಬಳಿಕ ಥೈಲ್ಯಾಂಡ್‌ನಲ್ಲಿ ಉದ್ಯೋಗ ಮಾಡುತ್ತಿದ್ದರು. ಸುಮಾರು 25 ದಿನಗಳ ಹಿಂದೆ ಅವರು ನೇಪಾಳದ ಝಾಪಾ ಜಿಲ್ಲೆಯ ದಮಕದಲ್ಲಿರುವ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಅವರು ಸದ್ದಾಂ ಹುಸೇನ್ ಎಂಬ ವ್ಯಕ್ತಿಯೊಂದಿಗೆ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಘಟನೆಯ ಹಿಂದಿನ ದಿನ ಸಾಹಿಲ್ ಬೆಳಗಾವಿಯ ತಮ್ಮ ಸ್ನೇಹಿತನೊಬ್ಬನನ್ನು ಅದೇ ಹೊಟೇಲ್‌ನಲ್ಲಿ ಉದ್ಯೋಗಕ್ಕಾಗಿ ಕರೆಸಿಕೊಂಡಿದ್ದರು. ರಾತ್ರಿ ಮೂವರೂ ಒಂದೇ ಕೊಠಡಿಯಲ್ಲಿ ಮಲಗಿದ್ದ ವೇಳೆ ಸಾಹಿಲ್ ಮತ್ತು ಸದ್ದಾಂ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಸ್ನೇಹಿತ ಮಧ್ಯಸ್ಥಿಕೆ ವಹಿಸಿ ಜಗಳವನ್ನು ಶಾಂತಗೊಳಿಸಿದ್ದರೂ, ಮುಂಜಾನೆ ವೇಳೆ ನಿದ್ರೆಯಲ್ಲಿದ್ದ ಸಾಹಿಲ್ ಮೇಲೆ ಸದ್ದಾಂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಸಾಹಿಲ್ ಕಿರುಚಾಟ ಕೇಳಿ ಸ್ನೇಹಿತ ಆರೋಪಿಯನ್ನು ಹಿಡಿಯಲು ಯತ್ನಿಸಿದರೂ, ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಾಹಿಲ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಾಹಿಲ್ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬದವರು ಅಂಜುಮನ್-ಎ-ಇಸ್ಲಾಂ ತಾಲೂಕು ಅಧ್ಯಕ್ಷ ಇರ್ಫಾನ್ ತಾಳಿಕೋಟಿ ಮೂಲಕ ಬೆಳಗಾವಿ ಜಿಲ್ಲಾ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ, ನೇಪಾಳ ಪೊಲೀಸರ ಸಂಪರ್ಕದಲ್ಲಿದ್ದು, ಅಗತ್ಯ ಕಾನೂನು ಪ್ರಕ್ರಿಯೆ ನಡೆಸಲು ಪ್ರಯತ್ನಿಸುತ್ತಿದ್ದಾರೆ.