ಕನ್ನಡಪ್ರಭ ವಾರ್ತೆ ಬೆಳಗಾವಿ 28 ವರ್ಷದ ಗೃಹಿಣಿಯೊಬ್ಬಳು ತನ್ನ ಮೂರು ವರ್ಷದ ಮಗನೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪೀರನವಾಡಿ ಗ್ರಾಮದ ಪಾಟೀಲ ಗಲ್ಲಿಯಲ್ಲಿ ನಡೆದಿದೆ. ಮೃತಳನ್ನು ಪ್ರೇಮಾ ನಾಗೇಶ ತಳವಾರ (28) ಹಾಗೂ ಅವರ ಮೂರು ವರ್ಷದ ಪುತ್ರ ಭುವನ್ ಎಂದು ಗುರುತಿಸಲಾಗಿದೆ.ಗಂಡನ ಮನೆಯವರಿಂದ ಸಾಲದ ವಿಚಾರವಾಗಿ ನಿರಂತರ ಮಾನಸಿಕ ಕಿರುಕುಳ ನೀಡಲಾಗಿದ್ದು, ಅದರಿಂದ ಮನನೊಂದ ಮಹಿಳೆ ಈ ಕೃತ್ಯಕ್ಕೆ ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

28 ವರ್ಷದ ಗೃಹಿಣಿಯೊಬ್ಬಳು ತನ್ನ ಮೂರು ವರ್ಷದ ಮಗನೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪೀರನವಾಡಿ ಗ್ರಾಮದ ಪಾಟೀಲ ಗಲ್ಲಿಯಲ್ಲಿ ನಡೆದಿದೆ. ಮೃತಳನ್ನು ಪ್ರೇಮಾ ನಾಗೇಶ ತಳವಾರ (28) ಹಾಗೂ ಅವರ ಮೂರು ವರ್ಷದ ಪುತ್ರ ಭುವನ್ ಎಂದು ಗುರುತಿಸಲಾಗಿದೆ.ಗಂಡನ ಮನೆಯವರಿಂದ ಸಾಲದ ವಿಚಾರವಾಗಿ ನಿರಂತರ ಮಾನಸಿಕ ಕಿರುಕುಳ ನೀಡಲಾಗಿದ್ದು, ಅದರಿಂದ ಮನನೊಂದ ಮಹಿಳೆ ಈ ಕೃತ್ಯಕ್ಕೆ ಮುಂದಾಗಿದ್ದಾರೆ. ಪ್ರೇಮಾ ಅವರ ಅತ್ತೆ ಹಾಗೂ ಕುಟುಂಬ ಸದಸ್ಯರು ಸಹಕಾರ ಸಂಘದಲ್ಲಿ ಸುಮಾರು ₹10 ಲಕ್ಷ ಸಾಲ ಮಾಡಿದ್ದರು. ಆ ಸಾಲವನ್ನು ತೀರಿಸುವಂತೆ ಪ್ರೇಮಾ ಅವರ ಮೇಲೆ ನಿರಂತರ ಒತ್ತಡ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಈ ಕಿರುಕುಳವನ್ನು ಸಹಿಸಲಾಗದೆ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಪುತ್ರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಸಂಬಂಧ ಮೃತೆಯ ಕುಟುಂಬಸ್ಥರು ಅತ್ತೆ ಸುಶೀಲಾ ತಳವಾರ, ಪತಿ ನಾಗೇಶ ತಳವಾರ, ಮೈದುನ ಪರಶುರಾಮ ತಳವಾರ, ನಾದಿನಿ ಸಂಗೀತಾ ತಳವಾರ, ಮರೆವ್ವಾ ತಳವಾರ ಹಾಗೂ ಶಾರದಾ ಕಲಕಾಂವಕರ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮೃತಳ ಕುಟುಂಬಸ್ಥರು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ಆಗಮಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಗಳ ಸಾವಿಗೆ ಅತ್ತೆ ಹಾಗೂ ಆಕೆಯ ಕುಟುಂಬಸ್ಥರೇ ಕಾರಣ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ವೇಳೆ ಮೃತಳ ಅತ್ತೆ ಸುಶೀಲಾ ತಳವಾರ ಆಸ್ಪತ್ರೆ ಆವರಣಕ್ಕೆ ಆಗಮಿಸುತ್ತಿದ್ದಂತೆ ರೊಚ್ಚಿಗೆದ್ದ ಕುಟುಂಬಸ್ಥರು ಹಲ್ಲೆಗೆ ಯತ್ನಿಸಿದರು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಯಂತ್ರಿಸಿದರು. ಶವಾಗಾರದ ಮುಂದೆ ಮೃತಳ ಪೋಷಕರು ಹಾಗೂ ಸಂಬಂಧಿಕರು ಕಣ್ಣೀರು ಹಾಕುತ್ತಾ, ಮಗಳ ಸಾವಿಗೆ ನ್ಯಾಯ ದೊರೆಯಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.